Advertisement

ಪೌರ ಕಾರ್ಮಿಕರಿಗಾಗಿ ಜಿ-2 ಮಾದರಿ ವಸತಿಗೃಹ; : ಸಿಂಗಾಣಿಯಲ್ಲಿ ಜಾಗ ಪರಿಶೀಲನೆ

02:48 PM Dec 19, 2022 | Team Udayavani |

ಪುತ್ತೂರು: ವಸತಿ ರಹಿತ ಪೌರಕಾರ್ಮಿಕರಿಗೆ ವಸತಿ ನಿರ್ಮಾಣಕ್ಕೆ ನಗರಸಭೆ ಯೋಜನೆ ರೂಪಿಸಿದ್ದು ಎಲ್ಲವೂ ಅಂದುಕೊಂಡಂತೆ ಸಾಗಿದರೆ ನಗರದ ಸಿಂಗಾಣಿ ಬಳಿ ವಸತಿಗೃಹ ತಲೆ ಎತ್ತಲಿದೆ.

Advertisement

ನಗರದ ಸ್ವಚ್ಛತೆಯಲ್ಲಿ ದಿನ ನಿತ್ಯ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಸೂರು ಒದಗಿಸುವ ಪ್ರಯತ್ನದ ಅಂಗವಾಗಿ ವಸತಿಗೃಹ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ.

ನಗರೋತ್ಥಾನದಲ್ಲಿ ಅನುದಾನ
ವಸತಿ ಗೃಹ ನಿರ್ಮಾಣಕ್ಕೆ ನಗರೋತ್ಥಾನದಲ್ಲಿ 1.19 ಕೋಟಿ ರೂ. ಅನುದಾನ ಇರಿಸಲಾಗಿದೆ. ಈಗಾಗಲೇ ಬಲಾ°ಡಿನಲ್ಲಿ 1 ಎಕ್ರೆ ಜಾಗ ಗುರುತಿಸಲಾಗಿದ್ದರೂ ಅದು ಡೀಮ್ಡ್ ಫಾರೆಸ್ಟ್‌ ವ್ಯಾಪ್ತಿಯೊಳಗೆ ಬರುವ ಕಾರಣ ಅಲ್ಲಿ ನಿರ್ಮಾಣ ಅಸಾಧ್ಯ. ಅದರ ಬದಲು ನಗರದ ಸಿಂಗಾಣಿಯಲ್ಲಿ ಜಾಗ ಪರಿಶೀಲಿಸಲಾಗಿದ್ದು ಅಲ್ಲಿ 30 ಸೆಂಟ್ಸ್‌ ಜಾಗ ಲಭ್ಯವಿದೆ. ಜಾಗ ಗುರುತಿಸುವಿಕೆ ಅಂತಿಮವಾದಲ್ಲಿ ಅಲ್ಲಿ ವಸತಿಗೃಹ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.

ಜಿ- 2 ಮಾದರಿಯ ವಸತಿಗೃಹ
ಪುತ್ತೂರು ನಗರಸಭೆಯಲ್ಲಿ ಒಟ್ಟು 88 ಪೌರಕಾರ್ಮಿಕ ಮಂಜೂರಾತಿ ಹುದ್ದೆಗಳಿವೆ. ಇದರಲ್ಲಿ 11 ಮಂದಿ ಪೂರ್ಣಕಾಲಿಕ ಸಿಬಂದಿಗಳಿದ್ದಾರೆ. 41 ಮಂದಿ ನೇರ ಪಾವತಿಯ ಸಿಬಂದಿಗಳಿದ್ದಾರೆ. ಉಳಿದ ಹುದ್ದೆಗಳು ಖಾಲಿಯಿವೆ. ಇದರ ಪೈಕಿ ಅತೀ ಹೆಚ್ಚಿನ ಸಿಬಂದಿ ಹೊರ ಜಿಲ್ಲೆಯವರು.

ಪ್ರಸ್ತುತ ಅವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಅಂಥವರಿಗೆ ವಸತಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಜಿ-2 ಮಾದರಿಯ ವಸತಿ ಗೃಹ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ನೆಲ ಅಂತಸ್ತು ಸೇರಿದಂತೆ ಎರಡು ಮಹಡಿಗಳಿರಲಿವೆ. ಒಟ್ಟು ಎಂಟು ಮನೆಗಳು ಇರಲಿವೆ ಅನ್ನುತ್ತಾರೆ ನಗರಸಭೆ ಪೌರಯುಕ್ತ ಮಧು ಎಸ್‌ ಮನೋಹರ್‌.

Advertisement

ವಿಶ್ರಾಂತಿ ಗೃಹ
ಈಗಾಗಲೇ ದ.ಕ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಪುತ್ತೂರು ನಗರಸಭೆಯು ಪೌರ ಕಾರ್ಮಿಕರಿಗಾಗಿ ಕಂಟೈನರ್‌ ಮಾದರಿಯ ಪೌರಬಂಧು ವಿಶ್ರಾಂತಿ ಗೃಹ ನಿರ್ಮಿಸಿದೆ. ಅಮೃತ ನಿರ್ಮಲ ನಗರ ಯೋಜನೆ ಅಡಿಯಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ದಿನನಿತ್ಯ ನಗರದ ಸ್ವತ್ಛತೆಗಾಗಿ ಕೆಲಸ ಮಾಡುವ ಪೌರ ಕಾರ್ಮಿಕರು ತಮ್ಮ ವೈಯಕ್ತಿಕ ಸ್ವಚ್ಛತೆ, ವಿಶ್ರಾಂತಿಗಾಗಿ ಈ ಕಂಟೈನರ್‌ ಸಹಕಾರಿಯಾಗಿದ್ದು ಇದರಲ್ಲಿ ಕಾರ್ಮಿಕರು ವಿಶ್ರಾಂತಿ ಪಡೆಯುತ್ತಾರೆ. ಕುಡಿಯುವ ನೀರಿನ ಪೂರೈಕೆ ಇದೆ. ಇದಲ್ಲದೆ ಸ್ನಾನ ಗೃಹ, ಶೌಚಾಲಯ ಲಭ್ಯ ಇದೆ. ವಿಶ್ರಾಂತಿಗೃಹದ ಬೆನ್ನಲ್ಲೇ ವಸತಿಗೃಹದ ಸ್ಥಾಪನೆಗೂ ನಗರಾಡಳಿತ ಹೆಜ್ಜೆ ಇರಿಸಿದೆ.

ತ್ಯಾಜ್ಯ ಸಂಗ್ರಹ ಜವಾಬ್ದಾರಿ
ನಗರದ 15 ಸಾವಿರಕ್ಕೂ ಮಿಕ್ಕಿದ ಮನೆ, ಕಟ್ಟಡಗಳಿಂದ ದಿನಂಪ್ರತಿ 8 ಟನ್‌ ಅಧಿಕ ಹಸಿತ್ಯಾಜ್ಯ ಬನ್ನೂರು ಯಾರ್ಡ್‌ ಸೇರುತ್ತಿದೆ. ಇಷ್ಟು ಪ್ರಮಾಣದ ತ್ಯಾಜ್ಯ ಸಂಗ್ರಹಿಸಿ ಡಂಪಿಂಗ್‌ ಯಾರ್ಡ್‌ಗೆ ಸೇರಿಸುವ ಜವಾಬ್ದಾರಿ ನಿರ್ವಹಿಸುವುದು ಪೌರ ಕಾರ್ಮಿಕರು. ಸಿಬಂದಿ ಸಂಖ್ಯೆಯ
ಕೊರತೆಯ ನಡುವೆಯು ಪ್ರತಿನಿತ್ಯ ನಗರದ ವಾಣಿಜ್ಯ ಕಟ್ಟಡ, ಮನೆ ಮನೆಗಳಿಂದ ಕಸ ಸಂಗ್ರಹಿಸುವ ಜತೆಗೆ ನಗರದ ಸ್ವತ್ಛತ ಕಾರ್ಯದಲ್ಲಿ ಪೌರ ಕಾರ್ಮಿಕರು ತೊಡಗಿಸಿಕೊಳ್ಳುತ್ತಾರೆ.

ಅಗತ್ಯ ನೆರವು
ನಗರದ ಸ್ವಚ್ಛತೆಗೆ ಪೌರ ಕಾರ್ಮಿಕರ ಕೊಡುಗೆ ಅಪಾರ. ಸಿಬಂದಿ ಪೈಕಿ ಹೆಚ್ಚಿನವರು ಹೊರ ಜಿಲ್ಲೆಯಿಂದ ಬಂದವರು. ಅವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಅವರಿಗೆ ವಸತಿ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ವಸತಿಗೃಹ ನಿರ್ಮಾಣಕ್ಕೆ ನಗರಾಡಳಿತ ಯೋಜನೆ ರೂಪಿಸಿದ್ದು ಸರಕಾರದ ಮೂಲಕವು ಅಗತ್ಯ ನೆರವು ನೀಡಲಿದೆ.
-ಸಂಜೀವ ಮಠಂದೂರು, ಶಾಸಕರು, ಪುತ್ತೂರು

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next