Advertisement

ಸಾಂಘವಾಗಿ ನೆರವೇರಿದ ಜಾತ್ರೆ

03:59 PM Jan 31, 2021 | Team Udayavani |

ಕೊಪ್ಪಳ: ದಕ್ಷಿಣ ಭಾರತದ ಕುಂಭ ಮೇಳ ಎಂದೇ ಖ್ಯಾತಿ ಪಡೆದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರಜಾತ್ರಾ ಮಹೋತ್ಸವದ ರಥೋತ್ಸವ ಕೋವಿಡ್‌ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 8:45ರ ಸುಮಾರಿಗೆ ಸರಳವಾಗಿ ನೆರವೇರಿತು.

Advertisement

ಮಹಾ ರಥೋತ್ಸವ ಪ್ರತಿವರ್ಷ ಸಂಜೆ ಲಕ್ಷಾಂತರ ಭಕ್ತರ ಮಧ್ಯೆ ಸಾಂಘವಾಗಿ ನೆರವೇರುತ್ತಿತ್ತು. ಆದರೆ ಕೋವಿಡ್‌ ಕಾರಣ ಸರ್ಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಗೊಳಪಟ್ಟು, ಸಂಪ್ರದಾಯವನ್ನೂ ಮೀರದೆ ಭಕ್ತರ ಮನಕ್ಕೂ ನೋವಾಗದಂತೆ ಕೆಲವೇ ಭಕ್ತರ ಸಮ್ಮುಖದಲ್ಲಿ ಸಾಂಘವಾಗಿ ನೆರವೇರಿತು. ಕೋವಿಡ್‌ ಹಿನ್ನೆಲೆಯಲ್ಲಿ ನಾಡಿನ ಪ್ರಸಿದ್ಧ ಮಠಮಾನ್ಯಗಳು ಜಾತ್ರಾ ಮಹೋತ್ಸವ ರದ್ದುಪಡಿಸಿದ್ದರೆ, ಕೊಪ್ಪಳ ಗವಿಮಠವು ಎಲ್ಲರಿಗೂ ಮಾದರಿ ಎಂಬಂತೆ ಭಕ್ತರ ಹಿತ ಕಾಪಾಡುವುದರ ಜತೆಗೆ ಸರಳವಾಗಿ ಜಾತ್ರೆ ನೆರವೇರಿಸಿತು.

ಮಹಾ ರಥೋತ್ಸವ ಶನಿವಾರ ಬೆಳಗ್ಗೆ 8:45 ಗಂಟೆಗೆ ನೆರವೇರಲಿದೆ ಎಂಬ ಸಂದೇಶ ಗವಿಮಠದಿಂದ ಶುಕ್ರವಾರ ರಾತ್ರಿ ಪ್ರಕಟಗೊಳ್ಳುತ್ತಿದ್ದಂತೆ, ಭಕ್ತರು ರಾತ್ರಿಯೇ ಗವಿಸಿದ್ದೇಶ್ವರನನ್ನು ನೆನೆಯುತ್ತ, ಹಾಕುತ್ತ ಗ್ರಾಮದಿಂದ ಕಾಲ್ನಡಿಗೆ ಮೂಲಕ ಗವಿಮಠಕ್ಕೆ ಬಂದು ಜಮಾಯಿಸಿದರು. ಮಠದ ಆವರಣದಿಂದ ದೂರವೇ ನಿಂತು ಮಹಾ ರಥೋತ್ಸವವನ್ನು ಕಣ್ಮನತುಂಬಿಕೊಂಡರು.

ಬಿಜಕಲ್‌ ಶ್ರೀಗಳಿಂದ ರಥೋತ್ಸವಕ್ಕೆ ಚಾಲನೆ: ಮಹಾಮಾರಿ ಕೋವಿಡ್‌ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದು ಕೋವಿಡ್‌ ಗೆದ್ದ 82 ವರ್ಷದ ಕುಷ್ಟಗಿ ತಾಲೂಕಿನ ಬಿಜಕಲ್‌ ಮಠದ ಶ್ರೀ ಶಿವಲಿಂಗ ಮಹಾ ಸ್ವಾಮಿಗಳು ಈ ಬಾರಿಯ ಶ್ರೀ ಗವಿಸಿದ್ದೇಶ್ವರ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು.

ಇದನ್ನೂ ಓದಿ:ಲಿಂಗ ಅಸಮಾನತೆ ತೊಲಗಿಸಲು ಶ್ರಮಿಸಿ

Advertisement

ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯು ಸಮಾನತೆಯ ಯಾತ್ರೆಯಾಗಿದೆ. ಇಲ್ಲಿ ಜಾತಿ-ಬೇಧ, ಮೇಲು-ಕೀಳೆಂಬ ಭಾವನೆಯಿಲ್ಲ. ಭಕ್ತರ ಮನಸ್ಸಿನಲ್ಲೂ ಶ್ರೀ ಗವಿಸಿದ್ದೇಶ್ವರರು ನೆಲೆಸಿದ್ದಾರೆ. ಇದೊಂದು ಪುಣ್ಯದ ಜಾತ್ರೆ ಎಂದರು. ನನಗೆ ಇಳಿ ವಯಸ್ಸಿನಲ್ಲಿ ಕೋವಿಡ್‌ ಸೋಂಕು ತಗುಲಿತ್ತು. ಕೊಪ್ಪಳದ ಶ್ರೀ ಗವಿಸಿದ್ದೇಶ್ವರರ ಆಶೀರ್ವಾದದಿಂದ ಆಸ್ಪತ್ರೆಯಲ್ಲಿ ಸೋಂಕಿನೊಂದಿಗೆ ಹೋರಾಟ ನಡೆಸಿ, ಚಿಕಿತ್ಸೆ ಪಡೆದು ಗುಣಮುಖನಾಗಿದ್ದೇನೆ. ಗವಿಸಿದ್ದೇಶ್ವರ ಕೃಪೆ, ಆಶೀರ್ವಾದದಿಂದ ಈ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದ್ದು, ಅವರು ನನಗೆ ಪುನರ್ಜನ್ಮ ನೀಡಿದ್ದಾರೆ. ರಥೋತ್ಸವಕ್ಕೆ ಚಾಲನೆ ನೀಡುವಂತೆನನಗೆ ಅವರೇ ಅಪ್ಪಣೆಯನ್ನಿತ್ತ ಹಿನ್ನೆಲೆಯಲ್ಲಿ ಅಪ್ಪಣೆ ಮೀರಬಾರದೆಂದು ಜಾತ್ರೋತ್ಸವಕ್ಕೆ ಚಾಲನೆ ನೀಡಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next