ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಕಾಳಿ ನದಿಯು ತುಂಬಿ ಹರಿಯುತ್ತಿದೆ. ಕಾಳಿ ನದಿ ಹರಿವ ದಾಂಡೇಲಿ ಹಾಗೂ ಕದ್ರಾ, ಕೊಡಸಳ್ಳಿ ಅಣೆಕಟ್ಟು ಹಿನ್ನೀರು ಪ್ರದೇಶದಲ್ಲಿ ಭಾರೀ ಮಳೆಬಿದ್ದ ಕಾರಣ ಗುರುವಾರ ಮಧ್ಯಾಹ್ನ ೧ ಗಂಟೆಗೆ ಕದ್ರಾ ಅಣೆಕಟ್ಟಿನ ಎಲ್ಲಾ ೮ ಕ್ರಸ್ಟಗೇಟ್ ತೆರೆದು ನೀರನ್ನು ನದಿಗೆ ಹರಿಸಲಾಗಿದೆ.
೧ ಗಂಟೆಯ ಸುಮಾರಿಗೆ ೨೭೩೬೩ ಕ್ಯೂಸೆಕ್ಸ ನೀರನ್ನು ಹೊರ ಬಿಟ್ಟಿರೆ, ಮಧ್ಯಾಹ್ನ ೨ ಗಂಟೆಯ ಸುಮಾರಿಗೆ ೪೨೧೭೫ ಕ್ಯೂಸೆಕ್ಸ ನೀರನ್ನು ನದಿಗೆ ಹರಿಸಲಾಯಿತು. ಈ ವೇಳೆ ಅಣೆಕಟ್ಟಿನಲ್ಲಿ ೩೦.೬೭ ಮೀಟರ್ ಇತ್ತು. ಕೊಡಸಳ್ಳಿ ಅಣೆಕಟ್ಟು ಸಹ ಭರ್ತಿಯಾಗುವ ಲಕ್ಷಣ ಇದ್ದ ಕಾರಣ ನದಿ ದಂಡೆಯ ಜನರಿಗೆ ಪ್ರವಾಹದ ಸನ್ನಿವೇಶ ತಪ್ಪಿಸಲು ಮಧ್ಯಾಹ್ನ ೧ ಗಂಟೆ ಸಮಯಕ್ಕೆ ೨೨೧೪೩ ಕ್ಯೂಸೆಕ್ಸ ನೀರು ಹೊರಗೆ ಬಿಡಲಾಯಿತು. ಅದನ್ನೇ ಮಧ್ಯಾಹ್ನ ೨ ಗಂಟೆ ಸಮಯಕ್ಕೆ ೨೨೩೯೩ ಕ್ಯೂಸೆಕ್ಸ ನೀರನ್ನು ಹೊರಕ್ಕೆ ಬಿಡಲಾಯಿತು. ಕೊಡಸಳ್ಳಿಯ ನಾಲ್ಕು ಕ್ರಸ್ಟಗೇಟ್ ತೆರೆದಿದ್ದು, ಕದ್ರಾ ಅಣೆಕಟ್ಟಿನಿಂದ ೮ ಕ್ರಸ್ಟಗೇಟ್ ತೆರೆದು ನದಿಗೆ ನೀರು ಹರಿಸಲಾಯಿತು.
ಪ್ರವಾಹದ ಸ್ಥಿತಿ ತಪ್ಪಿಸಲು ಕೆಪಿಸಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದೆ. ಅಣೆಕಟ್ಟು ಭರ್ತಿಯಾದ ನಂತರ ನೀರು ಹೊರಬಿಡುವ ಬದಲಿಗೆ , ಸತತ ಮಳೆಯ ಕಾರಣ ನಿರಂತರವಾಗಿ ನದಿಗೆ ನೀರನ್ನು ಹರಿಸಲಾಗುತ್ತಿದೆ. ಸಹಾಯಕ ಕಮಿಷನರ್ ವಿದ್ಯಾಶ್ರೀ ಚಂದರಗಿ ಮತ್ತು ತಹಶೀಲ್ದಾರ ರ‍್ಹೋನಾ ಅಣೆಕಟ್ಟು ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ. ನದಿ ದಂಡೆಯ ಗ್ರಾಮಗಳ ಜನರಿಗೆ ಸೂಕ್ತ ಸುರಕ್ಷತೆಯ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಗುರುವಾರ ರಾತ್ರಿ ೭.೩೦ರ ಸುಮಾರಿಗೆ ಭಾರೀ ಮಳೆ ಕರಾವಳಿಯಲ್ಲಿ ಹಾಗೂ ನದಿಯ ಹಿನ್ನೀರಿನ ಪ್ರದೇಶದಲ್ಲಿ ಸುರಿಯುತ್ತಿದೆ. ಮಳೆ ಸ್ವಲ್ಪ ಬಿಡುವು ನೀಡಿ ಸುರಿಯುತ್ತಿರುವ ಕಾರಣ ಪ್ರವಾಹದ ಸನ್ನಿವೇಶ ಸೃಷ್ಟಿಯಾಗಿಲ್ಲ ಎಂದು ಜಿಲ್ಲಾಡಳಿತ ಸಮಾಧಾನದ ನಿಟ್ಟುಸಿರು ಬಿಟ್ಟಿದೆ. ಕದ್ರಾ ಅಣೆಕಟ್ಟಿನಿಂದ ಇದೇ ಮಳೆಗಾಲದಲ್ಲಿ ನೀರನ್ನು ನದಿಗೆ ಕ್ರಸ್ಟಗೇಟ್ ತೆಗೆದು ಹರಿಸುತ್ತಿರುವುದು ಮೂರನೇ ಸಲ. ಸಾಮಾನ್ಯವಾಗಿ ಅಗಸ್ಟನಲ್ಲಿ ಭರ್ತಿಯಾಗುತ್ತಿದ್ದ ಅಣೆಕಟ್ಟು , ಈ ಸಲ ಜೂನ್ ಮತ್ತು ಜುಲೈ ೨೨ರ ಅವಧಿಯೊಳಗೆ ಮೂರು ಕ್ರಸ್ಟಗೇಟ್ ತೆರೆಯುವಷ್ಟು ಮಳೆ ಬಿದ್ದಿದೆ. ಸುಫಾ ಜಲಾಶಯ ಸಹ ೫೪೩.೪೦ ಮೀಟರ್ ಭರ್ತಿಯಾಗಿದ್ದು, ಪೂರ್ಣ ಪ್ರಮಾಣದಲ್ಲಿ ತುಂಬಲು ಇನ್ನೂ ೨೧ ಮೀಟರ್ ಬೇಕಾಗಿದೆ.
ಕದ್ರಾ ಲೇಬರ್ ಕಾಲೂನಿಯ 48 ಕುಟುಂಬಗಳ 108 ಕ್ಕೂ ಹೆಚ್ಚು ಜನರನ್ನು ಕದ್ರಾ ಶಾಲೆಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕಾಳಜಿ ಕೇಂದ್ರದಲ್ಲಿರುವವರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಗೋವಾ ದಿಂದ ಬರುವ ಸಾಕಳಿಹಳ್ಳ ತುಂಬಿ ಹರಿಯುತ್ತಿದ್ದು, ಆ ಹಳ್ಳದ ನೀರು ಕದ್ರಾ ಬಳಿ ಕಾಳಿನದಿ ಸೇರುತ್ತಿದೆ. ಮೇಘಸ್ಪೋಟದ ಕಾರಣ ಗುರುವಾರ ಅತೀ ಮಳೆಯಾದ ಕಾರಣ ಇದೇ ರಾತ್ರಿ 70000ಕ್ಯೂಸೆಕ್ಸ ನೀರು ನದಿಗೆ ಬಿಡಲಾಗಿದೆ. ಇದು ಬೆಳಿಗ್ಗೆ ಒಂಬತ್ತು ಗಂಟೆತನಕ ಮುಂದುವರಿಯಲಿದೆ. ಮಳೆ ಕಡಿಮೆಯಾದರೆ ಕ್ರಸ್ಟಗೇಟ್ ನೀರು ಹರಿವ ಪ್ರಮಾಣ ತಗ್ಗಲಿದೆ ಎಂದು ಸ್ಥಳದಲ್ಲಿ ಮೊಕ್ಕಾಂ ಮಾಡಿರುವ ಸಹಾಯಕ ಕಮಿಷನರ್ ವಿದ್ಯಾಶ್ರೀ ಚಂದರಗಿ ಉದಯವಾಣಿಗೆ ತಿಳಿಸಿದ್ದಾರೆ. ಗುರುವಾರ ರಾತ್ರಿ ಎಂಟು ಗಂಟೆಗೆ ಪತ್ರಿಕೆ ಪ್ರತಿನಿಧಿ ಜೊತೆ ಮಾತನಾಡಿದರು.