Advertisement

ಶ್ರೀನಗರದಲ್ಲಿ G 20 ಸಭೆ: ವಿಪಕ್ಷಗಳ ಅಪಸ್ವರ ಖಂಡನೀಯ

08:40 PM May 12, 2023 | Team Udayavani |

ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ಜಮ್ಮು ಮತ್ತು ಕಾಶ್ಮೀರ ಈಗ ಹೂಡಿಕೆದಾರರನ್ನೂ ತನ್ನತ್ತ ಸೆಳೆಯಲಾರಂಭಿಸಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಮೇ 22ರಿಂದ 24ರ ವರೆಗೆ ಶ್ರೀನಗರದಲ್ಲಿ ಜಿ 20 ರಾಷ್ಟ್ರಗಳ 3ನೇ ಪ್ರವಾಸೋದ್ಯಮ ಕುರಿತ ಸಭೆಯನ್ನು ಆಯೋಜಿಸಿದೆ. ಈ ಮೂಲಕ ವಿದೇಶಿ ಪ್ರತಿನಿಧಿಗಳಿಗೆ ಕಾಶ್ಮೀರದ ಪ್ರಾಕೃತಿಕ ಸೌಂದರ್ಯದ ಸವಿಯನ್ನು ಉಣಬಡಿಸಲು ಮತ್ತು ಜಮ್ಮು ಮತ್ತು ಕಾಶ್ಮೀರದತ್ತ ವಿದೇಶಿ ಪ್ರವಾಸಿಗರನ್ನು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಮುಂದಾಗಿದೆ.
ತಿಂಗಳುಗಳ ಹಿಂದೆಯೇ ಕೇಂದ್ರ ಸರ್ಕಾರ ಶ್ರೀನಗರದಲ್ಲಿ ಜಿ 20 ಸಭೆಯನ್ನು ನಡೆಸಲು ನಿರ್ಧರಿಸಿದ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರ ಈ ಬಗ್ಗೆ ತಗಾದೆ ತೆಗೆದಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಇನ್ನೂ ಪ್ರಕ್ಷುಬ್ಧ ವಾತಾವರಣವಿದ್ದು, ಪದೇಪದೆ ಉಗ್ರರಿಂದ ದಾಳಿಗಳು ನಡೆಯುತ್ತಿವೆ. ಇಂತಹ ಸನ್ನಿವೇಶದಲ್ಲಿ ಶ್ರೀನಗರದಲ್ಲಿ ಜಿ 20 ರಾಷ್ಟ್ರಗಳ ಸಭೆ ನಡೆಸುವುದು ಸೂಕ್ತವಲ್ಲ. ವಿದೇಶಿ ಪ್ರತಿನಿಧಿಗಳ ಭದ್ರತೆಯ ವಿಷಯದಲ್ಲಿ ಭಾರತ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂಬೆಲ್ಲ ನೆಪಗಳನ್ನು ಮುಂದೊಡ್ಡಿ ಶ್ರೀನಗರದ ಸಭೆಯನ್ನು ಬಹಿಷ್ಕರಿಸುವಂತೆ ಇತರ ರಾಷ್ಟ್ರಗಳನ್ನು ಆಗ್ರಹಿಸಿತ್ತು. ಆದರೆ ಭಾರತ ಸರ್ಕಾರ, ಪಾಕಿಸ್ತಾನದ ಆಕ್ಷೇಪಗಳಿಗೆ ಸೊಪ್ಪು ಹಾಕದೆ ಶ್ರೀನಗರದಲ್ಲಿ ಜಿ 20 ಸಭೆ ನಡೆಸಲು ಅಗತ್ಯವಾದ ಸಿದ್ಧತೆ ಮತ್ತು ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಕಾರ್ಯೋನ್ಮುಖವಾಗಿದೆ.

Advertisement

ಇದಾಗ್ಯೂ ಪಾಕಿಸ್ತಾನ ತನ್ನ ಮೊಂಡಾಟ ಬಿಡದೆ ಕಣಿವೆ ರಾಜ್ಯದ ಶಾಂತಿಯನ್ನು ಕದಡುವ ಯತ್ನಕ್ಕೆ ಕೈಹಾಕಿದೆ. ಪದೇಪದೆ ಗಡಿಯ ಮೂಲಕ ಉಗ್ರರು ನುಸುಳುತ್ತಿರುವುದು, ರಾಜ್ಯದ ಅಲ್ಲಲ್ಲಿ ಭಯೋತ್ಪಾದನ ದಾಳಿಗಳು ನಡೆಯುತ್ತಿರುವುದು, ಉಗ್ರರಿಂದ ಯೋಧರು ಮತ್ತು ನಾಗರಿಕರ ಹತ್ಯೆಯಂತಹ ಪೈಶಾಚಿಕ ಕೃತ್ಯಗಳು ನಡೆಯುತ್ತಿರುವುದೆಲ್ಲವೂ ಪಾಕಿಸ್ಥಾನ ಕುತಂತ್ರದ ಭಾಗ ಎಂಬುದು ಈಗಾಗಲೇ ಸಾಬೀತಾಗಿದೆ. ಭದ್ರತಾ ಪಡೆಗಳು ಪಾಕ್‌ ಪ್ರೇರಿತ ಉಗ್ರರ ವಿರುದ್ಧ ನಿಷ್ಠುರ ಕ್ರಮಗಳನ್ನು ಕೈಗೊಂಡಿದ್ದು ಪಾಕ್‌ ನುಸುಳುಕೋರರನ್ನು ಸದೆಬಡಿಯುವ ಮೂಲಕ ಪಾಕಿಸ್ಥಾನದ ಷಡ್ಯಂತ್ರವನ್ನು ವಿಫ‌ಲಗೊಳಿಸುತ್ತಲೇ ಬಂದಿವೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ವಿಪಕ್ಷಗಳು ಶ್ರೀನಗರದಲ್ಲಿ ಜಿ 20 ಸಭೆ ನಡೆಸುತ್ತಿರುವ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಲು ಸರಕಾರ ನಾಗರಿಕರು ಮತ್ತು ಯೋಧರ ಪ್ರಾಣದೊಂದಿಗೆ ಚೆಲ್ಲಾಟವಾಡಲು ಮುಂದಾಗಿದೆ ಎಂದು ಗಂಭೀರ ಆರೋಪ ಮಾಡಿವೆ. ಭಾರತೀಯ ಯೋಧರು ಮತ್ತು ಜನರ ಭದ್ರತೆಯ ಕುರಿತಾಗಿನ ವಿಪಕ್ಷಗಳ ಕಾಳಜಿ ಅರ್ಥೈಸುವಂಥದ್ದಾದರೂ ಇಂತಹ ಸೂಕ್ಷ್ಮ ವಿಷಯಗಳನ್ನು ಬಹಿರಂಗವಾಗಿ ಪ್ರಸ್ತಾವಿಸುವುದು ದೇಶದ ಹಿತದೃಷ್ಟಿಯಿಂದ ಸರ್ವಥಾ ಸಮರ್ಥನೀಯವಲ್ಲ. ವಿಪಕ್ಷಗಳ ಈ ನಡೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ, ತನ್ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಮುಜುಗರಕ್ಕೀಡು ಮಾಡುವ ಯತ್ನ ಖಂಡನೀಯ.

ಇದೇ ವೇಳೆ ಕೇಂದ್ರ ಸರ್ಕಾರ ಕೂಡ ಇಂತಹ ಗಂಭೀರ ವಿಚಾರಗಳಲ್ಲಿ ವಿಪಕ್ಷಗಳಾದಿಯಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕಿದೆ. ಸದ್ಯ ಶ್ರೀನಗರದ ಜಿ 20 ಸಭೆ ಭಾರತದ ಪಾಲಿಗೆ ಪ್ರತಿಷ್ಠೆಯ ವಿಷಯವಾಗಿದ್ದು ರಾಜ್ಯದಲ್ಲಿನ ಸದ್ಯದ ಎಲ್ಲ ಬೆಳವಣಿಗೆಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕಿದೆ. ರಾಜಕೀಯ ಭಿನ್ನಾಭಿಪ್ರಾಯಗಳೇನೇ ಇದ್ದರೂ ಅವೆಲ್ಲವನ್ನೂ ಬದಿಗಿರಿಸಿ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ವಿಪಕ್ಷಗಳು ಬೆಂಬಲವಾಗಿ ನಿಲ್ಲಬೇಕಿದೆ. ಶ್ರೀನಗರದ ಜಿ 20 ಶೃಂಗವನ್ನು ಯಶಸ್ವಿಗೊಳಿಸುವುದರ ಜತೆಯಲ್ಲಿ ಯೋಧರು, ನಾಗರಿಕರ ಪ್ರಾಣ ರಕ್ಷಣೆ ಕೂಡ ಸರ್ಕಾರ ಹೊಣೆಗಾರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next