Advertisement

ಹೈಮಾಸ್ಟ್ ದೀಪ ರಾತ್ರಿ  ಉರಿಯದೆ ಸಂಪೂರ್ಣ ಕತ್ತಲು!

10:23 AM Jun 11, 2018 | |

ಮಹಾನಗರ: ಮಂಗಳೂರು ಎಂದರೆ ತತ್‌ಕ್ಷಣ ನೆನಪಾಗುವುದು ಇಲ್ಲಿನ ಸ್ಟೇಟ್‌ಬ್ಯಾಂಕ್‌ ಸರ್ವೀಸ್‌ ಬಸ್‌ ನಿಲ್ದಾಣ. ಹೊರರಾಜ್ಯ, ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಆಗಮಿಸುತ್ತಿದ್ದು, ಆದರೆ ಈ
ನಿಲ್ದಾಣ ಒಂದಿಲ್ಲೊಂದು ಸಮಸ್ಯೆಯಿಂದ ಸದಾ ಸುದ್ದಿಯಲ್ಲಿರುತ್ತದೆ. ಈಗ ನಿಲ್ದಾಣದ ಹೈಮಾಸ್ಟ್‌ ದೀಪ ಉರಿಯದೆ ರಾತ್ರಿಯಾಗುತ್ತಲೇ ನಿಲ್ದಾಣ ಸಂಪೂರ್ಣ ಕತ್ತಲಾಗುವುದು.

Advertisement

ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣವೆಂದರೆ ಅಲ್ಲಿ ರಾತ್ರಿ ವೇಳೆಯೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಇರುತ್ತಾರೆ. ಜತೆಗೆ ದೂರದೂರುಗಳ ಬಸ್‌ ಗಳು ಇರುತ್ತವೆ. ಹೀಗಾಗಿ ನಿಲ್ದಾಣದಲ್ಲಿ ಸುಸಜ್ಜಿತ ಬೆಳಕಿನ ವ್ಯವಸ್ಥೆ ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಬೃಹತ್‌ ಗಾತ್ರದ ಹೈಮಾಸ್ಟ್‌ ದೀಪವನ್ನು ಅಳವಡಿಸಲಾಗಿದೆ. ಆದರೆ ಕೆಲವು ಸಮಯಗಳಿಂದ ಈ ದೀಪ ಉರಿಯದೇ ಇರುವುದರಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ಬಸ್‌ ಚಾಲಕ- ನಿರ್ವಾಹಕರು ಆರೋಪಿಸುತ್ತಿದ್ದಾರೆ.

ಪಿಕ್‌ ಪಾಕೆಟ್‌-ಅನೈತಿಕ ಚಟುವಟಿಕೆ
ನಿಲ್ದಾಣದಲ್ಲಿ ರಾತ್ರಿ ವೇಳೆ ಕಿಡಿಗೇಡಿಗಳ ಕೃತ್ಯಗಳು ಹೆಚ್ಚಿರುತ್ತದೆ. ಪಿಕ್‌ ಪಾಕೆಟ್‌, ಅನೈತಿಕ ಚಟುವಟಿಕೆಗಳ ಆತಂಕವೂ ಇರುತ್ತವೆ. ನಿಲ್ದಾಣ ಸಂಪೂರ್ಣ ಕತ್ತಲೆಯಿಂದ ಕೂಡಿದ್ದರೆ ಇಂತಹ ಕೃತ್ಯ ಗಳಿಗೆ ಅನುಕೂಲವಾಗುತ್ತದೆ. ಪ್ರಯಾಣಿಕರ ಹಣ, ಒಡವೆಗಳನ್ನು ಕಸಿದು ಓಡಿದರೆ ಯಾರೂ ಎಂಬುದೇ ಗೊತ್ತಾಗುವುದಿಲ್ಲ. ಹಿಂದೆಯೂ ಇಂತಹ ಕೃತ್ಯಗಳು ನಡೆದಿದ್ದು, ಹೀಗಾಗಿ ಬೆಳಕಿನ ವ್ಯವಸ್ಥೆ ಅಗತ್ಯವಾಗಿದೆ ಎಂದು ಬಸ್‌ ಸಿಬಂದಿಯ ಆಗ್ರಹವಾಗಿದೆ. 

ಸಮರ್ಪಕ ನಿರ್ವಹಣೆಯಿಲ್ಲ
ಸ್ಟೇಟ್‌ಬ್ಯಾಂಕ್‌ ಸರ್ವೀಸ್‌ ಬಸ್‌ ನಿಲ್ದಾಣಕ್ಕೆ ದಿನವೊಂದಕ್ಕೆ ಒಟ್ಟು 425 ಬಸ್‌ಗಳು ಆಗಮಿಸುತ್ತವೆ. ಈ ಬಸ್‌ಗಳ ನಿಲುಗಡೆಗಾಗಿ ಪ್ರತಿ ಬಸ್‌ಗಳಿಂದಲೂ 35 ರೂ. ಬಸ್‌ಸ್ಟಾಂಡ್  ಚಾರ್ಜ್‌ ತೆಗೆದುಕೊಳ್ಳಲಾಗುತ್ತದೆ. ಆದರೆ ಪಾಲಿಕೆ ನಿಲ್ದಾಣವನ್ನು ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಹೈಮಾಸ್ಟ್‌ ದೀಪದ ಸಮಸ್ಯೆಯ ಜತೆಗೆ ಇಡೀ ನಿಲ್ದಾಣವೇ ಹೊಂಡಗುಂಡಿಗಳಿಂದ ಕೂಡಿದ್ದು, ಈಗ ಮಳೆ ನೀರು ತುಂಬಿಕೊಂಡಿದೆ. ಬಸ್‌ ಶೆಲ್ಟರ್‌ಗಳ ಮೇಲ್ಛಾವಣಿ ಸಂಪೂರ್ಣ ಹೋಗಿದೆ. ಜತೆಗೆ ಪ್ರಯಾಣಿಕರು ಕುಳಿತುಕೊಳ್ಳುವ ಬೆಂಚುಗಳೂ ಮುರಿದು ಬಿದ್ದಿವೆ. ಹೀಗಾಗಿ ಕೇವಲ ಹಣ ತೆಗೆದುಕೊಳ್ಳುವುದು ಬಿಟ್ಟರೆ ಅಭಿವೃದ್ಧಿಯ ಮಾತೇ ಇಲ್ಲ ಎಂದು ಹೇಳಲಾಗುತ್ತಿದೆ.

Advertisement

ಇಂದು ಮನವಿ
ಬಸ್‌ ನಿಲ್ದಾಣದಲ್ಲಿ ನಿಲ್ಲುವ ಪ್ರತಿ ಬಸ್‌ಗಳಿಗೂ ಬಸ್‌ಸ್ಟಾಂಡ್ ಚಾರ್ಜ್‌ ಆಗಿ ಹಿಂದೆ 30 ರೂ. ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈಗ ಬಸ್‌ ನವರಲ್ಲಿ ಯಾವುದೇ ರೀತಿಯ ಮಾತುಕತೆ ನಡೆಸದೆ ಏಕಾಏಕಿ ಅದನ್ನು 35 ರೂ.ಗಳಿಗೆ ಏರಿಸಿದ್ದಾರೆ. ಹೀಗಾಗಿ ಈ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿ ಕೆನರಾ ಬಸ್‌ ಮಾಲಕರ ಸಂಘವು ಜೂ. 11ರಂದು ಮನಪಾ ಮೇಯರ್‌ ಹಾಗೂ ಕಮಿಷನರ್‌ ಅವರಿಗೆ ಮನವಿ ನೀಡಲಿದೆ.

ಶೀಘ್ರ ದುರಸ್ತಿ
ಮಳೆಯ ಕಾರಣದಿಂದ ಹೈಮಾಸ್ಟ್‌ ದೀಪದಲ್ಲಿ ತೊಂದರೆ ಕಂಡುಬಂದಿದೆ. ಈ ಕುರಿತು ನಮಗೆ ಜೂ. 9ರಂದು ದೂರು ಬಂದಿದ್ದು, ಅದೇ ದಿನ ಅದರ ದುರಸ್ತಿ ಕಾರ್ಯ ಆರಂಭಿಸಿದ್ದೇವೆ. ಪ್ರಸ್ತುತ ಅದರ ಹಿಂದಿನ ಕೇಬಲ್‌ ತೆಗೆದು, ಈಗ ಹೊಸ ಕೇಬಲ್‌ ಅಳವಡಿಸಲಿದ್ದೇವೆ. ಜೂ. 11ರಂದು ಹೈಮಾಸ್ಟ್‌ ದೀಪದ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ.
 - ಶ್ರೀಕುಮಾರ್‌
ಸಹಾಯಕ ಎಂಜಿನಿಯರ್‌ (ಎಲೆಕ್ಟ್ರಿಕಲ್‌), ಮನಪಾ

ಎಲ್ಲವೂ ಸಮಸ್ಯೆಯೇ
ಹೈಮಾಸ್ಟ್‌ ದೀಪದ ಜತೆಗೆ ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣದಲ್ಲಿ ಎಲ್ಲವೂ ಸಮಸ್ಯೆಯಿಂದ ಕೂಡಿದೆ. ಆದರೆ ಇದಕ್ಕೆ ಪಾಲಿಕೆಯು ಸ್ಪಂದಿಸುತ್ತಿಲ್ಲ. ಜತೆಗೆ ಪ್ರತಿ ಬಸ್‌ ಗಳಿಂದ ಪಡೆಯುವ ಶುಲ್ಕವನ್ನೂ 5 ರೂ.ಏರಿಸಿದ್ದಾರೆ. ಹೀಗಾಗಿ ಶುಲ್ಕ ಕಡಿಮೆ ಮಾಡುವಂತೆ ಆಗ್ರಹಿಸಿ ನಾವು ಸಂಬಂಧಪಟ್ಟವರಿಗೆ ಮನವಿ ನೀಡಲಿದ್ದೇವೆ.
 - ರಾಜವರ್ಮ ಬಲ್ಲಾಳ್‌
   ಅಧ್ಯಕ್ಷರು, ಕೆನರಾ ಬಸ್‌ ಮಾಲಕರ
   ಸಂಘ

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next