Advertisement

ಸರ್ವಪಕ್ಷ ಸಭೆಯ ಮೂಲಕ ಜಿ20 ಅಧ್ಯಕ್ಷತೆಗೆ ಶುಭಾರಂಭ

10:42 PM Dec 04, 2022 | Team Udayavani |

ಜಿ20 ದೇಶಗಳ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವ ಭಾರತ ಮುಂದಿನ ವರ್ಷ ಸೆಪ್ಟಂಬರ್‌ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಕಾರ್ಯ ಸೂಚಿಯ ರೂಪಣೆಗಾಗಿ ಕೇಂದ್ರ ಸರಕಾರ ಸೋಮವಾರದಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಜಿ20 ಅಧ್ಯಕ್ಷತೆಯಂತಹ ಮಹತ್ತರ ಹೊಣೆಗಾರಿಕೆಯನ್ನು ನಿಭಾಯಿಸುವ ಸಂದರ್ಭದಲ್ಲಿ ದೇಶದಲ್ಲಿನ ಬಹುತೇಕ ಪ್ರಮುಖ ಪಕ್ಷಗಳ ನಾಯಕರನ್ನು ಕರೆದು ಸಮಾಲೋಚನೆ ನಡೆಸಿ ಕಾರ್ಯಸೂಚಿಯನ್ನು ಸಿದ್ಧಪಡಿಸಲು ಮುಂದಾಗಿರುವ ಕೇಂದ್ರ ಸರಕಾರದ ಈ ನಿರ್ಧಾರ ನಿಜಕ್ಕೂ ಶ್ಲಾಘನೀಯ.

Advertisement

ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಉಪಸ್ಥಿತ ರಿರಲಿದ್ದು, ವಿವಿಧ ಪಕ್ಷಗಳ ನಾಯಕರು ನೀಡಲಿರುವ ಸಲಹೆ ಸೂಚನೆಗಳನ್ನು ಆಲಿಸಲಿರುವರು. ಇವೆಲ್ಲವನ್ನೂ ಕ್ರೋಡೀಕರಿಸಿ ಜಿ20 ಶೃಂಗಸಭೆಯ ಕಾರ್ಯಸೂಚಿಯನ್ನು ಅಂತಿಮಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ.

ಭಾರತದ ಅಧ್ಯಕ್ಷತೆಯ ಅವಧಿಯೂ ಜಾಗತಿಕ ಸಮುದಾಯ ಎದು ರಿಸುತ್ತಿರುವ ಸವಾಲು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜತೆ ಯಲ್ಲಿ ಎಲ್ಲ ರಾಷ್ಟ್ರಗಳೂ ಪ್ರಗತಿ ಪಥದಲ್ಲಿ ಮುನ್ನಡೆಯಲು ಪ್ರೇರಣಾ ದಾಯಿಯಾಗಲಿದೆ ಎಂದು ಅಮೆರಿಕ, ಬ್ರಿಟನ್‌, ಫ್ರಾನ್ಸ್‌ ಆದಿಯಾಗಿ ವಿಶ್ವದ ಬಹುತೇಕ ರಾಷ್ಟ್ರಗಳು ದೃಢ ವಿಶ್ವಾಸವನ್ನು ವ್ಯಕ್ತಪಡಿಸಿವೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತ ಸಶಕ್ತ ಮತ್ತು ಸಮೃದ್ಧ ರಾಷ್ಟ್ರವಾಗಿ ಹೊರಹೊಮ್ಮಿದೆ. ಇಡೀ ಜಗತ್ತು ಆರ್ಥಿಕ ಸಂಕಷ್ಟದ ಪರಿಸ್ಥಿತಿಯನ್ನು ಎದು ರಿಸುತ್ತಿರುವಾಗ ಭಾರತ ಆರ್ಥಿಕವಾಗಿ ವಿಶ್ವದಲ್ಲಿಯೇ ಮುಂಚೂಣಿ ಯಲ್ಲಿದೆ. ಇಂಥ ಸುಸಂದರ್ಭದಲ್ಲಿಯೇ ಭಾರತ ಜಿ20 ರಾಷ್ಟ್ರಗಳ ಅಧ್ಯಕ್ಷತೆ ವಹಿಸಿರುವುದರಿಂದ ಸಹಜವಾಗಿಯೇ ಜಾಗತಿಕ ಸಮುದಾಯ ಭಾರತ ದತ್ತ ಆಶಾವಾದದ ದೃಷ್ಟಿಯನ್ನು ಹರಿಸಿದೆ.

ಈ ನಡುವೆ ಜಿ20 ರಾಷ್ಟ್ರಗಳ ಶೆರ್ಪಾಗಳ ಮೊದಲ ಸಭೆ ಉದಯ ಪುರದಲ್ಲಿ ನಡೆಯುತ್ತಿದೆ. ಜಿ20 ದೇಶಗಳ ನಾಯಕರ ವೈಯಕ್ತಿಕ ಪ್ರತಿನಿಧಿಗಳಾಗಿರುವ ಶೆರ್ಪಾಗಳು ಜಿ20 ಶೃಂಗಸಭೆಗೂ ಮುನ್ನ ಅಧ್ಯಕ್ಷತೆ ವಹಿಸಿರುವ ದೇಶದಲ್ಲಿ ಹಲವಾರು ಸುತ್ತಿನ ಸಮಾಲೋಚನೆಗಳನ್ನು ನಡೆಸಿ ಪರಸ್ಪರ ಬಾಂಧವ್ಯ ವೃದ್ಧಿಗೆ ಪೂರಕವಾದ ನಿರ್ಧಾರಗಳನ್ನು ಕೈಗೊಳ್ಳುವುದರ ಜತೆಯಲ್ಲಿ ಶೃಂಗಸಭೆಯ ಕಾರ್ಯಸೂಚಿಗೆ ಅಂತಿಮ ರೂಪುರೇಷೆ ನೀಡಲಿದ್ದಾರೆ. ಇದೇ ವೇಳೆ ದೇಶಕ್ಕೆ ಭೇಟಿ ನೀಡಲಿರುವ ಜಿ20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳಿಗೆ ದೇಶದ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಪರಿಚಯಿಸಲು ಸರಕಾರ ತೀರ್ಮಾನಿಸಿದೆ. ಇದು ಪ್ರವಾಸೋದ್ಯಮದ ಪ್ರಗತಿಗೆ ಪೂರಕವಾಗಲಿದೆಯಲ್ಲದೆ ಇನ್ನಷ್ಟು ಅಭಿ ವೃದ್ಧಿ ಸಾಧ್ಯತೆಗಳ ಬಗೆಗೆ ವಿದೇಶಿ ನಾಯಕರೊಂದಿಗೆ ವಿಚಾರವಿಮರ್ಶೆ ನಡೆಸಲು ಅವಕಾಶ ಕಲ್ಪಿಸಿಕೊಡಲಿದೆ.

“ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಧ್ಯೇಯವಾಕ್ಯದೊಂದಿಗೆ ಭಾರತ ತನ್ನ ಜಿ20 ಅಧ್ಯಕ್ಷತೆಯನ್ನು ನಿರ್ವ ಹಿಸಲಿದ್ದು ತನ್ಮೂಲಕ ಇಡೀ ವಿಶ್ವವನ್ನು ಒಂದು ಕುಟುಂಬದಂತೆ ಕಾಣುವ ಸದಾಶಯವನ್ನು ಪ್ರಚುರಪಡಿಸಲು ಮುಂದಾಗಿದೆ. ಅಧ್ಯಕ್ಷತೆಯನ್ನು ವಹಿಸಿಕೊಂಡ ಸಂದರ್ಭದಲ್ಲಿ ಪ್ರಧಾನಿ ಪ್ರತಿಪಾದಿಸಿದಂತೆ ಮಾನವ ಕೇಂದ್ರಿತ ಜಾಗತೀಕರಣದ ಹೊಸ ಮಾದರಿಯನ್ನು ಪರಿಚಯಿಸುವ ಸಂಕಲ್ಪವನ್ನು ಕಾರ್ಯರೂಪಕ್ಕೆ ತರಲು ಭಾರತ ಸಜ್ಜಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next