Advertisement

ಮತ್ತೆ ಡೋಕ್ಲಾಂ ಕ್ಯಾತೆ?

10:38 AM Jan 18, 2018 | Team Udayavani |

ಹೊಸದಿಲ್ಲಿ: ಕೆಲವು ತಿಂಗಳ ಹಿಂದಷ್ಟೇ ಮಾತುಕತೆ ಮೂಲಕ ಪರಿಹಾರವಾಗಿದ್ದ ಡೋಕ್ಲಾಂ ಗಡಿ ವಿವಾದ ಇದೀಗ ಮತ್ತೆ ಭುಗಿಲೆದ್ದಂತಿದೆ. ಚೀನ ಸೇನೆ ಡೋಕ್ಲಾಂನಲ್ಲಿ ಸುಸಜ್ಜಿತ ಮಿಲಿಟರಿ ಕ್ಯಾಂಪ್‌ ನಿರ್ಮಿಸಿರುವುದಾಗಿ ಇತ್ತೀಚೆಗಿನ ಸ್ಯಾಟಲೈಟ್‌ ಚಿತ್ರದಲ್ಲಿ ತಿಳಿದುಬಂದಿದೆ ಎಂದು “ಎನ್‌ಡಿಟಿವಿ’ ವರದಿ ಮಾಡಿದೆ. .

Advertisement

ಈ ವಿವಾದಿತ 10 ಕಿ.ಮೀ ವ್ಯಾಪ್ತಿಯ ಭೂಭಾಗದಲ್ಲೇ ಹಲವು ಕಟ್ಟಡಗಳನ್ನು ಚೀನ ನಿರ್ಮಿಸಿರುವುದು ಕಂಡುಬಂದಿದೆ.ಅಲ್ಲದೆ ಇದೇ ವಿವಾದಿತ ಪ್ರದೇಶದಲ್ಲಿ ಎರಡು ಹೆಲಿಪ್ಯಾಡ್‌ಗಳನ್ನು ಚೀನ ನಿರ್ಮಿಸಿದೆ. ಅಷ್ಟೇ ಅಲ್ಲ, ಶಸ್ತ್ರಾಸ್ತ್ರಗಳನ್ನು ಅವಿತಿಡಲು ಬೃಹತ್‌ ಹೊಂಡಗಳನ್ನು ತೋಡಲಾಗಿದೆ. ಸ್ಯಾಟಲೈಟ್‌ ಚಿತ್ರಗಳಲ್ಲಿ ಶಸ್ತ್ರಾಸ್ತ್ರಗಳು ಕಂಡುಬಂದಿಲ್ಲವಾದರೂ, ಈ ಹೊಂಡಗಳು ಶಸ್ತ್ರಾಸ್ತ್ರಗಳನ್ನು ಅವಿತಿಡುವ ಉದ್ದೇಶದಿಂದಲೇ ನಿರ್ಮಿಸಲಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಭಾಗಕ್ಕೆ ಯಾವುದೇ ಶಸ್ತ್ರಾಸ್ತ್ರವನ್ನು ಸಾಗಿಸಬಾರದು ಎಂದು ಭಾರತ ಹಿಂದಿನಿಂದಲೂ ಚೀನಗೆ ತಾಕೀತು ಮಾಡುತ್ತಲೇ ಇತ್ತು. ಆದರೆ ಇದನ್ನು ಮೀರಿ ಚೀನ ಈ ಕ್ರಮ ಕೈಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ  ಈ ಭಾಗದಲ್ಲಿದ್ದ ಕಚ್ಚಾ ದಾರಿಯನ್ನು ಅಗಲಗೊಳಿಸಿ, ಸುಸಜ್ಜಿತ ರಸ್ತೆಯನ್ನಾಗಿ ನಿರ್ಮಿಸಲಾಗಿದೆ.

ಈ ಸ್ಯಾಟಲೈಟ್‌ ಚಿತ್ರಗಳು ಜನಸಾಮಾನ್ಯರಿಗೂ ಲಭ್ಯವಿದ್ದು, ಡಿಸೆಂಬರ್‌ನಲ್ಲಿ ಗೂಗಲ್‌ ಅರ್ಥ್ ತೆಗೆದ ಚಿತ್ರಗಳು ಎಂದು ಹೇಳಲಾಗಿದೆ. ಹೀಗಾಗಿ ಚೀನ ಸೇನೆ ಈ ಭಾಗದಿಂದ ಇನ್ನೂ ಕಾಲ್ಕಿತ್ತಿಲ್ಲ ಎಂದು ಹೇಳಲಾಗುತ್ತಿದೆ. ಕಳೆದ ವರ್ಷದ ಆರಂಭದಲ್ಲಿ ಶುರುವಾಗಿದ್ದ ಡೋಕ್ಲಾಂ ವಿವಾದ ಆಗಸ್ಟ್‌ನಲ್ಲಿ ಮಾತುಕತೆಯ ಮೂಲಕ ಕೊನೆಗೊಂಡಿತ್ತು. ಚೀನ ಸೇನೆ ವಿವಾದಿತ ಭೂಮಿಯಲ್ಲಿ ರಸ್ತೆ ನಿರ್ಮಿಸಲು ಮುಂದಾಗಿತ್ತು. ಅಲ್ಲದೆ ಭಾರೀ ಪಡೆ ಒಳನುಸುಳುವ ಯತ್ನ ನಡೆಸಿತ್ತು. ಇದನ್ನು ತಡೆಯಲು ಭಾರತ ಕೂಡ ಭಾರೀ ಪ್ರಮಾಣದ ಸೇನೆಯನ್ನು ಡೋಕ್ಲಾಂನಲ್ಲಿ ನಿಯೋಜಿಸಿತ್ತು. ಈ ಸನ್ನಿವೇಶ ಸುಮಾರು 73 ದಿನಗಳವರೆಗೆ ನಡೆದಿತ್ತು. ಇದರಿಂದ ಉಭಯ ದೇಶಗಳ ಮಧ್ಯೆ  ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. 

ಎಲ್ಲದಕ್ಕೂ ಸಿದ್ಧವಾಗಬೇಕು 
ಭಾರತ ಮತ್ತು ಚೀನ ಸಂಬಂಧ ಡೋಕ್ಲಾಂ ವಿವಾದಕ್ಕೂ ಮೊದಲಿದ್ದ ಸ್ಥಿತಿಗೆ ಮರಳಿದೆ. ಆದರೆ ಭಾರತ ಯಾವುದೇ ಸನ್ನಿವೇಶಕ್ಕೂ ತಯಾರಾಗಿರಬೇಕು ಎಂದು ಭೂಸೇನಾ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಹೇಳಿದ್ದಾರೆ. ಡೋಕ್ಲಾಂ ತೀರಾ ಗಂಭೀರವಾದದ್ದಲ್ಲ. ಆದರೆ ಪಾಕಿಸ್ಥಾನದ ಗಡಿಯ ಬಗ್ಗೆ ಹೆಚ್ಚು ಒತ್ತು ನೀಡುವುದರ ಬದಲಿಗೆ ನಾವು ಚೀನ ಗಡಿಯ ಬಗ್ಗೆ ಗಮನ ಹರಿಸಬೇಕಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಉಗ್ರರ ಕೈಗೆ ಶಸ್ತ್ರಾಸ್ತ್ರಗಳು ಸಿಗುವುದ ರಿಂದ ಅಪಾಯವಿದೆ ಎಂದೂ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next