Advertisement

ಮಹಿಳಾ ಏಕದಿನ ಕ್ರಿಕೆಟ್‌ ವಿಶ್ವಕಪ್‌: ಆತಿಥೇಯರ ಮಣಿಸಿ ಭಾರತ ಶುಭಾರಂಭ

03:45 AM Jun 25, 2017 | Team Udayavani |

ಡರ್ಬಿ: ಅಗ್ರ ಕ್ರಮಾಂಕದ ಆಟಗಾರ್ತಿಯರ ಭರ್ಜರಿ ಬ್ಯಾಟಿಂಗ್‌, ಬೌಲರ್‌ಗಳ ಚುರುಕಿನ ದಾಳಿಯ ನೆರವಿನಿಂದ ಭಾರತ ತಂಡ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ 3 ಬಾರಿಯ ಚಾಂಪಿಯನ್‌ ಇಂಗ್ಲೆಂಡ್‌ಗೆ 35 ರನ್‌ಗಳಿಂದ ಆಘಾತ ನೀಡಿದೆ. ಈ ಮೂಲಕ ಕೂಟದಲ್ಲಿ ಭಾರತ ಶುಭಾರಂಭ ಮಾಡಿದೆ.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 50 ಓವರ್‌ಗೆ 3 ವಿಕೆಟ್‌ ಕಳೆದುಕೊಂಡು 281 ರನ್‌ ಬಾರಿಸಿತ್ತು. ಗುರಿ ಬೆನ್ನುಹತ್ತಿದ ಇಂಗ್ಲೆಂಡ್‌ 47.3 ಓವರ್‌ನಲ್ಲಿ 246 ರನ್‌ಗೆ ಎಲ್ಲಾ ವಿಕೆಟ್‌ ಕಳೆದುಕೊಂಡು ಸೋಲುಂಡಿತು. ಭಾರತದ ಬಿಗು ದಾಳಿಯನ್ನು ಎದುರಿಸುವಲ್ಲಿ ಬಲಿಷ್ಠ ಇಂಗ್ಲೆಂಡ್‌ ಎಡವಿತು. ಇಂಗ್ಲೆಂಡ್‌ ಪರ ಫಾನ್‌ ವಿಲ್ಸನ್‌ 75 ಎಸೆತದಲ್ಲಿ 6 ಬೌಂಡರಿ ಸೇರಿದಂತೆ 81 ರನ್‌ ಚಚ್ಚಿ ಔಟ್‌ ಆದರೆ, ನಾಯಕಿ ಹೀತರ್‌ ನೈಟ್‌ 69 ಎಸೆತದಲ್ಲಿ 1 ಬೌಂಡಿರಿ 2 ಸಿಕ್ಸರ್‌ ಸೇರಿದಂತೆ 46 ರನ್‌ ಬಾರಿಸಿದಾಗ ರನೌಟ್‌ಗೆ ಬಲಿಯಾದರು. ನಾಲ್ವರು ಬ್ಯಾಟ್ಸ್‌ಮನ್‌ಗಳು ರನೌಟ್‌ಗೆ ಬಲಿಯಾಗಿದ್ದು ಇಂಗ್ಲೆಂಡ್‌ ಆಘಾತವಾಗಿತು. ಭಾರತದ ಪರ ದೀಪ್ತಿ ಶರ್ಮ 3 ವಿಕೆಟ್‌ ಪಡೆದರೆ, ಶಿಖಾ ಪಾಂಡೆ 2 ವಿಕೆಟ್‌ ಪಡೆದರು.

ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಅಬ್ಬರ:
ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಭಾರತ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಪೂನಂ ರಾವತ್‌, ಸ್ಮತಿ ಮಂಧನಾ, ಮಿಥಾಲಿ ರಾಜ್‌ ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ 281 ರನ್‌ ಪೇರಿಸಿತು.

ಆರಂಭಿಕ ಆಟಗಾರ್ತಿಯರಾದ ಸ್ಮತಿ ಮಂಧನಾ-ಪೂನಂ ರಾವತ್‌ ಜೋಡಿಯ 144 ರನ್‌ ಜತೆಯಾಟ, ನಾಯಕಿ ಮಿಥಾಲಿ ರಾಜ್‌ ಅವರ ಅಮೋಘ ಆಟ ಮಹತ್ವ ಪಾತ್ರ ವಹಿಸಿತು. ಇಂಗ್ಲೆಂಡ್‌ ದಾಳಿಯನ್ನು ಪುಡಿಗುಟ್ಟತೊಡಗಿದ ಈ ಮೂವರೂ ಅರ್ಧ ಶತಕ ಬಾರಿಸಿ ಮಿಂಚಿದರು. ಪೂನಂ ಮತ್ತು ಮಂಧನಾಗೆ 2ನೇ ಏಕದಿನ ಶತಕ ಸ್ವಲ್ಪದರಲ್ಲೇ ಕೈತಪ್ಪಿದರೆ, ಮಿಥಾಲಿ ಸತತ 7ನೇ ಅರ್ಧ ಶತಕ ಬಾರಿಸಿ ತಮ್ಮ ಫಾರ್ಮ್ ಏನೆಂಬುದನ್ನು ಮತ್ತೂಮ್ಮೆ ಸಾಬೀತುಪಡಿಸಿದರು.

ಟಾಸ್‌ ಗೆದ್ದ ಇಂಗ್ಲೆಂಡ್‌ ಭಾರತವನ್ನೇ ಮೊದಲು ಬ್ಯಾಟಿಂಗಿಗೆ ಆಹ್ವಾನಿಸಿತು. ಆರಂಭದಲ್ಲೇ ಕೆಲವು ವಿಕೆಟ್‌ಗಳನ್ನು ಹಾರಿಸಿ ಮಿಥಾಲಿ ಬಳಗದ ಮೇಲೆ ಒತ್ತಡ ಹೇರುವುದು ಆತಿಥೇಯರ ಉದ್ದೇಶವಾಗಿತ್ತು. ಆದರೆ ಇದು ಉಲ್ಟಾ ಹೊಡೆಯಿತು. ಮಂಧನಾ-ರಾವತ್‌ 26.5 ಓವರ್‌ಗಳ ತನಕ ಕ್ರೀಸ್‌ ಆಕ್ರಮಿಸಿಕೊಂಡು ಆಂಗ್ಲ ಬೌಲರ್‌ಗಳ ಮೇಲೆ ಪ್ರಹಾರವಿಕ್ಕತೊಡಗಿದರು. ಕ್ಷೇತ್ರರಕ್ಷಕರನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಾಡಿಸಿದರು. ಆತಿಥೇಯರ ಕಳಪೆ ಕ್ಷೇತ್ರರಕ್ಷಣೆ ಕೂಡ ಭಾರತದ ದೊಡ್ಡ ಮೊತ್ತಕ್ಕೆ ತನ್ನ ಕಾಣಿಕೆ ಸಲ್ಲಿಸಿತು.

Advertisement

72 ಎಸೆತಗಳಿಂದ 90 ರನ್‌ ಬಾರಿಸಿದ ಮುಂಬೈ ಎಡಗೈ ಆಟಗಾರ್ತಿ ಸ್ಮತಿ ಮಂಧನಾ ಭಾರತದ ಸರದಿಯ ಟಾಪ್‌ ಸ್ಕೋರರ್‌. ಇವರ 6ನೇ ಅರ್ಧ ಶತಕ 11 ಬೌಂಡರಿ, 2 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಮುಂಬೈನ ಮತ್ತೋರ್ವ ಆಟಗಾರ್ತಿ ಪೂನಂ ರಾವತ್‌ ಅತ್ಯಂತ ನಿಧಾನ ಗತಿಯ ಆಟವನ್ನು ಪ್ರದರ್ಶಿಸಿ 134 ಎಸೆತಗಳಿಂದ 86 ರನ್‌ ಹೊಡೆದರು. ಇದು ಅವರ 9ನೇ ಅರ್ಧ ಶತಕ. ಮಂಧನಾ ಮುನ್ನುಗ್ಗಿ ಬೀಸುತ್ತಿದ್ದ ವೇಳೆ ಪೂನಂ ಇನ್ನೊಂದು ಕಡೆ ವಿಕೆಟ್‌ ಉಳಿಸಿಕೊಳ್ಳುವತ್ತ ಹೆಚ್ಚಿನ ಗಮನ ನೀಡತೊಡಗಿದರು. ಅಂತಿಮ ಎಸೆತದಲ್ಲಿ ಔಟಾದ ಮಿಥಾಲಿ ರಾಜ್‌ ಗಳಿಕೆ 73 ಎಸೆತಗಳಿಂದ 71 ರನ್‌ (8 ಬೌಂಡರಿ). ಒಟ್ಟಾರೆಯಾಗಿ ಇದು ಅವರ 47ನೇ ಹಾಗೂ ಸತತ 7ನೇ ಅರ್ಧ ಶತಕ.

Advertisement

Udayavani is now on Telegram. Click here to join our channel and stay updated with the latest news.

Next