Advertisement

ಗದಗ:  ಜಿಲ್ಲೆಯ ದಶಕಗಳ ಬೇಡಿಕೆಗಳಿಗೆ ರೆಕ್ಕೆ-ಪುಕ್ಕ

07:21 PM Jul 29, 2021 | Team Udayavani |

ವರದಿ: ವೀರೇಂದ್ರ ನಾಗಲದಿನ್ನಿ

Advertisement

ಗದಗ: ರಾಜ್ಯ ಸರಕಾರದಲ್ಲಿ ಬದಲಾದ ರಾಜಕೀಯ ಬೆಳವಣಿಗೆಯಿಂದ 30ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿರುವ ಬೆನ್ನಲ್ಲೇ, ಈ ಭಾಗದ ದಶಕಗಳ ಬೇಡಿಕೆಗಳಿಗೆ ರೆಕ್ಕೆ-ಪುಕ್ಕ ಬಂದಿದ್ದು, ಸಾರ್ವಜನಿಕರ ನಿರೀಕ್ಷೆಗಳು ಗರಿ ಬಿಚ್ಚಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರೆಯ ಹಾವೇರಿ ಜಿಲ್ಲೆಯವರೇ ಆಗಿದ್ದರೂ, ಈ ಭಾಗದಿಂದ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ಎರಡು ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. ಹೀಗಾಗಿ ಗದಗ ಜಿಲ್ಲೆಯ ಜನರ ಸಮಸ್ಯೆಗಳನ್ನು ಅತ್ಯಂತ ಹತ್ತಿರದಿಂದ ಕಂಡಿದ್ದಾರೆ.

ಜನರ ದುಃಖ-ದುಮ್ಮಾನಗಳನ್ನು ಬಲ್ಲವರಾಗಿದ್ದಾರೆ. ಹೀಗಾಗಿ, ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅವ ಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಹೊಸ ಯೋಜನೆಗಳ ಕನಸು ಚಿಗುರೊಡೆದಿದೆ.

ಮುಖ್ಯಮಂತ್ರಿಗೆ ಮಹಾದಾಯಿ ಸವಾಲು: ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಜನರ ದಾಹ ನೀಗಿಸಲು ದಶಕಗಳ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹದಾಯಿ ನೀರಿಗಾಗಿ ಬೃಹತ್‌ ಹೋರಾಟ ನಡೆದಿತ್ತು. ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಅಳಗವಾಡಿಯಿಂದ ನರಗುಂದ ಪಾತ್ರೆ ನಡೆಸಿ, ರಕ್ತದಲ್ಲಿ ಪತ್ರ ಚಳವಳಿ ನಡೆಸಿದರು. ಈ ಭಾಗದ ಜನರಲ್ಲಿ ಜಾಗೃತಿ ಮೂಡಿಸಿದರು. ಜತೆಗೆ ತಾವು ಅ ಧಿಕಾರಕ್ಕೆ ಬಂದರೆ, ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು. ಆ ಮೂಲಕ ರಾಜ್ಯ ರಾಜಕಾಣದಲ್ಲಿ ತಮ್ಮದೇ ಆದ ಶಕ್ತಿ ಪ್ರದರ್ಶಿಸಿದ್ದರು. ಆ ನಂತರ 2006ರಲ್ಲಿ ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಕಳಸಾ ನಾಲೆಗೆ ಅಡಿಗಲ್ಲು ಹಾಕಲಾಯಿತು. ಆದರೆ ಕಾಮಗಾರಿ ವಿಳಂಬದಿಂದ 98 ಕೋಟಿ ರೂ.ಗಳಿದ್ದ ಕಾಮಗಾರಿ ವೆಚ್ಚ 210 ಕೋಟಿ ರೂ.ಗೆ ತಲುಪಿದೆಯಾದರೂ, 5 ಕಿ.ಮೀ. ಉದ್ದದ ನಾಲಾ ಕಾಮಗಾರಿ ಇಂದಿಗೂ ಪೂರ್ಣಗೊಂಡಿಲ್ಲ ಎಂಬುದು ನೋವಿನ ಸಂಗತಿ. ಈ ನಡುವೆ 2018ರ ಆಗಸ್ಟ್‌ 14ರಂದು ಮಹದಾಯಿ ನ್ಯಾಯಾ ಧಿಕರಣ ನದಿ ನೀರು ಹಂಚಿಕೆ ಮಾಡಿದ್ದು, 13.5 ಟಿಎಂಸಿ ನೀರು ಕರ್ನಾಟಕದ ಪಾಲಿಗೆ ಲಭಿಸಿದೆ. ಅದರಲ್ಲಿ 5.40 ಟಿಎಂಸಿ ನೀರು ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಲಪ್ರಭೆಗೆ ಹರಿಸಲಾಗುತ್ತದೆ.

2020-21ನೇ ಸಾಲಿನಲ್ಲಿ 1670 ಕೋಟಿ ರೂ.ಗೆ ಬಜೆಟ್‌ನಲ್ಲಿ ಮಂಜೂರಾತಿ ನೀಡಿದ್ದು, ಮಹದಾಯಿ ಯೋಜನೆ ಕಾಮಗಾರಿಗೆ 500 ಕೋಟಿ ರೂ. ತೆಗೆದಿರಿಸಿದೆ. ಕಾಮಗಾರಿ ಆರಂಭಿಸುವ ಜತೆಗೆ ಯೋಜನೆಯ ಕೊನೆಯ ಗ್ರಾಮಕ್ಕೆ ಮಲಪ್ರಭೆ ಹರಿಸಲು ಕಾಲುವೆ, ಉಪ ಕಾಲುವೆಗಳ ನಿರ್ಮಾಣ, ದುರಸ್ತಿಗೆ ಕ್ರಮ ವಹಿಸಬೇಕಿದೆ. ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗೆ ಕನಿಷ್ಠ 2 ಸಾವಿರ ಕೋಟಿ ರೂ. ಒದಗಿಸಬೇಕಿದೆ. ಈ ಮೂಲಕ ದಶಕಗಳ ಹಿಂದೆ ತಾವೇ ನಡೆಸಿದ್ದ ಮಹಾದಾಯಿ ಜಾಗೃತಿಯನ್ನು ಸಾಕಾರಗೊಳಿಸಬೇಕು ಎಂಬುದು ಮಹದಾಯಿ ಹೋರಾಟಗಾರರ ಒತ್ತಾಯ

Advertisement

. ಕೃಷ್ಣಾ “ಬಿ’ ಸ್ಕೀಂ ಜಾರಿಗೊಳಿಸಿ: ರೋಣ-ಗಜೇಂದ್ರಗಡ ಭಾಗಕ್ಕೆ ನೀರಾವರಿ ಒದಗಿಸುವ ಕೃಷ್ಣಾ “ಬಿ’ ಸ್ಕೀಂ ಯೋಜನೆ ಜಾರಿಗೊಳಿಸಬೇಕು. ಜತೆಗೆ ಜಿಲ್ಲೆಯ ವಿವಿಧ 9 ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕನಿಷ್ಠ 5 ಸಾವಿರ ಕೋಟಿ ರೂ. ಅನುದಾನ ಘೋಷಿಸಬೇಕು. ಈ ಮೂಲಕ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯಗಳನ್ನು ಹೆಚ್ಚಿಸಿ, ಕೃಷಿ ಚಟುವಟಿಕೆಗಳಿಗೆ ಒತ್ತು ನೀಡಬೇಕು ಎಂಬುದು ಜಿಲ್ಲೆಯ ರೈತಾಪಿ ಜನರ ಒಕ್ಕೊರಲ ಆಗ್ರಹ. ಆಹಾರ ಸಂಸ್ಕರಣಾ ಘಟಕಗಳಿಗೆ ಒತ್ತು ನೀಡಿ: ಒಂದು ಜಿಲ್ಲೆ-ಒಂದು ಬೆಳೆ ಯೋಜನೆಯಡಿ ಬ್ಯಾಡಗಿ ಮೆಣಸಿನಕಾಯಿ ಜಾರಿಗೊಳಿಸಲಾಗುತ್ತಿದೆ. ಬ್ಯಾಡಗಿ ಮೆಣಸಿನಕಾಯಿ, ಹೆಸರು, ಕಡಲೆ, ಈರುಳ್ಳಿ ಜಿಲ್ಲೆಯ ಪ್ರಧಾನ ಬೆಳೆಗಳಾಗಿವೆ. ಪ್ರತಿ ವರ್ಷ ಗರಿಷ್ಠ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಸ್ಥಳೀಯ ಕೃಷಿ ಉತ್ಪನ್ನಗಳನ್ನು ಆಧರಿಸಿ, ಕೃಷಿ ಆಧಾರಿತ ಆಹಾರ ಸಂಸ್ಕರಣ ಘಟಕಗಳನ್ನು ಒಳಗೊಂಡಂತೆ ಫುಡ್‌ ಪಾರ್ಕ್‌ ಸ್ಥಾಪಿಸಬೇಕು. ಟೆಕ್ಸ್‌ಟೈಲ್‌ ಪಾರ್ಕ್‌ಗೆ ಒತ್ತಾಯ: ಇಲ್ಲಿನ ಬೆಟಗೇರಿ, ಶಿಗ್ಲಿ ಮತ್ತು ಗಜೇಂದ್ರಗಡ ನೇಕಾರರಿಗೆ ಹೆಸರುವಾಸಿಯಾಗಿವೆ. ಈ ಭಾಗದ ಸಾವಿರಾರು ಕುಟುಂಬಗಳು ನೇಕಾರಿಕೆಯನ್ನೇ ಅಲವಂಬಿಸಿದ್ದು, ಇಲ್ಲಿ ಸಿದ್ಧವಾಗುವ ಸೀರೆ ಮತ್ತಿತರೆ ಜವಳಿ ಉತ್ಪನ್ನಗಳು ರಾಜ್ಯ ಹಾಗೂ ದೇಶದ ವಿವಿಧೆಡೆ ರಫ್ತಾಗುತ್ತವೆ.

ನೇಕಾರಿಕೆಯನ್ನು ಮತ್ತಷ್ಟು ಉತ್ತೇಜಿಸಲು ಬೆಟಗೇರಿ ಸಮೀಪದ ನರಸಾಪುರದಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪಿಸಬೇಕೆಂಬುದು ದಶಕಗಳ ಬೇಡಿಕೆಯಾಗಿದೆ. ಜಿಲ್ಲೆಗೆ ಬೇಕಿದೆ ಟೂರಿಸಂ ಕಾರಿಡಾರ್‌: ವಿಶ್ವವಿಖ್ಯಾತ ಲಕ್ಕುಂಡಿ ಗ್ರಾಮವನ್ನು ಹಂಪಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಸರಕಾರದ ಚಿಂತನೆ ಕಾರ್ಯರೂಪಕ್ಕೆ ಬರಬೇಕಿದೆ. 2017ರ ಬಜೆಟ್‌ನಲ್ಲಿ ಲಕ್ಕುಂಡಿ ಅಭಿವೃದ್ಧಿ ಪ್ರಾ ಧಿಕಾರ ಜಾರಿಗೊಳಿಸಬೇಕು. ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಇಕೋ ಟೂರಿಸಂ ಜಾರಿಗೊಳಿಸಬೇಕು. ಜತೆಗೆ ಜಿಲ್ಲೆಯ ಪ್ರಮುಖ ಐತಿಹಾಸಿಕ-ಪ್ರವಾಸಿ ತಾಣಗಳನ್ನು ಸಂಪರ್ಕಿಸಿ, ಟೂರಿಸಂ ಕಾರಿಡಾರ್‌ ಯೋಜನೆ ರೂಪಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next