Advertisement
ಬುಧವಾರ ಸಂಜೆ, ಜಿ-23 ಗುಂಪಿನ ಸದಸ್ಯರು ಈ ಗುಂಪಿನ ಪ್ರಮುಖ ಸದಸ್ಯರಾದ, ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ನಿವಾಸದಲ್ಲಿ ಸಭೆ ಸೇರಲಿದ್ದಾರೆಂಬ ಮಾಹಿತಿಯ ಬಗ್ಗೆ ಖರ್ಗೆ ಪ್ರತಿಕ್ರಿಯಿಸಿ, “ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲೇ ನಾಯಕತ್ವದ ಬಗ್ಗೆ ಇರುವ ಎಲ್ಲಾ ಗೊಂದಲಗಳನ್ನು ಚರ್ಚಿಸಲಾಗಿದೆ. ಜಿ-23 ಸದಸ್ಯರು ಒಂದಲ್ಲ, ನೂರು ಸಭೆಗಳನ್ನು ನಡೆಸಿದರೂ ಪಕ್ಷದ ನಾಯಕತ್ವದಲ್ಲಿ ಯಾವುದೇ ಬದಲಾವಣೆಯಾಗದು” ಎಂದಿದ್ದಾರೆ.
ಹಿರಿಯ ನಾಯಕ ಕಪಿಲ್ ಸಿಬಲ್ ಹಾಗೂ ಜಿ-23 ಗುಂಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್‌ನ ಮತ್ತೊಬ್ಬ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್, “ಪಕ್ಷದ ನಾಯಕತ್ವವನ್ನು ಪ್ರಶ್ನಿಸುತ್ತಿರುವ ಹಿರಿಯ ನಾಯಕ ಕಪಿಲ್ ಸಿಬಲ್, ಪಕ್ಷದ ಯಾವ ಹುದ್ದೆಗೆ ನಡೆಸಿದ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆಂಬುದನ್ನು ಹೇಳಲಿ” ಎಂದಿದ್ದಾರೆ. “ಪಕ್ಷದಿಂದ ಎಲ್ಲವನ್ನೂ ಪಡೆದ ನಂತರ ಪಕ್ಷದ ವಿರುದ್ಧ ಹೀಗೆ ತಿರುಗಿಬೀಳುವುದು ಸರಿಯಲ್ಲ. ಗಾಂಧಿ ಕುಟುಂಬವು ಪಕ್ಷದ ಅವಿಭಾಜ್ಯ ಅಂಗ. ಪಕ್ಷ ಎದುರಿಸುತ್ತಿರುವ ಈಗಿನ ಕಠಿಣ ಸಂದರ್ಭದಲ್ಲಿ ಗಾಂಧಿಯವರಿಗೆ ನಾಯಕತ್ವ ಕೊಡುವುದಕ್ಕಿಂತ ಮತ್ತೊಂದು ಉತ್ತಮ ಆಯ್ಕೆಯಿಲ್ಲ” ಎಂದು ತಿಳಿಸಿದ್ದಾರೆ.