ಕುಷ್ಟಗಿ: ರೈತರು ಆಸಕ್ತಿಯಿಂದ ಕೃಷಿ ಹೊಂಡ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಸಹಾಯಧನಕ್ಕಾಗಿ ಕೃಷಿ ಇಲಾಖೆಗೆ ಎಡತಾಕುವಂತಾಗಿದೆ. ಸರ್ಕಾರ ಮಹಾತ್ವಾಕಾಂಕ್ಷಿ ಯೋಜನೆಯಾದ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳನ್ನು ರೈತರ ಬೇಡಿಕೆಗೆ ಅನುಗುಣವಾಗಿ ಮಂಜೂರು ಮಾಡಿದೆ. ಕೃಷಿ ಹೊಂಡದಿಂದ ಹಲವು ಪ್ರಯೋಜನೆಗಳ ಅರಿವಾಗಿ ರೈತರು ತಮ್ಮ ಜಮೀನಿನಲ್ಲೂ ನಿರ್ಮಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ.
ಮಳೆಯಾದಾಗ ಕೃಷಿ ಹೊಂಡ ತುಂಬಿದರೆ, ಮಳೆ ಕೈಕೊಟ್ಟ ಸಂದರ್ಭದಲ್ಲಿ ಕೃಷಿ ಹೊಂಡದ ನೀರನ್ನು ತುಂತುರು ನೀರಾವರಿ ಆಧಾರಿತವಾಗಿ ಬಳಸಿಕೊಂಡು ಬೆಳೆ ರಕ್ಷಿಸಿಕೊಳ್ಳಲು ಸಾಧ್ಯ. ಈ ಹಿನ್ನೆಲೆಯಲ್ಲಿ ಇಂದಿನ ದಿನಮಾನದಲ್ಲಿ ಕೃಷಿ ಹೊಂಡಗಳು ಪ್ರಸ್ತುತವೆನಿಸಿವೆ. 21 ಮೀಟರ್ ಕೃಷಿ ಹೊಂಡಕ್ಕೆ ಮಸಾರಿ (ಕೆಂಪು) ಜಮೀನಿಲ್ಲಿ ಕೃಷಿ ಹೊಂಡಗಳಾದರೆ, 61,962 ರೂ. ಕಪ್ಪು (ಎರೆ) ಜಮೀನಾದರೆ 55,138 ರೂ. ಹಾಗೂ 27 ಮೀಟರ್ ಕೃಷಿ ಹೊಂಡಗಳಿಗೆ ಮಸಾರಿ, ಎರೆ ಜಮೀಗೆ 87,416 ರೂ. ಸಹಾಯಧನ ನಿಗದಿಯಾಗಿದೆ.
ಆಯ್ಕೆಯಾದ ಫಲಾನುಭವಿಗಳ ಜಮೀನಿನಲ್ಲಿ ಇಲಾಖೆ ಕೃಷಿ ಹೊಂಡಕ್ಕೆ ಸೂಕ್ತ ಜಾಗೆ ಪರಿಶೀಲಿಸಿ, ಅನುಮೋದನೆ ನೀಡುವುದು, ಕೃಷಿ ಹೊಂಡ ನಿರ್ಮಿಸಿಕೊಳ್ಳುವ ಫಲಾನುಭವಿ ರೈತರಿಗೆ ಕೃಷಿ ಇಲಾಖೆ ತಾಂತ್ರಿಕ ಸಲಹೆ, ಕೃಷಿ ಹೊಂಡ ನಿರ್ಮಾಣದ ಮೇಲುಸ್ತವಾರಿವಹಿಸುವುದು, ಕೃಷಿ ಹೊಂಡ ನಿರ್ಮಾಣವಾದ ನಂತರ ಅವರ ಖಾತೆಗೆ ಸಹಾಯಧನ ವರ್ಗಾಯಿಸುವುದು ಕೃಷಿ ಇಲಾಖೆಯ ಕೆಲಸ.
ಆದರೆ ಇಲ್ಲಿನ ಕೃಷಿ ಇಲಾಖೆ ಆಯ್ಕೆಯಾದ ಫಲಾನುಭವಿಗಳ ಕೃಷಿ ಹೊಂಡಗಳನ್ನು ನಿರ್ಮಿಸಲು ಖಾಸಗಿ ಏಜೆನ್ಸಿ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ರೈತರು ನಿರ್ಮಿಸಿಕೊಂಡ ಕೃಷಿ ಹೊಂಡಗಳಿಗಿಂತ ಖಾಸಗಿ ಏಜೆನ್ಸಿ ನಿರ್ಮಿಸಿದವರಿಗೆ ಆದ್ಯತೆ ನೀಡಲಾಗುತ್ತಿದೆ. ರೈತರು ನಿರ್ಮಿಸಿದ ಕೃಷಿ ಹೊಂಡಗಳಿಗೆ ಸಹಾಯಧನ ಬಿಡುಗಡೆಯಾಗಿಲ್ಲ. ಅದೇ ಕೃಷಿ ಇಲಾಖೆಯವರ ಅಧಿನ ಕೃತ ಏಜೆನ್ಸಿಯವರಿಂದ ಕೃಷಿ ಹೊಂಡ ನಿರ್ಮಿಸಿದವರ ಖಾತೆಗೆ ಸಹಾಯಧನ ಬಿಡುಗಡೆಯಾಗಿರುವುದನ್ನು ರೈತರು ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಗುಮಗೇರಾ ಗ್ರಾಮದ ಫಲಾನುಭವಿ ಶಿವರಾಜ್ ಮಾಲಿಪಾಟೀಲ, 2018-19ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಕಾರ್ಯಾದೇಶ ನೀಡಿದ್ದರಿಂದ ಸ್ವಂತ ಖರ್ಚಿನಲ್ಲಿ ಕೃಷಿ ಹೊಂಡ ನಿರ್ಮಿಸಲಾಗಿದೆ. ಆದರೆ ಇಲ್ಲಿಯವರೆಗೂ ಸಹಾಯಧನ ಬಿಡುಗಡೆ ಮಾಡಿಲ್ಲ. ಜೆಸಿಬಿ, ಟ್ರಾಕ್ಟರ್‌ನವರು ಮನೆಗೆ ಎಡತಾಕುತ್ತಿದ್ದು, ನಾವು ಕೃಷಿ ಇಲಾಖೆಗೆ ಎಡತಾಕುವಂತಾಗಿದೆ. ನಾವೇ ನಿರ್ಮಿಸಿಕೊಂಡಿದ್ದರಿಂದ ಸಹಾಯಧನ ಬಿಡಿಗಡೆಯಾಗಿಲ್ಲ. ಕೃಷಿ ಇಲಾಖೆಯವರು, ಸೂಚಿಸಿದ ವ್ಯಕ್ತಿಯಿಂದ ನಿರ್ಮಿಸಿಕೊಂಡವರಿಗೆ ಸಹಾಯಧನ ಬಿಡುಗಡೆಯಾಗಿದೆ. ಇದೀಗ ಸದರಿ ಇಲಾಖೆಯವರು, ರೈತರು ನಿರ್ಮಿಸಿಕೊಂಡ ಕೃಷಿ ಹೊಂಡಕ್ಕೆ ಯಾರನ್ನು ಕೇಳಿ ನಿರ್ಮಿಸಿಕೊಂಡಿರುವಿರಿ? ಪ್ರಶ್ನಿಸುತ್ತಿದ್ದಾರೆಂದು ಆರೋಪಿಸಿದರು. ಏಜೆನ್ಸಿ ನಿರ್ಮಿಸಿರುವುದಕ್ಕಿಂತ ರೈತರು ನಿರ್ಮಿಸಿಕೊಂಡಿರುವ ಕೃಷಿ ಹೊಂಡ ಅಚ್ಚುಕಟ್ಟಾಗಿವೆ. ಆಳವೂ ಹೆಚ್ಚಿದೆ. ಈ ಕೆಲಸಕ್ಕೆ ಆದ್ಯತೆ ನೀಡದೇ ಖಾಸಗಿ ಏಜೆನ್ಸಿಯವರು ಬೇಕಾಬಿಟ್ಟಿ ನಿರ್ಮಿಸಿದವರಿಗೆ ಆದ್ಯತೆ ನೀಡುತ್ತಿರುವುದು ಎಷ್ಟು ಸರಿ? ಎನ್ನುವುದು ರೈತರ ಆರೋಪ.
ಸರ್ಕಾರದಿಂದ ಬಾಕಿ ಅನುದಾನ ಬರುವುದು ವಿಳಂಬವಾಗಿದೆ. ಹೀಗಾಗಿ ಕೆಲವು ರೈತರ ಖಾತೆಗೆ ಜಮೆಯಾಗಿಲ್ಲ, ಅನುದಾನ ಬಿಡುಗಡೆ ಬಳಿಕ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ.
ವೀರಣ್ಣ ಕಮತರ,
ಸಹಾಯಕ ಕೃಷಿ ನಿರ್ದೇಶಕ ಕುಷ್ಟಗಿ