Advertisement
ಮುಖ್ಯಮಂತ್ರಿ ಗಾದಿಗೆ ಏರಿದ್ದ “ಕುಸ್ತಿಪಟು”…
ಉತ್ತರಪ್ರದೇಶದ ಕೆಪಿಜಿಸಿ ಕಾಲೇಜಿನಲ್ಲಿ ಬಿಎ ಪದವಿ ಪಡೆದ ಮುಲಾಯಂ ನಂತರ ಶಿಕೋಹಾಬಾದ್ ನ ಎಕೆ ಕಾಲೇಜ್ ನಲ್ಲಿ ಬಿ.ಟಿ ಪದವಿ ಹಾಗೂ ಆಗ್ರಾ ಯೂನಿರ್ವಸಿಟಿಯಲ್ಲಿ ಎಂಎ ಸ್ನಾತಕೋತ್ತರ ಪದವಿ ಪಡೆದಿದ್ದರು. ಬಾಲ್ಯದಲ್ಲಿಯೇ ಕುಸ್ತಿಪಟುವಾಗಬೇಕೆಂಬ ಕನಸು ಕಂಡಿದ್ದ ಮುಲಾಯಂ ನಂತರ ಕುಸ್ತಿಪಟುವಾಗಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದರು. ಮಣಿಪುರದಲ್ಲಿ ನಡೆದ ಕುಸ್ತಿ ಪಂದ್ಯದಲ್ಲಿ ಮೊದಲ ಬಾರಿಗೆ ಮುಲಾಯಂ ಅವರ ಸಾಮರ್ಥ್ಯವನ್ನು ಕಂಡುಕೊಂಡವರು ಜಸ್ವಂತ್ ನಗರ್ ಶಾಸಕ ನಾಥು ಸಿಂಗ್. ಇದು ಮುಲಾಯಂ ಬದುಕಿನ ಟರ್ನಿಂಗ್ ಪಾಯಿಂಟ್ ಗೆ ಸಾಕ್ಷಿಯಾಗಿತ್ತು. ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ಮುಲಾಯಂ ಶಿಕ್ಷಕರಾಗಿದ್ದರು.
Related Articles
Advertisement
1967ರಲ್ಲಿ ನಡೆದ ಚುನಾವಣೆಯಲ್ಲಿ ಯಾದವ್ ತಮ್ಮ 28ನೇ ವರ್ಷದಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಐದು ದಶಕಗಳ ಸುದೀರ್ಘ ರಾಜಕೀಯ ಪಯಣದಲ್ಲಿ ಮುಲಾಯಂ ಸಿಂಗ್ ಯಾದವ್ ಹತ್ತು ಬಾರಿ ಶಾಸಕರಾಗಿ ಹಾಗೂ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಕುಳ್ಳನೇ ದೇಹದ ಮುಲಾಯಂ ಸಿಂಗ್ ಯಾದವ್ ರಾಜಕೀಯ ಜೀವನದಲ್ಲಿ ತುಂಬಾ ಎತ್ತರಕ್ಕೆ ಏರಿದ್ದರು.
ತುರ್ತು ಪರಿಸ್ಥಿತಿ ವೇಳೆ ಜೈಲುವಾಸ:
ಪ್ರಧಾನಿ ಇಂದಿರಾ ಗಾಂಧಿ 1975ರಲ್ಲಿ ದೇಶಾದ್ಯಂತ ಹೇರಿದ್ದ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಮುಲಾಯಂ ಸಿಂಗ್ ಯಾದವ್ ಕೂಡಾ ಬಂಧನಕ್ಕೊಳಗಾಗಿದ್ದು, 19 ತಿಂಗಳು ಜೈಲುವಾಸ ಅನುಭವಿಸಿದ್ದರು. 1977ರಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು. ಹೀಗೆ ತಮ್ಮ ರಾಜಕೀಯ ಜೀವನದುದ್ದಕ್ಕೂ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ನಡೆಸಿದ ಹೋರಾಟದಿಂದ ಸುಮಾರು 9 ಬಾರಿ ಜೈಲುವಾಸ ಅನುಭವಿಸಿದ್ದರು.
1989ರಲ್ಲಿ ಮುಲಾಯಂ ಸಿಂಗ್ ಯಾದವ್ ಅವರು ಮೊದಲ ಬಾರಿಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಗಾದಿಗೆ ಏರಿದ್ದರು. 1992ರಲ್ಲಿ ಮುಲಾಯಂ ಅವರು ಸಮಾಜವಾದಿ ರಾಮ್ ಮನೋಹರ ಲೋಹಿಯಾ ಅವರ ಮೌಲ್ಯದ ಅನುಷ್ಠಾನಕ್ಕಾಗಿ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದ್ದರು. ನಂತರ 1993ರಲ್ಲಿ ಉತ್ತರಪ್ರದೇಶದ ವಿಧಾನಸಭೆಯ ಚುನಾವಣೆಯಲ್ಲಿ ಮಾಯಾವತಿಯ ಬಹುಜನ್ ಸಮಾಜ್ ಪಕ್ಷದ ಜೊತೆ ಕೈಜೋಡಿಸುವ ಮೂಲಕ ಸಮಾಜವಾದಿ ಪಕ್ಷ ಜಯಭೇರಿ ಗಳಿಸಿತ್ತು.
ಅಯೋಧ್ಯೆ ವಿವಾದ:
ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡ ಘಟನೆ ನಡೆದ ವೇಳೆ ಮುಲಾಯಂ ಸಿಂಗ್ ಯಾದವ್ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. 1990ರಲ್ಲಿ ಅಯೋಧ್ಯೆಯಲ್ಲಿ ಪ್ರತಿಭಟನಾನಿರತ ಹಿಂದೂ ಕರಸೇವಕರ ಮೇಲೆ ಪೊಲೀಸ್ ಫೈರಿಂಗ್ ನಡೆಸಲು ಮುಲಾಯಂ ಆದೇಶ ನೀಡಿದ್ದರು. ಮುಲಾಯಂ ಅವರ ಈ ನಿರ್ಧಾರದ ಬಗ್ಗೆ ಹಿಂದೂಗಳು ಮತ್ತು ಮುಸ್ಲಿಮರು ತೀವ್ರವಾಗಿ ಖಂಡಿಸಿದ್ದರು. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡ ನಂತರ ಮುಲಾಯಂ ಸಿಂಗ್ ಮುಸ್ಲಿಮರ ಹೀರೋ ಆಗಿ ಹೊರಹೊಮ್ಮಿದ್ದರು ಎಂದು ಬಿಸಿಸಿ ವರದಿ ಮಾಡಿತ್ತು. ಉತ್ತರಪ್ರದೇಶದಲ್ಲಿ ದೀರ್ಘಕಾಲದ ರಾಷ್ಟ್ರಪತಿ ಆಡಳಿತದ ನಂತರ ಮುಲಾಯಂ ಸಿಂಗ್ ಯಾದವ್ 1994ರಲ್ಲಿ ಮತ್ತೆ ಸಿಎಂ ಪಟ್ಟಕ್ಕೇರಿದ್ದರು.
ಮುಲಾಯಂ ಸಿಂಗ್ ಯಾದವ್ ಅವರು 1989-1991, 1993 – 1995 ಮತ್ತು 2003-2007 ಸೇರಿದಂತೆ ಮೂರು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದರು. 1996ರಿಂದ 1998ರವರೆಗೆ ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.