Advertisement

Gadag: ಸಿಬಂದಿ ಕೊರತೆಯಿಂದ ಸೊರಗಿದ ಪಶು ಇಲಾಖೆ- ರೈತರಿಗೆ ತಪ್ಪದ ಅಲೆದಾಟ

05:35 PM Dec 08, 2023 | Team Udayavani |

ಗದಗ: ಪಶುಗಳಿಗೆ ಚಿಕಿತ್ಸೆ ನೀಡಬೇಕಾದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಸಿಬ್ಬಂದಿ ಕೊರತೆಯಿಂದ ಸೊರಗಿದೆ. ಮಂಜೂರಾದ ಒಟ್ಟು ಹುದ್ದೆಗಳಲ್ಲಿ ಶೇ.65 ಹುದ್ದೆಗಳು ಖಾಲಿಯಿದ್ದು, ಜಿಲ್ಲೆಯ ರೈತರು, ಪಶುಗಳು ತೊಂದರೆ ಅನುಭವಿಸುವಂತಾಗಿದೆ.

Advertisement

ರೈತರು ಪ್ರಮುಖವಾಗಿ ಒಕ್ಕಲುತನ, ಹೈನುಗಾರಿಕೆ, ಕುರಿ ಸಾಕಾಣಿಕೆ ನಡೆಸುತ್ತಿದ್ದಾರೆ. ರೈತರು ಜಾನುವಾರು ಮತ್ತು ಕುರಿ-ಮೇಕೆಗಳ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಪಶು ಇಲಾಖೆಯಲ್ಲಿ ಪ್ರತಿವರ್ಷ ಒಂದೊಂದಾಗಿ ಹೊಸ ಯೋಜನೆಗಳು ಸೇರ್ಪಡೆಯಾಗುತ್ತಿವೆ.

ಇರುವ ಸಿಬ್ಬಂದಿಯೇ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕಾದ ಹೊಣೆ ಹೊತ್ತಿದ್ದಾರೆ. ಆದರೆ, ಹೆಚ್ಚಿನ ಕೆಲಸದ ಒತ್ತಡದ ಪರಿಣಾಮ ಅವುಗಳನ್ನು ಸಕಾಲಕ್ಕೆ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ರೈತರಿಗೆ, ಕೃಷಿ ಕಾರ್ಮಿಕರಿಗೆ ಸಮರ್ಪಕ ಸೇವೆ ಒದಗಿಸಲಾಗುತ್ತಿಲ್ಲ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಜಿಲ್ಲೆಯಲ್ಲಿ 384 ಸರ್ಕಾರಿ ಮಂಜೂರಾತಿ ಹುದ್ದೆಗಳಿದ್ದು ಕೇವಲ 121 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 263 ಹುದ್ದೆಗಳು ಖಾಲಿ ಉಳಿದಿವೆ. ಜಿಲ್ಲೆಯು ಕಳೆದ 10 ವರ್ಷಗಳಿಂದ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಅನುಭವಿಸುತ್ತಿದೆ.

ವರ್ಷದಲ್ಲಿ ನಾಲ್ಕು ಬಾರಿ ಲಸಿಕೆ ಅಭಿಯಾನ ನಡೆಸುವುದು, ಸಭೆಗಳಿಗೆ ಹಾಜರಾಗಿ ಜನಪ್ರತಿನಿಧಿಗಳಿಗೆ ಮಾಹಿತಿ ಒದಗಿಸುವುದು, ಆಕಸ್ಮಿಕವಾಗಿ ಕುರಿ, ಮೇಕೆ, ಜಾನುವಾರು ಮೃತಪಟ್ಟರೆ ಮಹಜರ್‌ ನಡೆಸಿ ವರದಿ ನೀಡುವುದು ಸೇರಿ ವಿಮೆ ದೃಢೀಕರಣ
ಕೆಲಸವನ್ನು ವೈದ್ಯರು ಮಾಡಬೇಕಾಗಿದೆ. ಹಿರಿಯ ಪಶು ವೈದ್ಯಕೀಯ ಪರೀಕ್ಷಕರು ಲಸಿಕಾ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

10 ಹುದ್ದೆಗಳು ಖಾಲಿ: ಕಳೆದ 2ರಿಂದ 3 ವರ್ಷಗಳ ಅವ ಧಿಯಲ್ಲಿ ಕೋವಿಡ್‌ ಸೇರಿ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದಾರೆ. ನಿವೃತ್ತಿ, ವರ್ಗಾವಣೆ ಸೇರಿ ಜಿಲ್ಲೆಯಲ್ಲಿ 10 ಹುದ್ದೆಗಳು ಖಾಲಿಯಾಗಿವೆ. ಒಬ್ಬರು ಮಾತ್ರ ಬೇರೆ ಜಿಲ್ಲೆಯಿಂದ ವರ್ಗಾವಣೆಗೊಂಡು ಆಗಮಿಸಿದ್ದಾರೆ ಎಂದು ಪಶುಪಾಲನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ| ಎಚ್‌.ಬಿ. ಹುಲಗಣ್ಣವರ “ಉದಯವಾಣಿ’ಗೆ ಮಾಹಿತಿ ನೀಡಿದರು.

Advertisement

ಎಷ್ಟಿವೆ?: ಗದಗ ತಾಲೂಕಿನಲ್ಲಿ 27, ಶಿರಹಟ್ಟಿ 13, ರೋಣ 23, ಮುಂಡರಗಿ 16 ಹಾಗೂ ನರಗುಂದ ತಾಲೂಕಿನಲ್ಲಿ 9 ಸೇರಿ ಒಟ್ಟು 88 ಪಶು ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಿವೆ. ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಜರ್ಸಿ ಹಸುಗಳು ಹಾಗೂ ಎಮ್ಮೆಗಳನ್ನು ಸಾಕುತ್ತಾರೆ. ಸದ್ಯ ಚಳಿಗಾವಿದ್ದು, ಬದಲಾಗುತ್ತಿರುವ ವಾತಾವರಣದಿಂದ ಜಾನುವಾರುಗಳು ಹಾಗೂ ಕುರಿ-ಮೇಕೆಗಳು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿವೆ. ಪಶು ಚಿಕಿತ್ಸಾ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಹೈನುಗಾರರು ಒಂದೆಡೆಯಿಂದ ಮತ್ತೂಂದೆಡೆಗೆ ಅಲೆದಾಡುವಂತಾಗಿದೆ.
ಮಾಯಪ್ಪ ಟೆಂಗಿನಕಾಯಿ, ಕಳಸಾಪುರ ಗ್ರಾಮದ ರೈತ

ವರ್ಷದಿಂದ ವರ್ಷಕ್ಕೆ ವೈದ್ಯರ ಕೊರತೆ ಕಾಡುತ್ತಿದೆ. ಈಗಾಗಲೇ ರಾಜ್ಯದ ಪಶುಪಾಲನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿ 400 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆ ಪೈಕಿ ಕನಿಷ್ಟ 25 ಹುದ್ದೆಗಳನ್ನು ಜಿಲ್ಲೆಗೆ ನೀಡುವಂತೆ ಸಚಿವರಲ್ಲಿ ಮನವಿ ಮಾಡಲಾಗಿದೆ.
ಡಾ| ಎಚ್‌.ಬಿ. ಹುಲಗಣ್ಣವರ,
ಉಪನಿರ್ದೇಶಕ, ಪಶುಪಾಲನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ

*ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next