Advertisement

G7 Summit: ಇಟಲಿಯಲ್ಲಿ ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ ಪ್ರಧಾನಿ ಮೋದಿ

05:48 PM Jun 14, 2024 | Team Udayavani |

ರೋಮ್ : ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ಮೋದಿಯವರು ಮೊದಲ ವಿದೇಶ ಪ್ರವಾಸ ಕೈಗೊಂಡಿದ್ದಾರೆ. G7 ಶೃಂಗಸಭೆಗಾಗಿ ಇಟಲಿಯಲ್ಲಿರುವ ಪ್ರಧಾನಿ ಮೋದಿ ಅವರು ಶುಕ್ರವಾರ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಯುಕೆ ಪ್ರಧಾನಿ ರಿಷಿ ಸುನಕ್ ಮತ್ತು ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿ ಪ್ರತ್ಯೇಕ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.

Advertisement

ರಕ್ಷಣ, ಪರಮಾಣು ಮತ್ತು ಬಾಹ್ಯಾಕಾಶ ಕ್ಷೇತ್ರಗಳನ್ನು ಒಳಗೊಂಡಂತೆ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳನ್ನು ಮ್ಯಾಕ್ರನ್ ಮತ್ತು ಮೋದಿ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ರಷ್ಯಾ-ಉಕ್ರೇನ್ ಸಂಘರ್ಷದ ವಿವಿಧ ಅಂಶಗಳ ಕುರಿತು ಝೆಲೆನ್ಸ್ಕಿ ಮೋದಿಯವರಿಗೆ ವಿವರಿಸಿದರು. ರಿಷಿ ಸುನಕ್ ಅವರೊಂದಿಗಿನ ಅವರ ಸಂಕ್ಷಿಪ್ತ ಸಭೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ಕೇಂದ್ರೀಕೃತವಾಗಿತ್ತು ಎಂದು ತಿಳಿದು ಬಂದಿದೆ.

ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಶುಕ್ರವಾರ ಬೆಳಗ್ಗೆ ಇಟಲಿಯ ಅಪುಲಿಯಾಗೆ ತಲುಪಿದರು. ಹಲವಾರು ಇತರ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಮೋದಿ

”ಇಟಲಿಯಲ್ಲಿ ಯುಕೆ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿಯಾದುದು ಸಂತೋಷ ನೀಡಿತು. ಎನ್‌ಡಿಎ ಸರ್ಕಾರದ ಮೂರನೇ ಅವಧಿಯಲ್ಲಿ ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುವ ನನ್ನ ಬದ್ಧತೆಯನ್ನು ನಾನು ಪುನರುಚ್ಚರಿಸಿದೆ. ಸೆಮಿಕಂಡಕ್ಟರ್‌ಗಳು, ತಂತ್ರಜ್ಞಾನ ಮತ್ತು ವ್ಯಾಪಾರದಂತಹ ಕ್ಷೇತ್ರಗಳಲ್ಲಿ ಬಾಂಧವ್ಯವನ್ನು ಗಾಢವಾಗಿಸಲು ಉತ್ತಮ ಅವಕಾಶವಿದೆ. ರಕ್ಷಣ ವಲಯದಲ್ಲಿ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಬಗ್ಗೆಯೂ ಮಾತನಾಡಿದ್ದೇವೆ” ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್ ಮಾಡಿದ್ದಾರೆ.

Advertisement

”ನನ್ನ ಸ್ನೇಹಿತ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಅತ್ಯುತ್ತಮವಾದ ಸಭೆಯನ್ನು ನಡೆಸಿದ್ದೇನೆ. ಇದು ಒಂದು ವರ್ಷದಲ್ಲಿ ನಮ್ಮ ನಾಲ್ಕನೇ ಸಭೆಯಾಗಿದ್ದು, ಬಲವಾದ ಭಾರತ-ಫ್ರೆಂಚ್ ಬಾಂಧವ್ಯಕ್ಕೆ ನಾವು ಆದ್ಯತೆ ನೀಡುತ್ತೇವೆ. ನಮ್ಮ ಮಾತುಕತೆಗಳು ರಕ್ಷಣೆ, ಭದ್ರತೆ, ತಂತ್ರಜ್ಞಾನ, AI, ನೀಲಿ ಆರ್ಥಿಕತೆ ಸೇರಿ ಹಲವಾರು ವಿಷಯಗಳನ್ನು ಒಳಗೊಂಡಿವೆ. ಯುವಕರಲ್ಲಿ ನಾವೀನ್ಯತೆ ಮತ್ತು ಸಂಶೋಧನೆಯನ್ನು ಹೇಗೆ ಪ್ರೋತ್ಸಾಹಿಸಬೇಕು ಎಂಬ ಕುರಿತು ನಾವು ಚರ್ಚಿಸಿದ್ದೇವೆ. ಮುಂದಿನ ತಿಂಗಳು ಆರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನ ಆತಿಥ್ಯಕ್ಕಾಗಿ ನಾನು ನನ್ನ ಶುಭಾಶಯಗಳನ್ನು ತಿಳಿಸಿದ್ದೇನೆ” ಎಂದು ಮೋದಿ ಪೋಸ್ಟ್ ಮಾಡಿದ್ದಾರೆ.

”ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಬಹಳ ಉತ್ಸಾಹದಾಯಕ ಸಭೆ ನಡೆಸಿದೆ. ಉಕ್ರೇನ್ ಜತೆಗಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಭಾರತ ಉತ್ಸುಕವಾಗಿದೆ. ನಡೆಯುತ್ತಿರುವ ಯುದ್ಧದ ಬಗ್ಗೆ ಭಾರತ ಮಾನವ ಕೇಂದ್ರಿತ ವಿಧಾನವನ್ನು ನಂಬುತ್ತದೆ. ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಶಾಂತಿಯ ಮಾರ್ಗ ಕಂಡುಕೊಳ್ಳುವುದನ್ನು ನಂಬುತ್ತದೆ ಎಂದು ಪುನರುಚ್ಚರಿಸಿದ್ದೇನೆ” ಎಂದು ಪೋಸ್ಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next