ಬೆಂಗಳೂರು: ಇಂದಿರಾ ಕ್ಯಾಂಟೀನ್ ಮೂಲಕ ಸಿಲಿಕಾನ್ ಸಿಟಿಯ ಲಕ್ಷಾಂತರ ಬಡವರ ಹಸಿವು ನೀಗಿಸುವಲ್ಲಿ ಯಶಸ್ವಿಯಾದ ಸರ್ಕಾರ, ಇದೀಗ ಹೆಚ್ಚು ಜನ ಸೇರುವ ಸ್ಥಳಗಳಿಗೇ ತೆರಳಿ ಕಡಿಮೆ ದರದಲ್ಲಿ ಆಹಾರ ಒದಗಿಸುವ “ಸವಿರುಚಿ ಸಂಚಾರಿ ಕ್ಯಾಂಟೀನ್’ ಅನುಷ್ಠಾನಕ್ಕೆ ಮುಂದಾಗಿದೆ.
ವಿಧಾನಸೌಧದ ಎದುರು ಮಂಗಳವಾರ (ಫೆ.27) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಿರುಚಿ ವಾಹನಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸೋಮವಾರ ಈ ಕುರಿತು ಮಾಹಿತಿ ನೀಡಿದ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್, ಬೆಳಗ್ಗೆ 9.30ಕ್ಕೆ ವಿಧಾನಸೌಧದ ಪೂರ್ವ ಮುಖ್ಯದ್ವಾರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ರಾಜ್ಯದ ಎಲ್ಲ ಜಿಲ್ಲಾ ಸ್ತ್ರೀ ಶಕ್ತಿ ಸಂಘಗಳಿಗೆ ಸವಿರುಚಿ ಸಂಚಾರಿ ವಾಹನಗಳನ್ನು ಹಸ್ತಾಂತರಿಸುವರು ಎಂದರು.
ಮುಖ್ಯ ಅತಿಥಿಗಳಾಗಿ ಸಚಿವ ಆರ್.ರೋಷನ್ ಬೇಗ್, ಕೆ.ಜೆ.ಜಾರ್ಜ್, ಉಮಾಶ್ರೀ, ರಾಮಲಿಂಗಾರೆಡ್ಡಿ, ಎಚ್.ಎಂ. ರೇವಣ್ಣ, ವಿರೋಧ ಪಕ್ಷದ ಮುಖಂಡ ಜಗದೀಶ್ ಶೆಟ್ಟರ್, ಮೇಯರ್ ಸಂಪತ್ ರಾಜ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ. ಇದೇ ವೇಳೆ ವಿಕಲಚೇತನರಿಗೆ “ಯಂತ್ರ ಚಾಲಿತ ದ್ವಿಚಕ್ರ ವಾಹನ ‘ ವಿತರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟಗಳ ಮೂಲಕ ಸವಿರುಚಿ ಸಂಚಾರಿ ಕ್ಯಾಂಟೀನ್ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ. ಸ್ತ್ರೀ ಶಕ್ತಿ ಸಂಘಗಳ ಸಬಲೀಕರಣ ಸರ್ಕಾರದ ಮುಖ್ಯ ಉದ್ದೇಶದೊಂದಿಗೆ ಈಗಾಗಲೇ ಜಿಲ್ಲಾ ಸ್ತ್ರೀ ಶಕ್ತಿ ಸಂಘಗಳಿಗೆ ತಲಾ 10 ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡಿದೆ. ಸವಿರುಚಿ ಸಂಚಾರಿ ಕ್ಯಾಂಟೀನ್ ಯಶಸ್ಸಿಗಾಗಿ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಯೋಜನೆ ಯಶಸ್ಸು ಆಧರಿಸಿ ತಾಲೂಕು ಮಟ್ಟದಲ್ಲಿ ವಿಸ್ತರಿಸುವ ಉದ್ದೇಶ ಸರ್ಕಾರದ್ದಾಗಿದೆ ಎಂದು ಭಾರತಿ ಶಂಕರ್ ಮಾಹಿತಿ ನೀಡಿದರು.
ಈ ಹಿಂದೆ ಸವಿರುಚಿ ಸಂಚಾರಿ ಕ್ಯಾಂಟೀನ್ ನಡೆಸಲು ಸ್ತ್ರೀಶಕ್ತಿ ಸಂಘಗಳು ಹಿಂದೇಟು ಹಾಕಿದ್ದವು. ಹೀಗಾಗಿ ಯೋಜನೆಯ ಜಾರಿ ವಿಳಂಬವಾಯಿತು. ಸಂಚಾರಿ ವಾಹನ ಖರೀದಿ, ಕ್ಯಾಂಟೀನ್‌ಗೆ ಬೇಕಾಗುವ ಅಗತ್ಯ ಪರಿಕರಗಳನ್ನು ಖರೀದಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿಯನ್ನು ರಚಿಸಲಾಗಿತ್ತು ಎಂದು ತಿಳಿಸಿದರು.
ಜನ ಇರುವಲ್ಲಿ ಕ್ಯಾಂಟೀನ್ ಸಂಚಾರ: ಕಾರ್ಯಾಚರಣೆ ವಿಷಯದಲ್ಲಿ ಸವಿರುಚಿ ಸಂಚಾರಿ ಕ್ಯಾಂಟೀನ್, ಇಂದಿರಾ ಕ್ಯಾಂಟೀನ್‌ಗಿಂತ ಭಿನ್ನವಾಗಿದೆ. ಜನದಟ್ಟಣೆ ಇರುವ ಕಡೆಗೆ ಸವಿರುಚಿ ವಾಹನ ಸಂಚರಿಸಲಿದೆ. ಊಟ ಮತ್ತು ಉಪಹಾರದ ಮೆನು ಕೂಡ ಭಿನ್ನವಾಗಿರಲಿದೆ. ಜಾತ್ರೆ ನಡೆಯುವ ಸ್ಥಳ, ಕೈಗಾರಿಕಾ ಪ್ರದೇಶ, ಶಾಲಾ ಕಾಲೇಜು ಸೇರಿದಂತೆ ದೊಡ್ಡ ದೊಡ್ಡ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಈ ಸಂಚಾರಿ ಕ್ಯಾಂಟೀನ್ ಇರಲಿದೆ. ಇಡೀ ಕ್ಯಾಂಟೀನ್ ವ್ಯವಹಾರವನ್ನು 11 ಮಹಿಳೆಯರ ತಂಡ ನಿರ್ವಹಿಸಲಿದೆ.