Advertisement

ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣಬದ್ಧ

06:18 PM Nov 11, 2021 | Team Udayavani |

ಹಾವೇರಿ: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವ ಮೂಲಕ ನಿಮ್ಮ ಸೇವಕನಾಗಿ, ನಿಮ್ಮಗಳ ಜತೆ ಸದಾ ಇರುತ್ತೇನೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಅಂದಾಜು 1.75 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

Advertisement

ನಾನು ಶಾಸಕನಲ್ಲ, ನಿಮ್ಮ ಸೇವಕ. ನಿಮ್ಮ ಮನೆಯ ಮಗನಾಗಿ ಪ್ರಾಮಾಣಿಕವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇನೆ. ನೀವೆಲ್ಲರೂ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿ ಗ್ರಾಮವನ್ನು ಅಭಿವೃದ್ಧಿಪಡಿಸುವಲ್ಲಿ ನಿಗಾ ವಹಿಸಬೇಕು ಎಂದರು. ಇದೇ ಗ್ರಾಮದಲ್ಲಿ ಆರು ತಿಂಗಳಲ್ಲಿ ಗ್ರಾಮೀಣಾಭಿ ವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪನವರನ್ನು ಕರೆಸಿ ಈ ಕಾಮಗಾರಿಗಳ ಉದ್ಘಾಟನೆ ನೆರವೇರಿಸಲಾಗುವುದು.

ಡಿ.9ಕ್ಕೆ ನಾನು ಗೆದ್ದು ಎರಡು ವರ್ಷ ತುಂಬಲಿವೆ. ಇದರ ನಿಮಿತ್ತ ಅಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರನ್ನು ರಾಣಿಬೆನ್ನೂರ ನಗರಕ್ಕೆ ಆಹ್ವಾನಿಸಿ ಮಹಿಳಾ ಸಂಘಗಳಿಗೆ 4.36 ಲಕ್ಷ ರೂ. ಚೆಕ್‌ ವಿತರಣೆ, 11ಸಾವಿರ ಮಹಿಳೆಯರಿಗೆ ಒಂದೇ ತೆರನಾದ ಸೀರೆ ವಿತರಿಸಲಾಗುವುದು ಎಂದರು. ಗ್ರಾಮದಲ್ಲಿ ನಿರುದ್ಯೋಗ ಸಮಸ್ಯೆ ತುಂಬಾ ಇದೆ. ಈ ನಿಟ್ಟಿನಲ್ಲಿ ಯುವಕರಿಗೆ ಮತ್ತು ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮಹಿಳೆಯರಿಗಾಗಿ ಸ್ವಂತ ಖರ್ಚಿನಲ್ಲಿ ಗಾರ್ಮೆಂಟ್‌ ತೆರೆಯುವುದಾಗಿ ಭರವಸೆ ನೀಡಿದರು.

ನಾನು ಗೆದ್ದು ಬಂದಾಗ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತು ಕೊಟ್ಟಿದ್ದೆ. ಅದರಂತೆ ತುಮ್ಮಿನಕಟ್ಟಿ ಗ್ರಾಮಕ್ಕೆ ಅನುದಾನ ನೀಡಿದ್ದೇನೆ. ಸರ್ಕಾರದಿಂದ ಹಣ ಬಂದಿಲ್ಲವಾದರೂ ನಾನು ಹೆಚ್ಚಿನ ಹಣ ಖರ್ಚು ಮಾಡಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಗ್ರಾಮಸ್ಥರು ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಹಕಾರ ನೀಡಬೇಕು. ಅಂದಾಗ ಗ್ರಾಮದ ಅಭಿವೃದ್ಧಿಗೆ ತಾವು ನೆರವಾದಂತಾಗುತ್ತದೆ. ಅಲ್ಪಸಂಖ್ಯಾತರು ನಮ್ಮವರೇ ಆಗಿದ್ದಾರೆ. ಆದ್ದರಿಂದ, ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ಮಾಡುತ್ತಿದ್ದೇವೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿಪಡಿಸಿ ಸ್ಮಾರ್ಟ್‌ ಕ್ಲಾಸ್‌ ಮಾಡಲಾಗುವುದು. ಕೊಟ್ಟ ಮಾತಿನಂತೆ ಕೆಲಸ ಮಾಡಿ ತೋರಿಸುವೆ ಎಂದು ತಿಳಿಸಿದರು.

Advertisement

ಗ್ರಾಪಂ ಅಧ್ಯಕ್ಷೆ ಜ್ಯೋತಿ ಉಪ್ಪಿನ ಮಾತನಾಡಿ, ಗ್ರಾಮದಲ್ಲಿ ಬಹಳಷ್ಟು ಜನ ನೇಕಾರರು ಇದ್ದಾರೆ. ಆದ್ದರಿಂದ ಅವರಿಗೆ ಉದ್ಯೋಗ ಒದಗಿಸಿಕೊಡಲು ಜವಳಿ ಪಾರ್ಕ್‌ ನಿರ್ಮಿಸಿಕೊಡಬೇಕು. ಇ-ಸ್ವತ್ತು ನೀಡಲು ಗ್ರಾಮದಲ್ಲಿ ಸಮಸ್ಯೆಯಾಗುತ್ತಿದೆ. ಆದ್ದರಿಂದ ತುಮ್ಮಿನಕಟ್ಟಿಯನ್ನು ಗ್ರಾಮ ಠಾಣಾ ವ್ಯಾಪ್ತಿಗೆ ವಿಸ್ತರಣೆ ಮಾಡಿಕೊಡಬೇಕು. ಶತಮಾನ ಕಂಡ ಗಂಡು ಮಕ್ಕಳ ಶಾಲೆ ಅವನತಿಯತ್ತ ಸಾಗುತ್ತಿದೆ. ಶಾಲೆಯಲ್ಲಿ 150ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಆದ್ದರಿಂದ ಹೆಚ್ಚಿನ ಶಿಕ್ಷಕರ ನೇಮಕಾತಿ ಸೇರಿ ಸಮಗ್ರ ಶಾಲೆ ಅಭಿವೃದ್ಧಿ ಪಡಿಸಬೇಕು. ಸ್ಮಶಾನ ಭೂಮಿ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ಜಿಪಂ ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ, ಗ್ರಾಪಂ ಉಪಾಧ್ಯಕ್ಷೆ ರತ್ನಮ್ಮ ಮಾರ್ಗಣ್ಣನವರ, ಪ್ರಮುಖರಾದ ಚೋಳಪ್ಪ ಕಸವಾಳ, ಮಂಜಯ್ಯ ಚಾವಡಿ, ಯಶೋಧಾ ಗಂಜಾಮದ, ಕಾವ್ಯಾ ಗೋವಿನಹಾಳ, ಅಂಬಿಕಾ ಶೇಷಗಿರಿ, ನಾರಾಯಣಪ್ಪ ದುರಗೇರ, ಬಸವರಾಜ ಕೇಲಗಾರ, ಮಾಲತೇಶ ಗಡ್ಡಾದ, ಕುಬೇರಪ್ಪ ವದರದ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next