ಚಿಕ್ಕೋಡಿ: ಕರ್ತವ್ಯಕ್ಕೆ ತೆರಳುವ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದ ಬಿಎಸ್ಎಫ್ ಯೋಧನ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ ನಡೆಯಿತು.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದ ಬಿಎಸ್‌ಎಫ್ ಯೋಧ ಸೂರಜ್ ಧೋಂಡಿರಾಮ ಸುತಾರ(30) ಆಟೋದಿಂದ ಕೆಳಗಿಳಿಯುತ್ತಿದ್ದಾಗ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಯೋಧ ಪಶ್ಚಿಮ ಬಂಗಾಳ ರಾಜ್ಯದ ಪಂಜಿ ಪಾಡಾ ಎಂಬಲ್ಲಿ ಸೋಮವಾರ ನಿಧನರಾಗಿದ್ದರು.
ಅವರ ಪಾರ್ಥಿವ ಶರೀರ ಬುಧವಾರ ಬೆಳಗ್ಗೆ ದೆಹಲಿಯ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಸ್ವಗ್ರಾಮ ಯಡೂರವಾಡಿಗೆ ತಲುಪಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರ ಮೆರವಣಿಗೆ ನಡೆಯಿತು. ಮೆರವಣಿಗೆ ವೇಳೆ ಪುಷ್ಪನಮನ, ಮನೆ ಮನೆಯವರಿಂದ ಆರತಿ ಬೆಳಗಿ ಅಂತಿಮ ದರ್ಶನ ಪಡೆದು ಮೆರವಣಿಗೆಯಲ್ಲಿದ್ದ ಶಾಲಾ ಮಕ್ಕಳು ದೇಶ ವಾಕ್ಯ ಘೋಷಣೆ ಮೊಳಗಿಸಿದರು.
ಮೃತ ಯೋಧನ ಪಾರ್ಥಿವ ಶರೀರಕ್ಕೆ ಚಿಕ್ಕೋಡಿ ತಾಲೂಕು ಆಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಂದ ಗೌರವ ಮತ್ತು ಚಿಕ್ಕೋಡಿ ಉಪವಿಭಾಗಾಧಿಕಾರಿ ಸಂತೋಷ್ ಕಾಮಗೌಡ ಅಂತಿಮ ಗೌರವ ಸಲ್ಲಿಸಿದರು.
ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ. ಚರಮೂರ್ತಿಮಠದ ಸಂಪಾದನ ಸ್ವಾಮೀಜಿ.ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಗಣೇಶ್ ಹುಕ್ಕೇರಿ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.