Advertisement

G-20: ಬೈಡನ್‌ಗೆ ಮೌರ್ಯ, ಜಿನ್‌ಪಿಂಗ್‌ಗೆ ತಾಜ್‌ 

08:39 PM Aug 29, 2023 | Team Udayavani |

ನವದೆಹಲಿ: ಮುಂದಿನ ತಿಂಗಳ 9, 10ರಂದು ನವದೆಹಲಿಯಲ್ಲಿ ಜಿ20 ರಾಷ್ಟ್ರಗಳ ಒಕ್ಕೂಟದ ಸಮ್ಮೇಳನ ನಡೆಯಲಿದೆ. ಅದಕ್ಕಾಗಿ ರಾಷ್ಟ್ರ ರಾಜಧಾನಿಯಲ್ಲಿ ಬಿರುಸಿನ ಸಿದ್ಧತೆಗಳು ನಡೆಯುತ್ತಿವೆ. ಯಾವ ರಾಷ್ಟ್ರದ ಅಧ್ಯಕ್ಷ, ಪ್ರಧಾನಮಂತ್ರಿಗಳು ಎಲ್ಲಿ ಉಳಿದುಕೊಳ್ಳಬೇಕು ಎನ್ನುವುದರಿಂದ ಹಿಡಿದು ಅವರಿಗೆ ಬೇಕಾಗಿರುವ ಭದ್ರತಾ ವ್ಯವಸ್ಥೆ ಅಂತಿಮ ಸ್ಪರ್ಶ ಪಡೆಯುತ್ತಿದೆ.

Advertisement

ನವದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್‌) ವ್ಯಾಪ್ತಿಯಲ್ಲಿ ಮೂವತ್ತು ಹೋಟೆಲ್‌ಗ‌ಳನ್ನು ಸಮ್ಮೇಳನದ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದ ವತಿಯಿಂದಲೇ ಕಾಯ್ದಿರಿಸಲಾಗಿದೆ. ಎನ್‌ಸಿಆರ್‌ನಲ್ಲಿ 9, ನವದೆಹಲಿ ನಗರ ವ್ಯಾಪ್ತಿಯಲ್ಲಿ 20 ಹೋಟೆಲ್‌ಗ‌ಳನ್ನು ಬುಕ್‌ ಮಾಡಲಾಗಿದೆ.

ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಅವರು ಐಟಿಸಿ ಮೌರ್ಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅಧ್ಯಕ್ಷ ಬೈಡೆನ್‌ ಮತ್ತು ಅಮೆರಿಕ ಸರ್ಕಾರದ ಹಿರಿಯ ಅಧಿಕಾರಿಗಳಿಗಾಗಿ ಆ ಹೋಟೆಲ್‌ನಲ್ಲಿ 400 ಕೊಠಡಿಗಳನ್ನು ಬುಕ್‌ ಮಾಡಲಾಗಿದೆ. ಅಮೆರಿಕ ಅಧ್ಯಕ್ಷರ ಭದ್ರತೆಗಾಗಿ ಆ ದೇಶದ ಭದ್ರತಾ ಸಂಸ್ಥೆಗಳು ವಿಶೇಷ ನಿಗಾವನ್ನು ಹೋಟೆಲ್‌ನಲ್ಲಿ ಇರಿಸಿದ್ದಾರೆ ಮತ್ತು ಅವರಿಗಾಗಿ ವಿಶೇಷವಾಗಿರುವ ಲಿಫ್ಟ್ ಅನ್ನು ಅಳವಡಿಸಲಾಗಿದೆ.

ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್‌ ತಾಜ್‌ ಪ್ಯಾಲೇಸ್‌ನಲ್ಲಿ ಉಳಿದುಕೊಳ್ಳಲಿದ್ದರೆ, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಶಾಂಗ್ರಿ-ಲಾ- ಹೋಟೆಲ್‌, ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುವಲ್‌ ಮ್ಯಾಕ್ರಾನ್‌ ಕ್ಲಾರಿಜಸ್‌ ಹೋಟೆಲ್‌, ಆಸೀಸ್‌ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಇಂಪೀರಿಯಲ್‌ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದ್ದಾರೆ.

ವಿಶೇಷ ಪಾರ್ಕ್‌
ಭಾರತದ ಅಧ್ಯಕ್ಷತೆಯಲ್ಲಿ ಜಿ20 ರಾಷ್ಟ್ರಗಳ ಸಮ್ಮೇಳನ ನಡೆಯಲಿರುವ ಹಿನ್ನೆಲೆಯಲ್ಲಿ ದಕ್ಷಿಣ ದೆಹಲಿಯ ಪಾರ್ಕ್‌ನಲ್ಲಿ ವಿಶೇಷ ರೀತಿಯ ಲಾಂಛನ, ಒಕ್ಕೂಟದ ಸದಸ್ಯ ರಾಷ್ಟ್ರಗಳ ಧ್ವಜಗಳನ್ನು 20 ಸ್ತಂಭಗಳಲ್ಲಿ ಅನಾವರಣಗೊಳಿಸಲಾಗಿದೆ. ಜಿ20 ಲಾಂಛನದ ಕೆಳಗೆ “ಭಾರತ್‌ 2023, ಇಂಡಿಯಾ” ಎಂದು ಕೆತ್ತಲಾಗಿದೆ. ಸ್ಥಳೀಯ ನಿವಾಸಿಗಳು ಪಾರ್ಕ್‌ ಅನ್ನು “ಜಿ20 ಪಾರ್ಕ್‌” ಎಂದು ಕರೆಯಲಾರಂಭಿಸಿದ್ದಾರೆ ಎಂದು ಶಾಸಕ ಸೌರಭ್‌ ಬಾರಧ್ವಾಜ್‌ ಹೇಳಿದ್ದಾರೆ. ಅದಕ್ಕಾಗಿ ಹಲವು ಮಂದಿ ಕೆಲಸಗಾರರು ದುಡಿದಿದ್ದಾರೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ. ಇದೇ ವೇಳೆ, ಸಮ್ಮೇಳನದ ಹಿನ್ನೆಲೆಯಲ್ಲಿ ನವದೆಹಲಿಯಾದ್ಯಂತ ಜನರು ಶುಚಿತ್ವ ಕಾಪಾಡಬೇಕು ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಮನವಿ ಮಾಡಿದ್ದಾರೆ.

Advertisement

ಏನೇನು ಚರ್ಚೆಯ ವಿಷಯಗಳು?
ಡಿಜಿಟಲ್‌ ಪಬ್ಲಿಕ್‌ ಇನ್ಫ್ರಾಸ್ಟ್ರಕ್ಚರ್‌ (ಡಿಪಿಐ) ರೂಪಿಸುವ ಬಗ್ಗೆ ಡಿಜಿಟಲ್‌ ಎಕಾನಮಿ ವರ್ಕಿಂಗ್‌ ಗ್ರೂಪ್‌ (ಡಿಇಡಬ್ಲೂéಜಿ) ರೂಪಿಸಿದ ಕಾರ್ಯಸೂಚಿಯ ಬಗ್ಗೆ ಜಿ20ಯಲ್ಲಿ ಚರ್ಚೆ ನಡೆಯಲಿದೆ. ಸರ್ಕಾರಗಳು, ಉದ್ದಿಮೆ ಕ್ಷೇತ್ರಗಳು, ಶಿಕ್ಷಣ ಕ್ಷೇತ್ರ ಮತ್ತು ನಾಗರಿಕರಿಗೆ ಅನುಕೂಲವಾಗುವಂತೆ ಅದರ ಬಳಕೆ ಬಗ್ಗೆ ಚರ್ಚೆ ನಡೆಯಲಿದೆ. ಡಿಪಿಐಗೆ ವಿತ್ತೀಯ ನೆರವು ನೀಡುವ ನಿಟ್ಟಿನಲ್ಲಿ ಒನ್‌ ಪ್ಯೂಚರ್‌ ಅಲಯನ್ಸ್‌, ಸೈಬರ್‌ ಸೆಕ್ಯುರಿಟಿ ಮತ್ತು ಶಿಕ್ಷಣದ ವಿಚಾರಗಳ ಬಗ್ಗೆ ಪರಾಮರ್ಶೆ ನಡೆಸಲಾಗುತ್ತಿದೆ.

30 ಸಾವಿರ ಭಾರತೀಯ ವಿದ್ಯಾರ್ಥಿಗಳ ಆಕರ್ಷಣೆ
ನವದೆಹಲಿ: ಫ್ರಾನ್ಸ್‌ನಲ್ಲಿ ಭಾರತದ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಕೆಲವು ಕೋರ್ಸ್‌ಗಳನ್ನು ಆರಂಭಿಸಲಾಗುತ್ತದೆ. 2030ರ ಒಳಗಾಗಿ 30 ಸಾವಿರ ಈ ದೇಶದ ವಿದ್ಯಾರ್ಥಿಗಳು ನಮ್ಮಲ್ಲಿಗೆ ಬಂದು ಕಲಿಯುವಂತೆ ಆಗಬೇಕು ಎಂದು ನವದೆಹಲಿಯಲ್ಲಿ ಇರುವ ಫ್ರಾನ್ಸ್‌ ರಾಯಭಾರ ಕಚೇರಿಯ ಶಿಕ್ಷಣ ವಿಭಾಗದ ಸಮಾಲೋಚಕ ಮತ್ತು ಫ್ರೆಂಚ್‌ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಇಮ್ಯಾನುವಲ್‌ ಲೆಬ್ರನ್‌ ಡೆಮಿನೆಸ್‌ ಹೇಳಿದ್ದಾರೆ. “ನ್ಯೂಸ್‌18′ ಆಂಗ್ಲ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮ್ಯಾನೇಜ್‌ಮೆಂಟ್‌ ಮತ್ತು ಬ್ಯುಸಿನೆಸ್‌ ಕೋರ್ಸ್‌ಗಳ ಬಗ್ಗೆ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿ ವಹಿಸುತ್ತಿದ್ದಾರೆ. ಫ್ರಾನ್ಸ್‌ನ ವಿವಿಯಲ್ಲಿ ವಿದ್ಯಾರ್ಥಿ ವೇತನ ಸಹಿತ ಕೋರ್ಸ್‌ಗೆ ಪ್ರವೇಶ ಪಡೆದರೆ, ವಿದ್ಯಾರ್ಥಿಗೆ ವೆಚ್ಚವಾಗುವುದು ಕೇವಲ ಶೇ.30 ಮಾತ್ರ. ಉಳಿದ ಶೇ.70 ವೆಚ್ಚವನ್ನು ನಮ್ಮ ದೇಶದ ಸರ್ಕಾರ ಭರಿಸುತ್ತದೆ ಎಂದರು. ಸದ್ಯ ನಮ್ಮ ದೇಶದಲ್ಲಿ 10ರಿಂದ 20 ಸಾವಿರ ಭಾರತೀಯ ವಿದ್ಯಾರ್ಥಿಗಳಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next