ಬೆಂಗಳೂರು: ಅಂತ್ಯ ಸಂಸ್ಕಾರ ಸಹಾಯಧನ ಅರ್ಜಿಗಳ ಪೈಕಿ ರಾಜ್ಯದಿಂದ 17.92 ಕೋ.ರೂ.ಗಳಿಗೆ ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಸಹಾಯಧನ ಪಾವತಿ ಮಾಡುತ್ತಿದ್ದೇವೆ. ಸಪ್ಟೆಂಬರ್ ತಿಂಗಳಿನಿಂದ ಅರ್ಜಿ ಸ್ವೀಕಾರ ಸ್ಥಗಿತಗೊಂಡಿರುವ ಪ್ರಸ್ತಾವಕ್ಕೆ ಸಂಬಂಧಿಸಿ ಕೊರೊನಾ ಕಾರಣಗಳಿಗಾಗಿ ಒಂದಷ್ಟು ದಿನ ಸ್ಥಗಿತ ಆಗಿರಬಹುದು. ಈ ವಿಚಾರವನ್ನು ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಸಹಾಯಧನ ಮುಂದುವರಿಸುವ ಕುರಿತು ಕ್ರಮ ಕೈಗೊಳ್ಳುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.
ಕಾಂಗ್ರೆಸ್‌ನ ಡಾ| ಮಂಜುನಾಥ ಭಂಡಾರಿ ಅವರು ಮಂಗಳವಾರ ಸದನದಲ್ಲಿ ಈ ಬಗ್ಗೆ ಪ್ರಸ್ತಾವಿಸಿದಾಗ ಸಚಿವರು ಉತ್ತರಿಸಿದರು.
2006ರಲ್ಲಿ ಅಂತ್ಯಸಂಸ್ಕಾರ ಸಹಾಯ ನಿಧಿ ಯೋಜನೆಯನ್ನು ಆರಂಭಿಸಲಾಗಿತ್ತು. ಇದರಡಿ ಬಡತನ ರೇಖೆಗಿಂತ ಕೆಳಗಿನವರು ಮೃತಪಟ್ಟರೆ, ಅಂತಹವರ ಅಂತ್ಯಕ್ರಿಯೆಗೆ ಸರಕಾರವು ಐದು ಸಾವಿರ ರೂ. ನೀಡುತ್ತದೆ. ಆದರೆ, ಈ ಹಣ ಮೃತಪಟ್ಟವರ ತಿಥಿ ಮುಗಿದರೂ ಕೈ ಸೇರುತ್ತಿಲ್ಲ. ಒಂದೆಡೆ ಈ ವಿಳಂಬ ಧೋರಣೆ ಅನುಸರಿಸುತ್ತಿದ್ದರೆ, ಮತ್ತೂಂದೆಡೆ ಯೋಜನೆಯಡಿ ಅರ್ಜಿ ಸ್ವೀಕರಿಸುವುದನ್ನೇ ನಿಲ್ಲಿಸಲಾಗಿದೆ.
ಇದನ್ನೂ ಓದಿ:ನಾವೂ ಹಿಂದೂಗಳೇ, ಭಗವದ್ಗೀತೆ ಬಗ್ಗೆ ಹೊಟ್ಟೆ ಉರಿ ಇಲ್ಲ: ಡಿಕೆಶಿ
ಇದರೊಂದಿಗೆ ಸದ್ದಿಲ್ಲದೆ ಯೋಜನೆ ಸ್ಥಗಿತಗೊಳಿಸುವ ಹುನ್ನಾರ ನಡೆದಿದೆ ಎಂದು ಮಂಜುನಾಥ ಭಂಡಾರಿ ಆರೋಪಿಸಿದರು. 2006ರಲ್ಲಿ ಆರಂಭಗೊಂಡ ಈ ಯೋಜನೆ ಅಡಿ ಮೊದಲು ಸಾವಿರ ರೂ. ನೀಡಲಾಗುತ್ತಿತ್ತು. 2015ರ ಎಪ್ರಿಲ್ 1ರಿಂದ 5 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿತ್ತು. ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವವರು ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕೆ ನೀಡುವ ಸಹಾಯ ನಿಧಿ ಯೋಜನೆಯನ್ನು ಸರಕಾರ ಸದ್ದಿಲ್ಲದೆ ಸ್ಥಗಿತಗೊಳಿಸುತ್ತಿದ್ದು, ಇದು ಖಂಡನೀಯ ಎಂದರು.
“ಉದಯವಾಣಿ’ ವರದಿ ಉಲ್ಲೇಖ
“ಅಂತ್ಯಸಂಸ್ಕಾರ ಸಹಾಯಧನ ಸದ್ದಿಲ್ಲದೆ ಸ್ಥಗಿತ!’ ಎನ್ನುವ ಶೀರ್ಷಿಕೆ ಅಡಿ ” ಉದಯವಾಣಿ’ಯ ಕೊನೆಯ ಪುಟದಲ್ಲಿ ಮಾ. 22ರಂದು ಪ್ರಕಟವಾದ ವರದಿಯನ್ನು ಉಲ್ಲೇಖಿಸುವ ಮೂಲಕ ಸರಕಾರದ ಗಮನ ಸೆಳೆದರು.