Advertisement
ಕಳೆದ 10 ವರ್ಷಗಳಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದಿಂದ ಅನ್ನದಾನಕ್ಕಾಗಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಬಂಟ್ವಾಳ ಪುಣಚದ ಶ್ರೀದೇವಿ ಶಾಲೆಗೆ ಅನುದಾನ ಬರುತ್ತಿತ್ತು. ಆದರೆ ಅನುದಾನವನ್ನು ರಾಜ್ಯ ಸರಕಾರ ಕಳೆದ ವಾರ ಕಡಿತಗೊಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಕಲ್ಲಡ್ಕ ಪ್ರಭಾಕರ ಭಟ್ ಆವರು ‘ನನ್ನ ಪ್ರಾಣ ಇರುವವರೆಗೆ ಭಿಕ್ಷೆ ಬೇಡಿಯಾದರೂ ಮಕ್ಕಳಿಗೆ ಒಂದು ಹೊತ್ತಿನ ಊಟ ಹಾಕುತ್ತೇನೆ’ ಎಂದು ಸರಕಾರಕ್ಕೆ ಸವಾಲು ಹಾಕಿದ್ದರು. ಇದರಿಂದ ಬೇಸರಗೊಂಡ ಮಂಗಳೂರು ಮೂಲದ ಯುವಕರ ತಂಡವೊಂದು ನಾವೇ ಭಿಕ್ಷಾಟನೆ ಮಾಡಿ ಮಕ್ಕಳಿಗೆ ಅನ್ನ ನೀಡುತ್ತೇವೆ ಎಂಬ ಹೇಳಿಕೆಯ ಮೂಲಕ ಆನ್‌ಲೈನ್‌ನಲ್ಲಿ ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ.
Related Articles
ಯುವಕರ ಈ ಆಂದೋಲನಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಬ್ಯಾಂಕ್ ರಜೆ ಇದ್ದರೂ ಮೂರು ದಿನಗಳಲ್ಲಿ 5.60 ಲಕ್ಷ ರೂ. ಸಂಗ್ರಹವಾಗಿದೆ. 2,600 ಕೆಜಿ ಅಕ್ಕಿಯೂ ಈವರೆಗೆ ಸಂಗ್ರಹವಾಗಿದೆ. ಅಲ್ಲದೆ ಶಾಸಕ ಸಿ.ಟಿ. ರವಿ 1 ಲಕ್ಷ ರೂ. ನೆರವು ನೀಡುವುದಾಗಿ ಟ್ವೀಟರ್‌ನಲ್ಲಿ ಘೋಷಿಸಿದ್ದಾರೆ. ದೇಶ ವಿದೇಶಗಳ ಹಲವಾರು ದಾನಿಗಳು ಲಕ್ಷಾಂತರ ರೂಪಾಯಿ ಘೋಷಿಸಿದ್ದಾರೆ. ಕೆಲವು ಉದ್ಯಮಿಗಳು ಅಕ್ಕಿ ಹಾಗೂ ಇನ್ನಿತರ ವಸ್ತುಗಳನ್ನು ಉಚಿತವಾಗಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.
Advertisement
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಾಪ್, ಟ್ವೀಟರ್‌ಗಳಲ್ಲಿ ಈ ಬಿಕ್ಷಾಮ್ ದೇಹಿ ಆಂದೋಲನ ವೈರಲ್ ಆಗಿದೆ. ಈ ಸಂಸ್ಥೆ ಒಟ್ಟು 80 ಲಕ್ಷ ರೂ. ಬಿಕ್ಷಾಟನೆ ಹೆಸರಿನಲ್ಲಿ ದಾನ ಪಡೆದು ಆ ಹಣವನ್ನು ಕಲ್ಲಡ್ಕ ಪ್ರಭಾಕರ್ ಭಟ್ ನಡೆಸುತ್ತಿರುವ ಶಾಲೆಗಳಿಗೆ ದೇಣಿಗೆ ರೂಪದಲ್ಲಿ ನೀಡಲು ತೀರ್ಮಾನಿಸಿದೆ. ಆ ಮೂಲಕ ಶಾಲೆಗಳ ಅನುದಾನ ಕಡಿತಗೊಳಿಸಿರುವ ರಾಜ್ಯ ಸರಕಾರದ ಕ್ರಮಕ್ಕೆ ಸೆಡ್ಡುಹೊಡೆಯುವ ನಿರ್ಧರಿಸಿರುವುದು ಗಮನಾರ್ಹ. ರಾಜ್ಯ ಸರಕಾರ ಇನ್ನು 8 ತಿಂಗಳ ಕಾಲವಿದ್ದು ಆ 8 ತಿಂಗಳಿಗೆ ಬೇಕಾಗುವ 80 ಲಕ್ಷ ರೂ. ಗಳನ್ನು ಬಿಕ್ಷಾಟನೆ ಮೂಲಕ ಸಂಗ್ರಹಿಸಲು ಈ ತಂಡ ನಿರ್ಧರಿಸಿದೆ.
15 ದಿನಗಳಲ್ಲಿ 80 ಲಕ್ಷದ ಗುರಿಬಡ ಮಕ್ಕಳ ಹೊಟ್ಟೆಯ ಮೇಲೆ ಹೊಡೆದಿರುವ ರಾಜ್ಯ ಸರಕಾರದ ಕ್ರಮದ ವಿರುದ್ಧ ನಾವು ಈ ಅಭಿಯಾನ ಆರಂಭಿಸಿದ್ದೇವೆ. ಇದರಲ್ಲಿ ಯಾವುದೇ ಪಕ್ಷ ಸಂಘಟನೆ ಎನ್ನುವ ಭೇದ ಭಾವವಿಲ್ಲ. ಇನ್ನೂ 15 ದಿನಗಳಲ್ಲಿ 80 ಲಕ್ಷ ರೂ. ಸಂಗ್ರಹ ಮಾಡಿ ಶಾಲೆಗೆ ನೀಡಲಿದ್ದೇವೆ. ಈ ಹಿಂದೆಯೂ ಕಷ್ಟದಲ್ಲಿರುವ ಜನರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ದೇಣಿಗೆ ಸಂಗ್ರಹಿಸಿ ನೀಡಿದ್ದೇವೆ.
– ಮಹೇಶ್, ಆಂದೋಲನದ ಸದಸ್ಯ – ಪ್ರಜ್ಞಾ ಶೆಟ್ಟಿ