Advertisement

ಸೂರ್ಗೋಳಿಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ

09:18 PM Jan 07, 2020 | mahesh |

ಗೋಳಿಯಂಗಡಿ: ಬೆಳ್ವೆ, ನಾಲ್ಕೂರು, ಹಿಲಿಯಾಣ ಗ್ರಾಮದ ನೂರಾರು ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೂರ್ಗೋಳಿಯಲ್ಲಿ ಸೀತಾನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿದೆ. ಈಗಾಗಲೇ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು, ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಿದೆ.

Advertisement

4.95 ಕೋ.ರೂ. ಅನುದಾನ ಬಿಡುಗಡೆ
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಮುತುವರ್ಜಿಯಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ಈ ಕಿಂಡಿ ಅಣೆಕಟ್ಟು ಮಂಜೂರಾಗಿದ್ದು, ಇದಕ್ಕಾಗಿ 4.95 ಕೋ.ರೂ. ಅನುದಾನ ಬಿಡುಗಡೆಗೊಂಡಿದೆ.

ಕೃಷಿಗೆ ಅನುಕೂಲ
ಗ್ರಾಮೀಣ ಭಾಗದ ಕೃಷಿ ಪ್ರದೇಶಗಳಿಗೆ ಅನುಕೂಲ ವಾಗುವ ಹಾಗೂ ಅಲ್ಲಿನ ಅಂತರ್ಜಲ ವೃದ್ಧಿಯ ಉದ್ದೇಶದಿಂದ ಈ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿದೆ. ಈ ಭಾಗದ ರೈತರ ಬಹು ವರ್ಷಗಳ ಬೇಡಿಕೆ ಇದಾಗಿದೆ. ಮೂರು ಗ್ರಾಮಗಳಾದ ಹಿಲಿಯಾಣ, ನಾಲ್ಕೂರು, ಬೆಳ್ವೆಯ ಊರುಗಳಾದ ಸೂರ್ಗೋಳಿ, ಗುಮ್ಮೊಲ, ಅಬ್ಲಿಕಟ್ಟೆ, ಅರ್ಬಿ, ನಂಚಾರು, ಬೆಳ್ವೆ ಹೀಗೆ ಅನೇಕ ಊರುಗಳ ನೂರಾರು ರೈತರಿಗೆ ಪ್ರಯೋಜನವಾಗಲಿದೆ.

ವಿದ್ಯುತ್‌ ಚಾಲಿತ ಗೇಟು
ಈ ಕಿಂಡಿ ಅಣೆಕಟ್ಟಿನಲ್ಲಿ ಒಟ್ಟು 17 ಗೇಟುಗಳು ಇರಲಿವೆ. ವಿದ್ಯುತ್‌ಚಾಲಿತ ಗೇಟು ಹಾಕಬೇಕೆಂದಾಗ ಬಟನ್‌ ಒತ್ತಿದರೆ ಸಾಕು. ಇದರಿಂದ ಆಗಾಗ ಹಲಗೆ ಹಾಕುವ ಅಥವಾ ತೆಗೆಯುವ ಕಿರಿ-ಕಿರಿ ಇರುವುದಿಲ್ಲ. ಕರೆಂಟ್‌ ಇಲ್ಲದಾಗಲೂ ಮಾನವ ಚಾಲಿತವಾಗಿಯೂ ಗೇಟು ಅಳವಡಿಕೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಒಮ್ಮೆ ಗೇಟು ಹಾಕಲು ಕನಿಷ್ಠ 15 ನಿಮಿಷ ಬೇಕಾಗುತ್ತದೆ ಎನ್ನುವುದಾಗಿ ಇದರ ಕಾಮಗಾರಿ ನಿರ್ವಹಿಸುತ್ತಿರುವ ರತ್ನಾಕರ್‌ ಶೆಟ್ಟಿ ಮಾಹಿತಿ ನೀಡುತ್ತಾರೆ.

ನೀರಿನ ಪ್ರಮಾಣ ಹೆಚ್ಚುವ ನಿರೀಕ್ಷೆ
ಫೆಬ್ರವರಿ, ಮಾರ್ಚ್‌ ಬಂದರೆ ಸಾಕು. ಈ ಭಾಗದ ರೈತರು ಅಡಿಕೆ, ತೆಂಗಿನ ತೋಟ, ಗದ್ದೆಗಳಲ್ಲಿ ತರಕಾರಿ ಮತ್ತಿತರರ ಕೃಷಿ ಚಟುವಟಿಕೆಗಳಿಗೆ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಇದಲ್ಲದೆ ಇಲ್ಲಿ ಮೇ ತಿಂಗಳ ಕೊನೆಯಲ್ಲಿ ಬಾವಿಗಳಲ್ಲಿಯೂ ನೀರು ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದ್ದು, ಆದರೆ ಈ ಕಿಂಡಿ ಅಣೆಕಟ್ಟಿನಿಂದ ಕೃಷಿಗೂ ಅನುಕೂಲವಾಗಲಿದ್ದು, ಬಾವಿಗಳಲ್ಲಿಯೂ ನೀರಿನ ಪ್ರಮಾಣ ಹೆಚ್ಚುವ ನಿರೀಕ್ಷೆ ಈ ಭಾಗದ ಜನರದ್ದಾಗಿದೆ.

Advertisement

ಹೆಕ್ಟೇರ್‌ ಕೃಷಿ ಪ್ರದೇಶ
ಹಿಲಿಯಾಣ, ಬೆಳ್ವೆ, ನಾಲ್ಕೂರು ಗ್ರಾಮಗಳ 120 ಹೆಕ್ಟೇರ್‌ (2 ಸಾವಿರಕ್ಕೂ ಮಿಕ್ಕಿ ಎಕರೆ) ಕೃಷಿ ಭೂಮಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿದೆ. ಈಗಿರುವ ಪಂಪ್‌ಸೆಟ್‌ ಹೊಂದಿರುವ ರೈತರನ್ನು ಹೊರತುಪಡಿಸಿ, ಈ ಭಾಗದ 150ಕ್ಕೂ ಹೆಚ್ಚಿನ ರೈತರು ಇದರ ಲಾಭ ಪಡೆಯಬಹುದು. 4 ಮೀಟರ್‌ವರೆಗೂ ನೀರು ಶೇಖರಣೆಯಾಗುತ್ತದೆ. ಸುತ್ತಮುತ್ತಲಿನ 2 ಕಿ.ಮೀ. ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿ ನೀರು ಸಂಗ್ರಹವಾಗಲಿದ್ದು, ಇದರಿಂದ ಈ ಭಾಗದ ಅಂತರ್ಜಲ ಮಟ್ಟವು ವೃದ್ಧಿಗೆ ಸಹಕಾರಿಯಾಗಲಿದೆ.

ರೈತರಿಗೆ ಪ್ರಯೋಜನ
ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಪ್ರಮುಖವಾಗಿ ಬೆಳ್ವೆ, ನಾಲ್ಕೂರು, ಹಿಲಿಯಾಣ ಗ್ರಾಮಗಳ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಇದರಿಂದ ಕೃಷಿ ಚಟುವಟಿಕೆಗೆ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಆದರೆ ಕಿಂಡಿ ಅಣೆಕಟ್ಟಿನ ಗೇಟು ಅಳವಡಿಕೆ ಕಾರ್ಯ ಸರಿಯಾದ ರೀತಿಯಲ್ಲಿ ಆಗಬೇಕಾಗಿದೆ.
– ಸತೀಶ್‌ ಕಿಣಿ ಬೆಳ್ವೆ, ಪ್ರ. ಕಾರ್ಯದರ್ಶಿ, ರೈತ ಸಂಘದ ಉಡುಪಿ

ಫೆಬ್ರವರಿಯೊಳಗೆ ಪೂರ್ಣ
ಕಳೆದ ವರ್ಷದ ಎಪ್ರಿಲ್‌ನಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಮೇ ಹಾಗೂ ಜೂನ್‌ವರೆಗೆ ಕಾಮಗಾರಿ ನಡೆದಿದ್ದು, ಮಳೆಗೆ ಸ್ಥಗಿತಗೊಳಿಸಿ, ಈಗ ಮತ್ತೆ ಆರಂಭಿಸಲಾಗಿದೆ. ಬಹುತೇಕ ಮುಗಿದಿದ್ದು, ಅಂತಿಮ ಹಂತದ ಕಾಮಗಾರಿ ಬಾಕಿಯಿದ್ದು, ಫೆಬ್ರವರಿಯೊಳಗೆ ಪೂರ್ಣಗೊಳ್ಳಲಿದೆ.
– ರಾಜೇಶ್‌, ಎಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ, ಉಡುಪಿ

ಅಣೆಕಟ್ಟಿಗೆ ಬೇಡಿಕೆ ಇಟ್ಟಿದ್ದೆವು
ಸೀತಾನದಿಯಲ್ಲಿ ಉತ್ತಮ ಪ್ರಮಾಣದ ನೀರಿದ್ದರೂ ಅದು ಈ ಭಾಗದ ರೈತರ ಕೃಷಿಗೆ ಅಷ್ಟೇನೂ ಪ್ರಯೋಜನವಾಗುತ್ತಿರಲಿಲ್ಲ. ಈ ಹಿಂದೆಯೇ ಕಿಂಡಿ ಅಣೆಕಟ್ಟಿಗೆ ಬೇಡಿಕೆ ಇಟ್ಟಿದ್ದೆವು. ಅದೀಗ ನೆರವೇರುತ್ತಿದೆ. ಇದರಿಂದ ಇಲ್ಲಿನ ಅನೇಕ ಅಡಿಕೆ ಕೃಷಿಕರಿಗೆ ನೆರವಾಗಲಿದೆ. ಹೈನುಗಾರರಿಗೂ ಸಾಕಷ್ಟು ಪ್ರಯೋಜನವಾಗಲಿದೆ.
-ಕೃಷ್ಣ ನಾಯ್ಕ ಸೆಟ್ಟೊಳ್ಳಿ, ಕೃಷಿಕರು

 ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next