Advertisement

ಬೆಳೆವಿಮೆ ನೋಂದಣಿಗೆ ಫ್ರುಟ್ಸ್‌ ಐಡಿ ಸವಾಲು: ಅವಧಿ ವಿಸ್ತರಣೆಗೆ ಕೃಷಿಕರ ಆಗ್ರಹ

11:38 PM Jul 28, 2023 | Team Udayavani |

ಮಂಗಳೂರು: ಈ ಬಾರಿಯ ಹವಾಮಾನ ಆಧಾರಿತ ಬೆಳೆ ವಿಮೆಗಾಗಿ ನೋಂದಾಯಿಸಲು ಉತ್ಸುಕರಾದ ರೈತರಲ್ಲಿ ಅನೇಕರಿಗೆ ಫ್ರುಟ್ಸ್‌ ಐಡಿ ಮಾಡುವ ಸವಾಲು ಎದುರಾಗಿದೆ.

Advertisement

ಈ ಹಿಂದೆ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ಫ್ರುಟ್ಸ್‌ ಐಡಿ ಆವಶ್ಯಕತೆ ಇರಲಿಲ್ಲ. ಈ ಬಾರಿ ಅದನ್ನು ಕಡ್ಡಾಯಗೊಳಿಸಿರುವುದರಿಂದ ರೈತ ಸಂಪರ್ಕ ಕೇಂದ್ರಗಳಿಗೆ ಎಡತಾಕುವ ಪರಿಸ್ಥಿತಿ ಕೃಷಿಕರದ್ದು. ಅಂತಿಮ ದಿನಾಂಕವಾದ ಜು. 31ಕ್ಕೆ ಇನ್ನು ಕೆಲವೇ ದಿನಗಳಿವೆ, ಅದರೊಳಗೆ ಎಲ್ಲರೂ ನೋಂದಣಿ ಮಾಡುವುದು ಕಷ್ಟ. ಹಾಗಾಗಿ ಕೊನೆಯ ದಿನಾಂಕವನ್ನು ಕನಿಷ್ಠ 15 ದಿನ ವಿಸ್ತರಣೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಏನಿದು ಫ್ರುಟ್ಸ್‌ ಐಡಿ?
ಇದು ಕೃಷಿಕರ ಗುರುತಿನ ಚೀಟಿ ಇದ್ದಂತೆ. ಫಾರ್ಮರ್ ರಿಜಿಸ್ಟ್ರೇಶನ್‌ ಆ್ಯಂಡ್‌ ಯುನಿಫೈಡ್‌ ಬೆನಿಫಿಶಿಯರಿ ಇನ್‌ಫಾರ್ಮೇಶನ್‌ ಸಿಸ್ಟಂ (ಫ್ರುಟ್ಸ್‌) ಐಡಿಯಲ್ಲಿ ಆಧಾರ್‌, ಪಾನ್‌ ಮಾದರಿಯಲ್ಲೇ ವಿಶಿಷ್ಟ ಸಂಖ್ಯೆ ನೀಡಲಾಗುತ್ತದೆ. ಮುಂದೆ ಸರಕಾರದ ಸೌಲಭ್ಯ ಪಡೆಯುವುದಕ್ಕೆ ಈ ಸಂಖ್ಯೆ ಅತ್ಯಗತ್ಯ. ಈ ಬಾರಿ ಬೆಳೆ ವಿಮೆಗೂ ಕಡ್ಡಾಯ ಮಾಡಲಾಗಿದೆ.
ಸ್ವಂತ ಕಂಪ್ಯೂಟರ್‌ ಹೊಂದಿರುವವರು ಫ್ರುಟ್ಸ್‌ ವೆಬ್‌ಸೈಟ್‌ //(https://fruits.karnataka.gov.in/OnlineUserLogin.aspx ಗೆ ಲಾಗಿನ್‌ ಆಗಿ ಫ್ರುಟ್ಸ್‌ ಐಡಿ ಮಾಡಬಹುದು ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲೂ ಮಾಡಿಸಿಕೊಳ್ಳಬಹುದು.

ಕೈಕೊಡುತ್ತಿದೆ ಸರ್ವರ್‌
ಈ ಬಾರಿ ಬೆಳೆವಿಮೆ ನೀಡುವ ಕಂಪೆನಿಗಳು ನಷ್ಟದ ನೆಪವೊಡ್ಡಿ ಟೆಂಡರ್‌ನಲ್ಲಿ ಭಾಗಿಯಾಗದ ಕಾರಣ ಮತ್ತೆ ಟೆಂಡರ್‌ ಕರೆಯಲಾಗಿತ್ತು. ಅದರಂತೆ ಜು. 20ರಿಂದ 31ರ ವರೆಗೆ ನೋಂದಣಿ, ಕಂತು ತುಂಬುವ ಪ್ರಕ್ರಿಯೆ ಆರಂಭವಾಗಿದೆ.

ಬೆಳೆಸಾಲ ಹೊಂದಿರುವ ರೈತರು ಅದೇ ಬ್ಯಾಂಕ್‌ನಲ್ಲಿ ಹಾಗೂ ಸಾಲ ಇಲ್ಲದವರು ತಮ್ಮ ಉಳಿತಾಯ ಖಾತೆ ಇರುವ ಬ್ಯಾಂಕ್‌ಗಳಲ್ಲಿ ಇದಕ್ಕೆ ನೋಂದಣಿ ಮಾಡಬೇಕಾಗುತ್ತದೆ. ಆದರೆ ಇದೇ ವೇಳೆ ಎಲ್ಲ ಕಡೆಗಳಲ್ಲೂ ನೋಂದಣಿ ಪ್ರಕ್ರಿಯೆ ಇರುವುದರಿಂದ ಸರ್ವರ್‌ ಕೂಡ ಕೈಗೊಡುತ್ತಿರುವುದು ಮತ್ತೂಂದು ಸಮಸ್ಯೆಗೆ ಕಾರಣವಾಗಿದೆ.

Advertisement

ಕಳೆದ ಸಾಲಿನಲ್ಲಿ 1.10 ಲಕ್ಷ ಮಂದಿ ಬೆಳೆವಿಮೆಯಲ್ಲಿ ನೋಂದಾಯಿಸಿರುವುದರಿಂದ ಈ ಬಾರಿಯೂ ಅಷ್ಟೇ ಮಂದಿ ನೋಂದಾಯಿಸಿಕೊಳ್ಳುವ ನಿರೀಕ್ಷೆ ಇದೆ. ಆದರೆ ಇನ್ನು ಮೂರು ದಿನಗಳಷ್ಟೇ ಬಾಕಿ ಉಳಿದಿವೆ.

ದ.ಕ. ಜಿಲ್ಲೆಯಲ್ಲಿ ಪ್ರಸ್ತುತ 23 ಸಾವಿರದಷ್ಟು ರೈತರು ಬೆಳೆವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಉಳಿದವರಲ್ಲಿ ಬಹಳಷ್ಟು ಮಂದಿಗೆ ಫ್ರುಟ್ಸ್‌ ಐಡಿ ಮಾಡಿಸುವುದು ಬಾಕಿ ಇದೆ. ಉಡುಪಿ ಜಿಲ್ಲೆಯಲ್ಲಿ 5,074 ಮಂದಿ ನೋಂದಣಿ ಮಾಡಿಸಿದ್ದಾರೆ.

ಫ್ರುಟ್ಸ್‌ ಐಡಿ ಕಿರಿಕಿರಿ
ಬೆಳೆ ವಿಮೆಗೆ ಮುನ್ನ ಜಮೀನಿನಲ್ಲಿರುವ ಆರ್‌ಟಿಸಿಗಳಿಗೆ ಫ್ರುಟ್ಸ್‌ ಐಡಿ ಜನರೇಟ್‌ ಆಗಿರಬೇಕಾಗುತ್ತದೆ. ರೈತರ ಕುಟುಂಬದ ಎಲ್ಲರ ಐಡಿಯೂ ಪ್ರತೀ ಆರ್‌ಟಿಸಿಗೆ ನಮೂದಾಗಿರಬೇಕು. ಕೆಲವು ಪ್ರಕರಣಗಳಲ್ಲಿ ರೈತರ ಮಾಹಿತಿ ಇಲ್ಲದೆಯೇ ಐಡಿ ಸ್ವಯಂ ಜನರೇಟ್‌ ಆಗಿದೆ. ಅದನ್ನು ಮೊದಲು ಡಿಲೀಟ್‌ ಮಾಡಬೇಕಾಗುತ್ತದೆ. ಅದಕ್ಕೆ ರೈತ ಸಂಪರ್ಕ ಕೇಂದ್ರದಿಂದ ಆಗುವ ಪ್ರಕ್ರಿಯೆ ಬೆಂಗಳೂರು ವರೆಗೆ ತಲಪಿ, 15 ದಿನ ಬೇಕು. ಅದಾಗಿ ಮತ್ತೆ ಹೊಸ ಐಡಿ ಕ್ರಿಯೇಶನ್‌ಗೆ ಎರಡು ದಿನ ಬೇಕು. ಸ್ಥಳೀಯವಾಗಿ ಐಡಿ ಕ್ರಿಯೇಟ್‌ ಮಾಡುವಾಗ ಸ್ಥಳೀಯವಾಗಿಯೇ ಡಿಲೀಶನ್‌ ಆಯ್ಕೆಯೂ ಇರಬೇಕಿತ್ತು. ಹಾಗಾಗಿ ಈ ಬಾರಿ ಕೊನೆ ದಿನಾಂಕ ವಿಸ್ತರಣೆ ಮಾಡಬೇಕು ಎನ್ನುತ್ತಾರೆ ಕಲ್ಮಡ್ಕದ ಕೃಷಿಕ ಶಂಕರನಾರಾಯಣ ಭಟ್‌.

ಆದಷ್ಟು ಫ್ರುಟ್ಸ್‌ ಐಡಿ ಕ್ರಿಯೇಶನ್‌ ಮಾಡುವಂತೆ ಮಾಹಿತಿ ನೀಡಿದ್ದೆವು. ಈ ಬಾರಿ ಬೆಳೆ ವಿಮೆಗೆ ಕಾಲಾವಕಾಶ ಸಾಕಾಗಲಿಲ್ಲ ಎಂಬ ಅಳಲು ಕೃಷಿಕರದ್ದು ಇರಬಹುದು. ಆದರೆ ಇದರ ದಿನ ವಿಸ್ತರಣೆ ಬೆಂಗಳೂರು ಇಲಾಖೆ ಮಟ್ಟದಲ್ಲೇ ಆಗಬೇಕು.
– ಜಾನಕಿ, ತೋಟಗಾರಿಕೆ ಉಪನಿರ್ದೇಶಕರು, ಮಂಗಳೂರು

ನಮ್ಮ ಜಿಲ್ಲೆಯಲ್ಲಿ ಜು. 5ರಂದು ಇತರ ಐದು ಜಿಲ್ಲೆಗಳೊಂದಿಗೆ ಮೊದಲ ಹಂತದಲ್ಲೇ ನೋಟಿಫಿಕೇಶನ್‌ ಆಗಿತ್ತು. ಈಗಾಗಲೇ ಜು. 15ರಂದು ಬೆಳೆ ವಿಮೆ ನೋಂದಣಿಯ ಕೊನೆಯ ದಿನಾಂಕ ಪೂರ್ಣಗೊಂಡಿದೆ.
-ಭುವನೇಶ್ವರಿ, ತೋಟಗಾರಿಕೆ ಉಪನಿರ್ದೇಶಕರು, ಉಡುಪಿ

ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next