Advertisement

ಇಂಧನ ಬೆಲೆ: ಗ್ರಾಹಕರ ಮೇಲಿನ ಹೊರೆ ತಪ್ಪಿಸಲಿ ಕೇಂದ್ರ

12:14 AM Oct 07, 2021 | Team Udayavani |

ದೇಶದಲ್ಲಿ ಮತ್ತೆ ಇಂಧನ ಬೆಲೆ ಏರುಗತಿಯಲ್ಲಿದೆ. ಬುಧವಾರ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಮತ್ತೆ 15 ರೂ.ಗಳಷ್ಟು ಏರಿಕೆಯಾಗಿದ್ದರೆ ಪೆಟ್ರೋಲ್‌ ಲೀ. ಗೆ 30 ಪೈಸೆ ಮತ್ತು ಡೀಸೆಲ್‌ ಲೀ.ಗೆ 35 ಪೈಸೆಗಳಷ್ಟು ಹೆಚ್ಚಿದೆ.

Advertisement

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಒಂದೇ ಸಮನೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ತೈಲ ಕಂಪೆನಿಗಳು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುತ್ತಿವೆ. ಕೇಂದ್ರ ಸರಕಾರ ಕೂಡ ಇದೇ ಮಂತ್ರವನ್ನು ಜಪಿಸುತ್ತಿದೆ. ಬೆಲೆ ಇಳಿಕೆಯ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗದೆ ತನ್ನ ತಿಜೋರಿಯನ್ನು ತುಂಬಿಸಿಕೊಳ್ಳುವುದಕ್ಕಷ್ಟೇ ಸೀಮಿತವಾಗಿದೆ.

ಈ ವರ್ಷದ ಜುಲೈಯಿಂದೀಚೆಗೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 90 ರೂ. ಗಳಷ್ಟು ಏರಿಕೆಯಾಗಿದೆ. ಜುಲೈ ಆರಂಭದಲ್ಲಿ ಸಿಲಿಂಡರ್‌ಗೆ 25 ರೂ. ಹೆಚ್ಚಳವಾಗಿದ್ದರೆ ಆ. 18 ರಂದು 25 ರೂ. ಹಾಗೂ ಸೆ. 1ರಂದು 25 ರೂ. ಹೆಚ್ಚಿಸಲಾಗಿತ್ತು. ಇದೀಗ ಮತ್ತೆ 15 ರೂ. ಹೆಚ್ಚಿಸಲಾಗಿದೆ. ಈಗಾಗಲೇ 900 ರೂ. ಗಡಿ ಯನ್ನು ದಾಟಿರುವ ಎಲ್‌ಪಿಜಿ ಸಿಲಿಂಡರ್‌ ಬೆಲೆ ಗ್ರಾಹಕರ ಕೈ ಸುಡುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಸದ್ಯದ ಪರಿಸ್ಥಿತಿಯನ್ನು ಅವಲೋಕಿ ಸಿದಲ್ಲಿ ತಿಂಗಳ ಅವಧಿಯಲ್ಲಿ ಸಿಲಿಂಡರ್‌ ಬೆಲೆ ಸಾವಿರದ ಗಡಿ ದಾಟುವುದರಲ್ಲಿ ಯಾವುದೇ ಸಂಶಯವಿಲ್ಲ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಂತೂ ನಿರಂತರವಾಗಿ ಹೆಚ್ಚುತ್ತಲೇ ಸಾಗಿದ್ದು ಗ್ರಾಹಕರ ಮೇಲೆ ಭಾರೀ ಹೊರೆ ಬೀಳುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಈಗ ಕಳೆದ ಏಳು ವರ್ಷಗಳ ಅವಧಿಯಲ್ಲಿ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಸದ್ಯ ಬ್ರೆಂಟ್‌ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 82.92 ಅಮೆರಿಕನ್‌ ಡಾಲರ್‌ಗಳಷ್ಟಾಗಿದೆ. ಇದರ ಪರಿಣಾಮವಾಗಿ ಜಾಗತಿಕವಾಗಿ ತೈಲ ಬೆಲೆಗಳು ಹೆಚ್ಚುತ್ತಿವೆ. ಸಹಜವಾಗಿಯೇ ಭಾರತದಲ್ಲಿಯೂ ಇಂಧನ ಬೆಲೆ ಗಗನಮುಖೀ­ಯಾಗಿದೆ. ತೈಲ ಕಂಪೆನಿಗಳು ಮತ್ತು ಕೇಂದ್ರ ಸರಕಾರ ಕೂಡ ತೈಲ ಬೆಲೆ ಏರಿಕೆಗೆ ಇದೇ ಸಮರ್ಥನೆಯನ್ನು ನೀಡುತ್ತಲಿವೆ.

ಇದನ್ನೂ ಓದಿ:ಕೋವಿಡ್‌ ಲಸಿಕೆ ಭೀತಿ ಇರುವವರ ಸಂಖ್ಯೆ ಶೇ.7ಕ್ಕೆ ಇಳಿಕೆ

Advertisement

ಈ ಪರಿಸ್ಥಿತಿಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಸೇರಿಕೊಂಡು ನಿಯಂತ್ರಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೀಡಿರುವ ಹೇಳಿಕೆ ಸಮಂಜಸ ಎಂದೆನಿಸಿದರೂ ಈ ಕಾರ್ಯಕ್ಕೆ ಕೇಂದ್ರವೇ ಮುಂದಾಗುವ ಮೂಲಕ ರಾಜ್ಯ ಸರಕಾರಗಳಿಗೇಕೆ ಮಾದರಿಯಾಗಬಾರದು ಎಂಬುದು ಸದ್ಯ ಜನಸಾಮಾನ್ಯರನ್ನು ಕಾಡುತ್ತಿರುವ ಪ್ರಶ್ನೆ. ಚುನಾವಣೆ, ಸಂಸತ್‌ ಅಧಿವೇಶನ ಇದ್ದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಎಷ್ಟೇ ಹೆಚ್ಚಾದರೂ ಅದರ ಹೊರೆಯನ್ನು ನಿಭಾಯಿಸಲು ಶಕ್ತವಾಗುವ ಸರಕಾರಕ್ಕೆ ಇದೀಗ ಏಕೆ ಸಾಧ್ಯವಾಗದು? ಎಂಬುದೂ ಯಕ್ಷಪ್ರಶ್ನೆಯೇ ಸರಿ.

ತೈಲೋತ್ಪನ್ನಗಳಿಗೆ ಕೇಂದ್ರ ಸರಕಾರ ವಿಧಿಸುತ್ತಿರುವ ಅಬಕಾರಿ ಸುಂಕ­ದಲ್ಲಿ ಕಡಿತ, ರಾಜ್ಯ ಸರಕಾರಗಳು ವಿಧಿಸುತ್ತಿರುವ ವ್ಯಾಟ್‌ನ್ನು ಕಡಿಮೆ ಗೊಳಿಸಿದಲ್ಲಿ ತೈಲೋತ್ಪನ್ನಗಳ ಬೆಲೆ ಇಳಿಕೆಯಾಗಲಿದೆ. ಅಷ್ಟು ಮಾತ್ರವಲ್ಲದೆ ತೈಲ ಕಂಪೆನಿಗಳೂ ಕೂಡ ಗ್ರಾಹಕರ ಸಂಕಷ್ಟಕ್ಕೆ ಸ್ಪಂದಿಸಿದ್ದೇ ಆದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ನಿಯಂತ್ರಣದಲ್ಲಿರಿಸಿ­ಕೊಳ್ಳು ವುದು ಕಷ್ಟಸಾಧ್ಯವೇನಲ್ಲ. ಇನ್ನಾದರೂ ರಾಜ್ಯ ಹಾಗೂ ಕೇಂದ್ರ ಸರಕಾರ ಗಳು ಈ ವಿಚಾರದಲ್ಲಿ ತನ್ನ ಹೊಣೆಗಾರಿಕೆಯನ್ನು ಅರಿತು ಕಾರ್ಯನಿರ್ವಹಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next