Advertisement

ಕಳತ್ತೂರಿನ ಯೋಧ ಜಾರ್ಖಂಡ್‌ನಲ್ಲಿ ಹೃದಯಾಘಾತದಿಂದಾಗಿ ಸಾವು ; ಹುಟ್ಟೂರಿನಲ್ಲಿ ಅಂತಿಮ ವಿಧಿ

12:32 PM Nov 08, 2021 | Team Udayavani |

ಕಾಪು: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರತರಾಗಿದ್ದ ಸೇನಾ ಯೋಧ ವಿಲ್ಸನ್ ನವೀನ್ ಕುಮಾರ್ ಕರ್ಕಡ (50) ಅವರು ಜಾರ್ಖಂಡ್‌ನಲ್ಲಿ ಕರ್ತವ್ಯದಲ್ಲಿರುವಾಗಲೇ ಹೃದಯಾಘಾತದಿಂದಾಗಿ ಮೃತಪಟ್ಟಿದ್ದು, ರವಿವಾರ ಹುಟ್ಟೂರು ಪಾದೂರು ಚರ್ಚ್‌ನಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ವಿಧಿ ವಿಧಾನ ನಡೆಸಲಾಯಿತು.

Advertisement

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಕಾಪು ತಾಲೂಕಿನ ಕಳತ್ತೂರು ಕನ್ನಡರಬೆಟ್ಟು ನಿವಾಸಿಗಳಾಗಿದ್ದ ದಿ| ಸುಮಿತ್ರ ಕರ್ಕಡ ಮತ್ತು ದಿ| ಐಸೇಮಿಯಾ ಸೌದಾಮಣಿ ಕರ್ಕಡ ದಂಪತಿಯ ಐದನೇ ಪುತ್ರರಾಗಿದ್ದ ಅವರು 1992 ರಲ್ಲಿ ಭಾರತೀಯ ಸೇನೆಯ ಸಿಐಎಸ್‌ಎಫ್ ಯೋಧನಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡಿದ್ದರು.

ಸಿಐಎಸ್‌ಎಫ್ ಯೋಧನಾಗಿ ಕಳೆದ 29 ವರ್ಷಗಳಿಂದ ದೇಶದ ಬಿಹಾರ, ರಾಂಚಿ, ದೆಹಲಿ, ಮೈಸೂರು, ನಾಗ್ಪುರ  ಸಹಿತ ದೇಶದ ವಿವಿಧೆಡೆಗಳ ಸೇನಾ ನೆಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು ಮುಂದಿನ ವರ್ಷ ಕರ್ತವ್ಯದಿಂದ ನಿವೃತ್ತಿ ಹೊಂದುವವರಿದ್ದರು.

ಜಾರ್ಖಂಡ್ ಸೇನಾ ನೆಲೆಯಲ್ಲಿ ಮಿಲಿಟರಿ ಗೌರವಾರ್ಪಣೆ ಸಲ್ಲಿಸಿ, ಮೃತದೇಹವನ್ನು ಕೊಲ್ಕತ್ತಾ, ಮುಂಬಯಿ ಮಾರ್ಗದ ಮೂಲಕವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಗಿದ್ದು, ಸೇನಾ ಸಿಬಂದಿಗಳ ನೇತೃತ್ವದಲ್ಲೇ ಮನೆಗೆ ತಲುಪಿಸಲಾಯಿತು.

Advertisement

ಮನೆಯಲ್ಲಿ ಕುಟುಂಬಸ್ಥರಿಂದ ಪಾರ್ಥಿವ ಶರೀರದ ದರ್ಶನದ ಬಳಿಕ ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕರಾವಳಿ ಅಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಸಮಾಜ ಸೇವಕ ಸುರೇಶ್ ಪಿ. ಶೆಟ್ಟಿ ಗುರ್ಮೆ, ಕುತ್ಯಾರು ಗ್ರಾ. ಪಂ. ಅಧ್ಯಕ್ಷೆ ಲತಾ ಆಚಾರ್ಯ ಸಹಿತವಾಗಿ ಗಣ್ಯರು ಮತ್ತು ನೂರಾರು ಮಂದಿ ಸಾರ್ವಜನಿಕರು ಅಂತಿಮ ದರ್ಶನ ನಡೆಸಿದರು.

ಮೃತ ದೇಹದ ಅಂತಿಮ ದರ್ಶನ ಮತ್ತು ಪ್ರಾರ್ಥನೆಯ ಬಳಿಕ ಪಾದೂರು ಸಿಎಸ್‌ಐ ಇಮ್ಯಾನುವೆಲ್ ಚರ್ಚ್‌ನ ಧರ್ಮಗುರು ರೇಷ್ಮಾ ರವಿಕಲಾ ಅವರ ನೇತೃತ್ವದಲ್ಲಿ ಅಂತಿಮ ವಿದಿ ವಿದಾನಗಳು ನೆರವೇರಿದವು. ಸಿಐಎಸ್‌ಎಫ್ ವಿಭಾಗ ಮತ್ತು ಶಿರ್ವ ಪೊಲೀಸ್ ಠಾಣಾಽಕಾರಿ ಶ್ರೀ ಶೈಲ ಮುರಗೋಡ ಅವರ ನೇತೃತ್ವದಲ್ಲಿ ಸರಕಾರಿ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು.

ಸಂತಾಪ : ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಸಮಾಜ ಸೇವಕ ಸುರೇಶ್ ಪಿ. ಶೆಟ್ಟಿ ಗುರ್ಮೆ, ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಸಹಿತ ವಿವಿಧ ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸ್ಥಳೀಯಾಡಳಿತ ಸಂಸ್ಥೆಯ ಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next