Advertisement

“ಶಿಖರದಿಂದ ಸಾಗರದ ವರೆಗೆ’ಸಾಹಸ ಯಾತ್ರೆ ಸಂಪನ್ನ

02:34 AM Nov 02, 2021 | Team Udayavani |

ಉಳ್ಳಾಲ: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ “ಶಿಖರದಿಂದ ಸಾಗರ’ ಐತಿಹಾಸಿಕ ಯಾನದಲ್ಲಿ ಭಾಗಿಯಾಗಿರುವ ರಾಜ್ಯದ 5 ಯುವತಿಯರು ಯಾತ್ರೆಯನ್ನು ಸೋಮವಾರ ಉಳ್ಳಾಲದಲ್ಲಿ ಯಶಸ್ವಿಯಾಗಿ ಮುಗಿಸಿದರು.

Advertisement

ಶಿವಮೊಗ್ಗದ ಐಶ್ವರ್ಯಾ ಮತ್ತು ಧನಲಕ್ಷ್ಮೀ, ಬೆಂಗಳೂರಿನ ಆಶಾ, ಮಡಿಕೇರಿಯ ಪುಷ್ಪಾ ಮತ್ತು ಮೈಸೂರಿನ ಬಿಂದು ಸಾಹಸಿಗರಾಗಿದ್ದು, ದ.ಕ. ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಸಚಿವರು ಸಮುದ್ರ ಮಾರ್ಗವಾಗಿ ಕಯಾಕಿಂಗ್‌ ಪೂರೈಸಿದ ಅವರನ್ನು ಸ್ವಾಗತಿಸಿ ಗೌರವಿಸಿದರು.

ಭಾರತೀಯ ಪರ್ವತಾರೋಹಣ ಸಂಸ್ಥೆಯ ದಕ್ಷಿಣ ವಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸಹಯೋಗದೊಂದಿಗೆ ಈ ಸಾಹಸ ಯಾತ್ರೆಯನ್ನು ಆಯೋಜಿಸಿತ್ತು. ಈ ಯಾನಕ್ಕೆ ರಾಜ್ಯದ 200 ಮಂದಿಯಲ್ಲಿ ಈ ಐವರು ಆಯ್ಕೆಯಾಗಿದ್ದರು.

ವಿಧಾನಸೌಧದಲ್ಲಿ ಗೌರವ
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಐವರು ಸಾಹಸಿ ಯುವತಿಯರನ್ನು ಗೌರವಿಸಲು ಈ ತಿಂಗಳ ಅಂತ್ಯದಲ್ಲಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮ್ಮಾನಿಸುವರು. ಸಮಾಜ ಕಲ್ಯಾಣ ಇಲಾಖೆಯಿಂದ ಈ ಸಾಧಕರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದರು.

ಶಾಸಕ ಯು.ಟಿ. ಖಾದರ್‌ ಮಾತನಾಡಿ, ಇವರ ಈ ಸಾಧನೆ ಯುವ ಜನತೆ, ವಿದ್ಯಾರ್ಥಿಗಳು, ಮಹಿಳೆಯರಿಗೆ ಪ್ರೇರಣಾ ಶಕ್ತಿಯಾಗಿದೆ. ಮುಂದಿನ ದಿನಗಳಲ್ಲಿ ಅವರ ಈ ಸಾಧನೆಯು ದೇಶಕ್ಕೆ ಪದಕಗಳನ್ನು ತಂದುಕೊಡುವಂತಾಗಲಿ ಎಂದರು.ಯಾತ್ರೆಯಲ್ಲಿ ಪಾಲ್ಗೊಂಡ ಬಿಂದು ಅನುಭವಗಳನ್ನು ವಿವರಿಸಿದರು.

Advertisement

ಇದನ್ನೂ ಓದಿ:ದೀಪಾವಳಿಗೆ ಅಯೋಧ್ಯೆಯಲ್ಲಿ 12 ಲಕ್ಷ ದೀಪ

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್‌ ಡಿ’ಸೋಜಾ, ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿಯ ಸಲಹೆಗಾರ ಕೀರ್ತಿ  ಉಳ್ಳಾಲ ನಗಸಭೆ ಅಧ್ಯಕ್ಷ ಚಿತ್ರಕಲಾ, ಉಪಾಧ್ಯಕ್ಷ ಅಯೂಬ್‌ ಉಳ್ಳಾಲ, ನಗರಸಭೆ ಪೌರಾಯುಕ್ತ ರಾಯಪ್ಪ ಮೊದಲಾದವರು ಉಪಸ್ಥಿತರಿದ್ದರು.

ಕ್ರೀಡಾ ಇಲಾಖೆಯ ವಸಂತ್‌ ಕಾರ್ಯಕ್ರಮ ನಿರ್ವಹಿಸಿದರು. ಸಹಾಯಕ ಕ್ರೀಡಾಧಿಕಾರಿ ವಿನೋದ್‌ ವಂದಿಸಿದರು.

“ಶಿಖರದಿಂದ ಸಾಗರ’ ಸಾಹಸ ಯಾತ್ರೆಯ ಪಥ
ಯುವತಿಯರು ಕಾಶ್ಮೀರದ ಕೋಲ್‌ಹೈ (5,425 ಮೀ.) ಶಿಖರವನ್ನು ಏರಿಳಿದ ಬಳಿಕ ಜಗತ್ತಿನ ಅತೀ ಎತ್ತರದ ರಸ್ತೆಯಾದ ಲಡಾಖ್‌ನ ಕರ್‌ದೂಂಗ್ಲ ಪಾಸ್‌ ಮೂಲಕ 3,350 ಕಿ.ಮೀ. ಸೈಕಲ್‌ ಯಾನವನ್ನು ಆರಂಭಿಸಿ ದಿಲ್ಲಿ, ಪಂಜಾಬ್‌ ಮೂಲಕ ಕಾರವಾರಕ್ಕೆ ಬಂದಿದ್ದರು. ಅಲ್ಲಿಂದ ಕಳೆದ 10 ದಿನಗಳಿಂದ (ಕಾರವಾರದಿಂದ) ಉಳ್ಳಾಲದ ವರೆಗೆ ರಾಜ್ಯದ ಕರಾವಳಿ ಸಮುದ್ರದಲ್ಲಿ 300 ಕಿ.ಮೀ. ಕಯಾಕಿಂಗ್‌ ಯಾನ ನಡೆಸಿದರು. ಒಟ್ಟು 75 ದಿನಗಳ ಐತಿಹಾಸಿಕ ಯಾತ್ರೆ ಅದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next