Advertisement

ಮೊಗವೀರ ಭವನದಲ್ಲಿ ಮೇಳೈಸಿದ ಗಡಿನಾಡ ಜಾನಪದ ಸಾಂಸ್ಕೃತಿಕ ಉತ್ಸವ

10:45 AM Apr 02, 2019 | Vishnu Das |

ಮುಂಬಯಿ: ಕನ್ನಡದ ನಾಡು ನುಡಿಯ ಸೇವೆಗಾಗಿ ರಾಜ್ಯ, ರಾಷ್ಟ್ರ, ವಿದೇಶ ಹೀಗೆ ಎಲ್ಲಿಂದಲೂ ಕರೆದರೂ ಹೋಗುವ ಮನಸ್ಸು ಮಾಡಿಕೊಂಡಿದ್ದೇನೆ. ಕಾರಣ ಒಳ ನಾಡ ಕನ್ನಡಿಗರಿಂದ ಸಾಧ್ಯವಾಗದ್ದನ್ನು ಮುಂಬಯಿ ಕನ್ನಡಿಗರು ಸಾಧಿಸಿ ತೋರಿಸಿದ್ದಾರೆ. ಕನ್ನಡಿಗರಿಂದಲೇ ನಾನು ಈ ಮಟ್ಟಕ್ಕೆ ಏರಲು ಸಾಧ್ಯವಾಯಿತು. ಆ ಋಣವನ್ನು ತೀರಿಸಲು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದೇನೆ. ಸಂಸ್ಕೃತಿಯು ಬದುಕಿನ ಶೈಲಿ ಯಾಗಿದ್ದು ಸಂಸ್ಕೃತಿಯ ಉಳಿವಿಗೆ ಇಂತಹ ಕಾರ್ಯ ಕ್ರಮಗಳು ಪೂರಕವಾಗಿವೆ ಎಂದು ಹೆಸರಾಂತ ಸಿನೆಮಾ ನಟ, ರಂಗ ಕಲಾವಿದ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ನಿಕಟ ಪೂರ್ವ ಅಧ್ಯಕ್ಷ ಡಾ| ಮುಖ್ಯಮಂತ್ರಿ ಚಂದ್ರು ಹೇಳಿದರು.

Advertisement

ಮಾ. 31 ರಂದು ಸಂಜೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಂಧೇರಿ ಪಶ್ಚಿಮದ ಮೊಗವೀರ ಭವನದ ಶ್ರೀಮತಿ ಶಾಲಿನಿ ಜಿ. ಶಂಕರ್‌ ಕನ್ವೆನ್ಶನ್‌ ಸೆಂಟರ್‌ ಸಭಾಗೃಹದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಜನಮನ ಜಾನಪದ ಸಾಂಸ್ಕೃತಿಕ ಸಂಸ್ಥೆ ಬೆಂಗಳೂರು ಸಹಯೋಗದಲ್ಲಿ ಆಯೋಜಿಸಿದ್ದ ಗಡಿನಾಡ ಜಾನಪದ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯವಾಗಿ ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂತಹ ಉತ್ಸವಗಳು ಮಾದರಿಯಾಗಿದೆ. ನಾಡು-ನುಡಿಯ ಬಗ್ಗೆ ಅಪಾರ ಅಭಿಮಾನ, ಗೌರವವನ್ನು ಬೆಳೆಸಿಕೊಂಡಿರುವ ಮುಂಬಯಿ ಕನ್ನಡಿಗರಿಂದ ಕರ್ನಾಟಕದಲ್ಲಿ ನೆಲೆಸಿರುವ ಕನ್ನಡಿಗರು ಕಲಿಯುವಂಥದ್ದು ಬಹಳಷ್ಟಿದೆ. ನಾಡು-ನುಡಿಯ ಸೇವೆ ಎಂದಾಗ ನನ್ನ ಮನಸು ಪ್ರಫುಲ್ಲಗೊಳ್ಳುತ್ತದೆ. ಕನ್ನಡ ಭಾಷೆ, ಸಂಸ್ಕೃತಿಗೆ ಅದರದ್ದೆ ಆದ ಮಹತ್ವವಿದೆ. ಇಂತಹ ಸಮಾರಂಭ, ಉತ್ಸವಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದಾಗ ಕಲೆ-ಕಲಾವಿದರು ಬೆಳೆಯಲು ಅನುಕೂಲವಾಗುತ್ತದೆ. ನಿಮ್ಮೆಲ್ಲರ ನಾಡು-ನುಡಿಯ ಸೇವೆ ಅನುಪಮವಾಗಿದೆ ಎಂದರು.

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೃಷ್ಣಕುಮಾರ್‌ ಎಲ್‌. ಬಂಗೇರ ಅಧ್ಯಕ್ಷತೆಯಲ್ಲಿ ಜರಗಿದ ಸಾಂಸ್ಕೃತಿಕ ಉತ್ಸವದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಗೌರವ ಕಾರ್ಯದರ್ಶಿ ಡಾ| ಕೆ. ಮುರಳೀಧರ, ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ಕನ್ನಡ ಸಂಘ ಬಂಗಾರಪೇಟೆ ಅಧ್ಯಕ್ಷ ಪಲ್ಲವಿಮಣಿ ಎಂ. ಸುಬ್ರಹ್ಮಣಿ, ಎನ್‌ಆರ್‌ಎ ಫೋರಂ ಬಹರೇನ್‌ ಅಧ್ಯಕ್ಷ ಲೀಲಾಧರ್‌ ಬೈಕಂಪಾಡಿ, ಉದ್ಯಮಿ ಶ್ರೀನಿವಾಸ ಎನ್‌. ಕಾಂಚನ್‌ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು.

ಮೊಗವೀರ ವ್ಯವಸ್ಥಾಪಕ ಮಂಡಳಿ ಉಪಾಧ್ಯಕ್ಷರುಗಳಾದ ಶ್ರೀನಿವಾಸ ಸಿ.ಸುವರ್ಣ ಮತ್ತು ಅರವಿಂದ ಕಾಂಚನ್‌, ಗೌರವ ಪ್ರಧಾನ ಕಾರ್ಯದರ್ಶಿ ಸಂಜಿವ ಕೆ. ಸಾಲ್ಯಾನ್‌, ಗೌರವ ಕೋಶಾಧಿಕಾರಿ ದಿಲೀಪ್‌ಕುಮಾರ್‌ ಮೂಲ್ಕಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ರಾಜು ಶ್ರೀಯಾನ್‌, ಗೌರವ ಕಾರ್ಯದರ್ಶಿ ಧರ್ಮೇಶ್‌ ಪುತ್ರನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದು ಅತಿಥಿಗಳೊಂದಿಗೆ ಮೊಗವೀರ ಮಂಡಳಿಯ ವಿಶ್ವಸ್ತ ಸದಸ್ಯ ಹರೀಶ್‌ ಕಾಂಚನ್‌ ಮತ್ತು ಗಣೇಶ್‌ ಎಸ್‌.ಪುತ್ರನ್‌ ಅವರನ್ನು ಸಮ್ಮಾನಿಸಿ ಅಭಿನಂದಿಸಿದರು.

ಅತಿಥಿಯಾಗಿ ಪಾಲ್ಗೊಂಡ ಡಾ| ಪಲ್ಲವಿಮಣಿ ಅವರು ಮಾತನಾಡಿ, ಸಂಘಟನೆಯಲ್ಲಿ ಭೇಟಿಯದವರನ್ನು ಮರೆಯಬಾರದು. ನಾನು, ನನ್ನದು, ನನ್ನಿಂದಲೇ ಅದದ್ದು ಎಂದೂ ಯಾವಾಗಲೂ ಆಗಬಾರದು. ಸಾಧ್ಯವಾದರೆ ಸಂಸ್ಥೆಯೊಂದಿಗೆ ತನ್ನಿಂದಾದ ಸೇವೆ ಸಲ್ಲಿಸ ಬೇಕು. ಸಂಸ್ಥೆಯನ್ನು ಮುರಿಯುವ ಕೃತ್ಯಕ್ಕೆ ಮುಂದಾಗುವುದು ಪಾಪದ ಕೆಲಸವಾಗಿದೆ. ಆದ್ದರಿಂದ ಬುದ್ಧಿಜೀವಿಯಾದ ಮಾನವನು ಅನ್ಯರಿಗೆ ಒಳ್ಳೆಯದನ್ನು ಮಾಡಬೇಕು. ಎಲ್ಲ ರೊಡನೆ ಜತೆಯಾಗಿ ಸೇರಿ ಬೆರೆತು ಬಾಳಬೇಕು. ಅದರಿಂದ ಸಿಗುವ ಆನಂದ ಮತ್ತೂಂದಿಲ್ಲ ಎಂದರು.

Advertisement

ಮೊಗವೀರ ಬ್ಯಾಂಕಿನ ಕಾರ್ಯಧ್ಯಕ್ಷ ಸದಾನಂದ ಎ. ಕೋಟ್ಯಾನ್‌, ಗಿನ್ನಿಸ್‌ ರೆಕಾರ್ಡ್‌ ನೃತ್ಯ ನಿರ್ದೇಶಕಿ ಡಾ| ಮೀನಾಕ್ಷಿ ರಾಜು ಶ್ರೀಯಾನ್‌, ಮಂಡಳಿಯ ಸಾಂಸ್ಕೃತಿಕ ಸಮಿತಿಯ ಸದಸ್ಯರುಗಳಾದ ಸುರೇಶ್‌ ಶ್ರೀಯಾನ್‌, ಸುರೇಖಾ ಸುವರ್ಣ, ಪ್ರೀತಿ ಶ್ರೀಯಾನ್‌, ದೇವ್‌ರಾಜ್‌ ಕುಂದರ್‌, ದಯಾನಂದ ಬಂಗೇರ, ಸುರೇಶ್‌ ಕಾಂಚನ್‌, ಟ್ರಸ್ಟಿ ಜಿ.ಕೆ. ರಮೇಶ್‌ ಹಾಗೂ ನಗರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ತುಳು-ಕನ್ನಡಿಗರು, ಕಲಾಭಿಮಾನಿಗಳು, ಕಲಾಪೋಷಕರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿದುಷಿ ಗುಣವತಿ ಮತ್ತು ಮಧುರ ವಿ. ಹಾಗೂ ರಿಷಿಕಾ ವಿ. ಬೆಂಗಳೂರು, ಸತ್ಯವತಿ ಮತ್ತು ಗಿರೀಶ್‌ ತಂಡದವರಿಂದ ನೃತ್ಯ ವೈಭವ, ಪುಷ್ಕರ ಸೆಂಟರ್‌ ಫಾರ್‌ ಪರ್‌ಫಾರ್ಮಿಂಗ್‌ ಆರ್ಟ್ಸ್ ವತಿಯಿಂದ ಜಾನಪದ ಸೌರಭ, ಕುದ್ರೋಳಿ ಗಣೇಶ್‌ ಅವರಿಂದ ಜಾದು ಪ್ರದರ್ಶನ, ಮಿಮಿಕ್ರಿ ಗೋಪಿ ಬೆಂಗಳೂರು ಇವರಿಂದ ಹಾಸ್ಯ ಸಿಂಚನ, ಗೋ. ನಾ. ಸ್ವಾಮಿ ಮತ್ತು ಪುಷ್ಪಾ ಆರಾಧ್ಯ ಬೆಂಗಳೂರು ಇವರಿಂದ ಜಾನಪದ ರಸಮಂಜರಿ ಜರಗಿತು. ಪ್ರತಿಭಾ ಆರ್‌. ಬೆಂಗಳೂರು ಅವರು ಕಾರ್ಯಕ್ರಮ ನಿರ್ವಹಿಸಿದರು. ಜನಮನ ಜಾನಪದ ಸಂಸ್ಥೆಯ ಸಂಸ್ಥಾಪಕ, ಗಾಯಕ ಗೋ. ನಾ. ಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು.

ಮಂಡಳಿಯ ಪದಾಧಿಕಾರಿಗಳು, ಸಮಿತಿಯ ಸದಸ್ಯರು, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ರಾಜು ಶ್ರೀಯಾನ್‌, ಕಾರ್ಯದರ್ಶಿ ಧರ್ಮೇಶ್‌ ಪುತ್ರನ್‌, ಸಾಂಸ್ಕೃತಿಕ ಸಮಿತಿಯ ಸದಸ್ಯರಾದ ಸುರೇಶ್‌ ಶ್ರೀಯಾನ್‌, ಪ್ರೀತಿ ಶ್ರೀಯಾನ್‌, ಸುರೇಖಾ ಸುವರ್ಣ, ದೇವರಾಜ್‌ ಕುಂದರ್‌, ದಯಾನಂದ ಬಂಗೇರ ಮತ್ತು ಅಶೋಕ್‌ ಸುವರ್ಣ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಜನಮನ ಜಾನಪದ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಗೋ. ನಾ. ಸ್ವಾಮಿ ಸ್ವಾಗತಿಸಿದರು. ಅರವಿಂದ ಕಾಂಚನ್‌ ಮತ್ತು ಪ್ರತಿಭಾ ಆರ್‌. ಗೌಡ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು. ಮೊಗವೀರ ಮಾಸಿಕದ ಸಂಪಾದಕ ಅಶೋಕ ಎಸ್‌. ಸುವರ್ಣ ವಂದಿಸಿದರು.

ನಮ್ಮ ಸಂಸ್ಕೃತಿಯನ್ನು ಉಳಿಸುವ ಪ್ರಜ್ಞೆಯಿಂದ ನಾವು ಮುಂದೆ ಬರಬೇಕು. ಜಾನಪದವೇ ಸಂಸ್ಕೃತಿಯ ತಾಯಿ ಬೇರು. ಆದರೆ ಈಗಿನ ಜನತೆಯು ಜಾನಪದವನ್ನು ಮರೆಯುತ್ತಿದ್ದಾರೆ. ಎಲ್ಲಾ ಭಾಷೆ ಸಂಸ್ಕೃತಿಗೆ ತಾಯಿ ಬೇರು ಜಾನಪದ ಆಚರಣೆಯಾಗಿದೆ. ಅದು ಅಳಿದು ಹೋಗುವ ಸ್ಥಿತಿ ಬಂದೊದಗಿದಾಗ ಮತ್ತೂಮ್ಮೆ ಸಂಸ್ಕೃತಿ ಅಂತ್ಯದಿಂದ ಪ್ರಾರಂಭವಾಗುತ್ತದೆ. ಆದ್ದರಿಂದ ಇಂತಹ ಉತ್ಸವಗಳು ಯುವಪೀಳಿಗೆಗೆ ನಾಡು-ನುಡಿ-ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುತ್ತಿವೆ. ಮೊಗವೀರ ವ್ಯವಸ್ಥಾಪಕ ಮಂಡಳಿಯ ಸಮಾಜಪರ ಕಾರ್ಯಗಳೊಂದಿಗೆ ನಾಡು-ನುಡಿ, ಸಾಹಿತ್ಯ, ಕಲೆಯ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿರುವುದು ಅಭಿನಂದನೀಯವಾಗಿದೆ .
ಡಾ| ಸುನೀತಾ ಎಂ. ಶೆಟ್ಟಿ , ಸಾಹಿತಿ

ಮೊಗವೀರ ವ್ಯವಸ್ಥಾಪಕ ಮಂಡಳಿಗೆ ಶತಮಾನದ ಇತಿಹಾಸವಿದ್ದು, ಸಮಾಜದವರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವುದರೊಂದಿಗೆ ನಾಡು-ನುಡಿ, ಸಂಸ್ಕೃತಿ-ಸಂಸ್ಕಾರದ ಉಳಿವಿಗಾಗಿ ಹಗಲಿರುಳು ಶ್ರಮಿಸುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಇಂತಹ ಸಾಂಸ್ಕೃತಿಕ ಉತ್ಸವಗಳನ್ನು ಸಹಸಂಸ್ಥೆಗಳ ಸಹಕಾರದೊಂದಿಗೆ ಆಚರಿಸುತ್ತಾ ಬರಲಾಗುತ್ತಿದೆ. ಪ್ರಸ್ತುತ ವರ್ಷದ ಉತ್ಸವದಲ್ಲಿ ಸಂಸ್ಥೆಯ ಕೆಲವರನ್ನು ಸಮ್ಮಾನಿಸಿರುವುದು ಸಂತೋಷದ ವಿಷಯ. ಕಲೆ-ಕಲಾವಿದರಿಗೆ ಮಂಡಳಿಯ ಸದಾ ಪ್ರೋತ್ಸಾಹ, ಸಹಕಾರವನ್ನು ನೀಡುತ್ತಿದ್ದು ಇಂತಹ ಉತ್ಸವಗಳಿಗೆ ಮುಂಬಯಿ ತುಳು-ಕನ್ನಡಿಗರ ಸಹಕಾರ, ಪ್ರೋತ್ಸಾಹ ಸದಾಯಿರಲಿ .
ಕೃಷ್ಣಕುಮಾರ್‌ ಎಲ್‌. ಬಂಗೇರ, ಅಧ್ಯಕ್ಷರು, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ
ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next