Advertisement

Gadag:ಉದ್ಘಾಟನೆಗೊಂಡರೂ ಬಳಕೆಗೆ ಬಾರದ ಈಜುಗೊಳ- 1 ಕೋಟಿ ರೂ. ವೆಚ್ಚ

06:08 PM Nov 06, 2023 | Team Udayavani |

ಗದಗ: ಬೆಟಗೇರಿಯ ವಸಂತಸಿಂಗ್‌ ಜಮಾದಾರ ನಗರದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಈಜುಕೊಳ ಉದ್ಘಾಟನೆಗೊಂಡು 6 ವರ್ಷ ಕಳೆದರೂ ಸಾರ್ವಜನಿಕರ ಬಳಕೆಗೆ ಲಭ್ಯವಾಗಿಲ್ಲ. ಪರಿಣಾಮ ಸರಿಯಾದ ನಿರ್ವಹಣೆ ಕೊರತೆಯಿಂದ ಈಜುಕೊಳದ ಸುತ್ತಲೂ ಗಿಡಗಂಟಿ ಬೆಳೆದು ಸಂಪೂರ್ಣ ಪಾಳು ಬಿದ್ದಿದೆ.

Advertisement

ಈಜುಕೊಳ ಉದ್ಘಾಟನೆ ನಂತರ ಆರಂಭದಲ್ಲಿ 2 ತಿಂಗಳು ಟ್ಯಾಂಕರ್‌ ಮೂಲಕ ನೀರು ಹಾಕಿ ಈಜುಕೊಳ ಆರಂಭಿಸಲಾಗಿತ್ತು. ಮಧ್ಯಾಹ್ನ ಮಾತ್ರ ಈಜಲು ಅವಕಾಶ ನೀಡಲಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ನೀರು ಲಭ್ಯವಾಗದ ಕಾರಣ ಈಜುಕೊಳ ಹಾಳು ಬೀಳುವಂತಾಗಿದೆ.

ಶಾಸಕರ ಅನುದಾನದಲ್ಲಿ 87 ಲಕ್ಷ ಹಾಗೂ ಇತರೆ ಅನುದಾನದಲ್ಲಿ ಈಜುಕೊಳ ನಿರ್ಮಿಸಲಾಗಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲದೇ, ನೀರಿನ ವ್ಯವಸ್ಥೆ ಇಲ್ಲದೇ ಹಾಳಾಗಿದೆ. ಜತೆಗೆ ಕಟ್ಟಡವು ಸಹ ಐದು ವರ್ಷದಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟಿದೆ. ನಿರ್ವಹಣೆ ಇಲ್ಲದ ಕಾರಣ ಈಜುಕೊಳಕ್ಕೆ ಹಾಕಿದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಉದ್ಘಾಟನೆಗೆ ಸೀಮಿತ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಯೋಜನೆ ಅಡಿಯಲ್ಲಿ 2016-17ನೇ ಸಾಲಿನಲ್ಲಿ ಒಂದು ಕೋಟಿಯಷ್ಟು ಹಣ ಅನುದಾನದೊಂದಿಗೆ 3ನೇ ವಾರ್ಡ್‌ನ ವಸಂತ ನಗರದಲ್ಲಿ ಈ ಈಜುಕೊಳ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡು ಕಾಮಗಾರಿ ಪೂರ್ಣಗೊಂಡು ಮಾರ್ಚ್‌ 5ರ 2019ರಂದು ಲೋಕಾರ್ಪಣೆಗೊಂಡಿದೆ. ಕೇವಲ ಅವತ್ತಿನ ದಿನ ಮಾತ್ರ ಸಾರ್ವಜನಿಕರಿಗೆ ಲಭ್ಯವಾಯಿತು ಮರುದಿನದಿಂದ ಬೀಗ ಹಾಕಲಾಯಿತು. ನಗರಸಭೆಯಿಂದ ಟೆಂಡರ್‌ ಕರೆದು ನಿರ್ವಹಣೆಗೆ ಮುಂದಾಗದಿರುವುದರಿಂದ ಪಾಳು ಬಿದ್ದಿದೆ.

ನಿರ್ವಹಣೆ ಕೊರತೆ:ಈಜುಕೊಳ ಸಂಪೂರ್ಣ ಹಾಳಾಗಿದ್ದು, ಒಳಗಡೆ ಮತ್ತು ಹೊರಗಡೆ ಸುತ್ತಮುತ್ತ ಜಾಲಿಗಿಡಗಳು ಬೆಳೆದಿವೆ. ಈಜುಕೊಳಕ್ಕೆ ಅಳವಡಿಸಿದ ಎಲ್ಲ ಗಾಜುಗಳು ಒಡೆದು ಹೋಗಿವೆ. ಬಾಗಿಲು-ಕಿಟಕಿಗಳು ಸಂಪೂರ್ಣ ಹಾಳಾಗಿವೆ.

Advertisement

25 ಲಕ್ಷಕ್ಕೂ ಅಧಿಕ ಹಣ ಬೇಕು: ಈ ಈಜುಕೊಳ ಸಾರ್ವಜನಿಕರ ಸೇವೆಗೆ ಲಭ್ಯವಾಗಬೇಕಾದರೆ ಅದರ ದುರಸ್ತಿಗೆ ಸುಮಾರು 25 ಲಕ್ಷಕ್ಕೂ ಅ ಧಿಕ ಹಣ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಗದಗ-ಬೆಟಗೇರಿ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿ ಗಳು ಎಚ್ಚೆತ್ತುಕೊಂಡು ಈಜುಕೊಳ ಸಾರ್ವಜನಿಕರ ಸೇವೆಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

ಬೆಟಗೇರಿಯ ವಸಂತಸಿಂಗ್‌ ಜಮಾದಾರ ನಗರದ ಈಜುಕೊಳ ಸರಿಯಾದ ನಿರ್ವಹಣೆ ಇಲ್ಲದೇ ಈಜುಕೊಳ ಪಾಳು ಸ್ಥಿತಿಯಲ್ಲಿದೆ. ಮೋಟರ್‌ ಗಳು ಕಳ್ಳತನವಾಗಿವೆ. ವೆಂಟಿಲೇಟರ್‌, ಟೈಲ್ಸ್‌ ಒಡೆದು ಹೋಗಿವೆ. ಬಾಗಿಲುಗಳು ಕಿತ್ತು ಹೋಗಿವೆ. ಜಿಲ್ಲಾ ಉಸ್ತುವಾರಿ ಎಚ್‌.ಕೆ. ಪಾಟೀಲ ಅವರ ಗಮನಕ್ಕೆ ತರಲಾಗಿದ್ದು, ಈಜುಕೊಳ ಪುನರುಜ್ಜೀವನ ಕಾರ್ಯ ಆರಂಭಿಸಲಾಗುವುದು.
*ಹನಮಂತ ಬಂಡಿವಡ್ಡರ, ಗದಗ-ಬೆಟಗೇರಿ ನಗರಸಭೆ ಎಇಇ

ಬೆಟಗೇರಿ ಭಾಗದಲ್ಲಿರುವ ಈಜುಕೊಳ ಸಂಪೂರ್ಣ ಹಾಳಾಗಿದ್ದು, ಅದರ ಒಳಗಡೆ ಮತ್ತು ಹೊರಗಡೆ ಕಸ ಬೆಳೆದು, ಅದರಲ್ಲಿಯ ಬಾಗಿಲು ಕಿಟಕಿಗಳ ಗ್ಲಾಸ್‌ ಒಡೆದು ಹಾಳಾಗಿದೆ. ಈ ಭಾಗದ ಜನರಿಗೆ ಅನುಕೂಲಕ್ಕಾಗಿ 1ಕೋಟಿ ರೂ.ಖರ್ಚು ಮಾಡಿ ನಿರ್ಮಿಸಿರುವ ಈಜುಕೊಳ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಅ ಧಿಕಾರಿಗಳು ದುರಸ್ತಿಗೊಳಿಸಿ ಸಾರ್ವಜನಕರ ಉಪಯೋಗಕ್ಕೆ ನೀಡಬೇಕು.
*ಸೂರಜ್‌ಸಿಂಗ್‌ ರಜಪೂತ್‌, ವಸಂತಸಿಂಗ್‌
ಜಮಾದಾರ್‌ ನಗರದ ನಿವಾಸಿ.

*ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next