ಬೆಂಗಳೂರು: ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಕಾಂಗ್ರೆಸ್ ನಾಯಕರ ಭೇಟಿ ಬುಧವಾರವೂ ಮುಂದುವರಿದಿತ್ತು. ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಅವರು ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿ, ಕೆಲಕಾಲ ಮಾತನಾಡಿ, ಡಿಕೆಶಿಗೆ ಧೈರ್ಯ ತುಂಬಿದರು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ತೆಲಂಗಾಣ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದರು.
ಇದೇ ವೇಳೆ, ಮಾಜಿ ಸಂಸದ ಬಿ.ವಿ.ನಾಯ್ಕ, ಮಾಜಿ ಸಚಿವೆ ಸುಮಾ ವಸಂತ್, ಮಾಜಿ ಸಚಿವ ಪರಮೇಶ್ವರ ನಾಯ್ಕ, ವಿಧಾನಪರಿಷತ್ ಸದಸ್ಯ ಬೋಸರಾಜ್, ಶಾಸಕರಾದ ದುರ್ಗಪ್ಪ ಹೊಲಗೇರಿ, ಬಸನಗೌಡರ್, ಎನ್.ಎ.ಹ್ಯಾರಿಸ್, ಬಸವರಾಜ ಹಿಟ್ನಾಳ್, ಮುಖಂಡರಾದ ವಾಸಂತಿ ಶಿವಣ್ಣ ಸೇರಿ ಹಲವು ಮುಖಂಡರು ಡಿಕೆಶಿ ಭೇಟಿ ಮಾಡಿ, ಧೈರ್ಯ ತುಂಬಿದರು.
ಮೆಡಿಕಲ್ ಕಾಲೇಜು ಸ್ಥಳಾಂತರ ಬೇಡ: ಈ ಮಧ್ಯೆ, ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್, “ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜು ಕೊಡಬೇಡಿ ಎಂದು ನಾನು ಹೇಳಿಲ್ಲ, ಹೇಳುವುದೂ ಇಲ್ಲ. ಡಾ.ಕೆ.ಸುಧಾಕರ್ ಜತೆ ನಾನು ಸಂಘರ್ಷಕ್ಕೂ ಇಳಿದಿಲ್ಲ. ಕನಕಪುರಕ್ಕೆ ಬಜೆಟ್‌ನಲ್ಲಿ ಮಂಜೂರಾಗಿರುವ ವೈದ್ಯಕೀಯ ಕಾಲೇಜನ್ನು ಸ್ಥಳಾಂತರ ಮಾಡಬಾರದು ಎಂಬುದಷ್ಟೇ ನನ್ನ ನಿಲುವು. ನನ್ನ ಕ್ಷೇತ್ರದ ಹಿತಾಸಕ್ತಿ ಕಾಯುವುದು ನನ್ನ ಧರ್ಮ. ಸಿಎಂಗೆ ಈ ಬಗ್ಗೆ ಪತ್ರ ಬರೆಯುತ್ತೇನೆ’ ಎಂದು ಹೇಳಿದರು.
ನನ್ನ ಜಂಜಾಟವೇ ನನಗೆ ಸಾಕಾಗಿದೆ: ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವಿನ ಮಾತಿನ ಸಮರದ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಈ ಬಗ್ಗೆ ನನಗೇನೂ ಗೊತ್ತಿಲ್ಲ ಎಂದರು. “ಇಬ್ಬರೂ ಮುಖ್ಯಮಂತ್ರಿಗಳಾಗಿದ್ದವರು. ದೊಡ್ಡವರು. ಅವರ ಬಗ್ಗೆ ನಾನು ಯಾವುದೇ ಕಾಮೆಂಟ್ ಮಾಡುವುದಿಲ್ಲ.
ಇಬ್ಬರೂ ಯಾವ ವಿಚಾರದ ಬಗ್ಗೆ ಏನು ಮಾತನಾಡಿದ್ದಾರೆ ಎಂಬುದೇ ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ಹೇಗೆ ಮಾತನಾಡಲಿ? ದಯವಿಟ್ಟು ಆ ವಿಚಾರಗಳನ್ನು ನನ್ನ ಬಳಿ ಕೇಳಬೇಡಿ. ನನಗೆ ನನ್ನ ಜಂಜಾಟವೇ ಸಾಕಾಗಿದೆ. ಮೊದಲು ನನ್ನ ಆರೋಗ್ಯ ನೋಡಿಕೊಳ್ಳಬೇಕಾಗಿದೆ. ನನ್ನದೇನಾದರೂ ಇದ್ದರೆ ಮಾತ್ರ ಕೇಳಿ’ ಎಂದರು.