Advertisement

Ram Mandir ಉದ್ಘಾಟನೆಗೆ ಶೃಂಗೇರಿ, ಕಂಚಿ ಶ್ರೀಗಳ ಪೂರ್ಣ ಆಶೀರ್ವಾದ

11:56 PM Jan 15, 2024 | Team Udayavani |

ಹೊಸದಿಲ್ಲಿ: ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಜ. 22ಕ್ಕೆ ಪ್ರಾಣಪ್ರತಿಷ್ಠೆ ಮಾಡಲು ತಮ್ಮ ಸಂಪೂರ್ಣ ಸಮ್ಮತಿ ಇದೆ ಎಂದು ಶೃಂಗೇರಿ ಶಾರದಾ ಶಂಕರಪೀಠ, ಕಂಚಿ ಕಾಮಕೋಟಿ ಶಂಕರಪೀಠಗಳು ತಿಳಿಸಿವೆ. ಅಲ್ಲಿಗೆ ಮಂದಿರ ಉದ್ಘಾಟನೆಯ ಬಗ್ಗೆ ಇಬ್ಬರು ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದಾರೆಂಬ ವದಂತಿ ಗಳಿಗೆ ಅಧಿಕೃತವಾಗಿ ತೆರೆ ಎಳೆಯಲಾಗಿದೆ. ಹಾಗೆಯೇ ಬದ ರಿಯ ಜ್ಯೋತಿಪೀಠ, ದ್ವಾರಕೆಯ ಶಾರದಾಪೀಠದ ಶಂಕರಾ ಚಾರ್ಯರು, ಪ್ರಾಣಪ್ರತಿಷ್ಠಾಪನೆಯ ಬಗ್ಗೆ ಭಿನ್ನ ನಿಲುವು ವ್ಯಕ್ತ ಪಡಿಸಿದ್ದರಿಂದ ಉಂಟಾಗಿದ್ದ ಗೊಂದಲಗಳೂ ನಿವಾರಣೆಯಾಗಿವೆ.

Advertisement

ಶೃಂಗೇರಿ ಶಾರದಾ ಪೀಠ ಹೇಳಿದ್ದೇನು?
ಶಂಕರಾಚಾರ್ಯರಿಂದ ನಿರ್ಮಿತಗೊಂಡ ಶೃಂಗೇರಿ ಶಾರದಾ ಪೀಠ, ಶಾಸ್ತ್ರೀಯವಾಗಿ ದಕ್ಷಿಣಾಮ್ನಾಯ ಶಂಕರಪೀಠವೆಂದು ಕರೆಸಿಕೊಂಡಿದೆ. ಶೃಂಗೇರಿ ಶಂಕರಪೀಠದಿಂದ ಮಂದಿರ ಪ್ರಾಣಪ್ರತಿಷ್ಠಾಪನೆಯ ಹೇಳಿಕೆ ಬಿಡುಗಡೆಯಾಗಿದ್ದು, ಮಂದಿರದ ಎಲ್ಲ ವಿಧಿಗಳೂ ಹಿಂದೂ ಸಂಪ್ರದಾಯಗಳಿಗೆ ತಕ್ಕಂತೆಯೇ ಇವೆ. ದೇಶದ ಪ್ರತಿನಿಧಿಯಾಗಿರುವ ಮೋದಿ ಪುರೋಹಿತರ ನಿರ್ದೇಶನದಂತೆ ವಿಧಿಗಳನ್ನು ನೆರವೇರಿಸಲು ಎಲ್ಲ ಅಧಿಕಾರ ಹೊಂದಿದ್ದಾರೆಂದು ಹೇಳಲಾಗಿದೆ. ಶೃಂಗೇರಿ ಸಂಸ್ಥಾನದ ಪರವಾಗಿ ಹೇಳಿಕೆ ನೀಡಿರುವ ಧರ್ಮಾಧಿಕಾರಿ ದೈವಜ್ಞ ಕೆ.ಎನ್‌.ಸೋಮಯಾಜಿ “ಒಂದು ಬಾರಿ ಗರ್ಭಗೃಹ ನಿರ್ಮಾಣ ಪೂರ್ಣವಾದ ಅನಂತರ ಪ್ರಾಣಪ್ರತಿಷ್ಠಾಪನೆಗೆ ಅಡ್ಡಿಯಿಲ್ಲ. ಈ ಸಂಬಂಧ ಎದ್ದಿರುವ ಆಕ್ಷೇಪಗಳಿಗೂ ಹಿಂದೂ ಧರ್ಮಕ್ಕೂ ಸಂಬಂಧ ಇಲ್ಲ. ವೇದಗಳ ಪ್ರಕಾರ ಗರ್ಭಗೃಹ ನಿರ್ಮಾಣವಾದ ಮೇಲೆ ಪ್ರಾಣಪ್ರತಿಷ್ಠಾಪನೆ ಮಾಡಬಹುದು. ದೇಗುಲದ ಇತರ ಭಾಗಗಳ ನಿರ್ಮಾಣ ಒಂದು ದೀರ್ಘ‌ ಪ್ರಕ್ರಿಯೆ. ಅದನ್ನು 2-3 ತಲೆಮಾರುಗಳವರೆಗೂ ನಡೆಸಬಹುದು’ ಎಂದು ತಿಳಿಸಿದ್ದಾರೆ.

ಕಂಚಿ ಕಾಮಕೋಟಿ ಶ್ರೀಗಳು ಹೇಳಿದ್ದೇನು?
ಕಂಚಿ ಕಾಮಕೋಟಿ ಶಂಕರ ಪೀಠದ ಶ್ರೀಗಳಾದ ವಿಜಯೇಂದ್ರ ಸರಸ್ವತೀ ಸ್ವಾಮಿಗಳು ಹೇಳಿಕೆ ನೀಡಿ, “ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಕ್ರಿಯೆಗಳಿಗೆ ಶ್ರೀರಾಮನ ಆಶೀರ್ವಾದವಿದೆ. 100 ವಿದ್ವಾಂಸರು ಪೂಜೆ ಮತ್ತು ಹವನ ನಡೆಸಲಿದ್ದಾರೆ. ಪ್ರಧಾನಿ ಮೋದಿಗೆ ದೇಶದ ಧಾರ್ಮಿಕ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಶ್ರದ್ಧೆಯಿದೆ. ಈಗಾಗಲೇ ಕೇದಾರನಾಥ ಮತ್ತು ಕಾಶಿ ವಿಶ್ವನಾಥ ಮಂದಿರ ಆವರಣವನ್ನು ಸುಂದರಗೊಳಿಸಿದ್ದಾರೆ’ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next