Advertisement

ವೈಜ್ಞಾನಿಕ ಮನೋಭಾವದಿಂದ ವಿಮುಖ: ರಾಮಚಂದ್ರಪ್ಪ

05:10 PM Aug 21, 2018 | Team Udayavani |

ದಾವಣಗೆರೆ: ಪ್ರಸ್ತುತ ಯುವ ಜನರು ದೇವರು-ಧರ್ಮದ ಹೆಸರಿನ ಸನಾತನ ಪರಂಪರೆಗೆ ಮಾರುಹೋಗಿ ವೈಜ್ಞಾನಿಕ
ಮನೋಭಾವದಿಂದ ವಿಮುಖರಾಗುತ್ತಿದ್ದಾರೆ ಎಂದು ಹರಿಹರ ಎಸ್‌ಜೆವಿಪಿ ಕಾಲೇಜು ಪ್ರಾಧ್ಯಾಪಕ ಡಾ| ಎ.ಬಿ. ರಾಮಚಂದ್ರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.

Advertisement

ರಾಜ್ಯ ವಿಜ್ಞಾನ ಪರಿಷತ್ತು, ಜ್ಞಾನ ವಿಜ್ಞಾನ ಸಮಿತಿ ಹಾಗೂ ಮಾನವ ಬಂಧುತ್ವ ವೇದಿಕೆ ಸಹಯೋಗದೊಂದಿಗೆ ಮಾ.ಸ.ಬಾ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡ ರಾಷ್ಟ್ರೀಯ ವೈಜ್ಞಾನಿಕ ಮನೋಭಾವ ದಿನಾಚರಣೆಯಲ್ಲಿ ಅವರು ಮಾತನಾಡಿದರು. 

ವಿವೇಚನಾ ಶಕ್ತಿ ಇರುವ ವಿದ್ಯಾವಂತರು ವೈಜ್ಞಾನಿಕ ಮನೋಭಾವ ಹೊಂದಿದ್ದರೆ ದೇಶ ಯಾವಾಗಲೋ ಬದಲಾಗುತ್ತಿತ್ತು. ಆದರೆ ಆ ಮನೋಪ್ರವೃತ್ತಿ ಕಾಣುತ್ತಿಲ್ಲ. ಸನಾತನ ಧರ್ಮದ ವಿಚಾರಗಳನ್ನು ವಿಮರ್ಶೆ ಮಾಡದೇ ಮೂಢನಂಬಿಕೆಗಳ ದಾಸರಾಗುತ್ತಿದ್ದೇವೆ. ಇದು ನಮ್ಮ ಕಣ್ಮುಂದಿರುವ ದುರಂತ ಎಂದರು. 

ಸುಳ್ಳನ್ನೇ ಸಂಭ್ರಮಿಸುತ್ತಿರುವ ಕಾಲವಿದು. ಸುಳ್ಳು ಹೇಳುವವರು ಮೇಧಾವಿಗಳಾಗುತ್ತಿದ್ದಾರೆ. ಆದರೆ, ಸತ್ಯ ಹೇಳುವವರ ಕಗ್ಗೊಲೆ ಆಗುತ್ತಿದೆ. ಇಂತಹ ಮನೋಸ್ಥಿತಿ ವಾಸ್ತವದಲ್ಲಿ ಬೇರೂರಿದೆ. ಸನಾತನಕ್ಕೆ ವಿಜ್ಞಾನ, ಪರಂಪರೆಯನ್ನು ಒಗ್ಗಿಸಿಕೊಳ್ಳುವ ಶಕ್ತಿ ಇದೆ. ಹಾಗಾಗಿ ಜನರಿಂದು ಸನಾತನ ಸಂಸ್ಕೃತಿ ಅಪ್ಪಿಕೊಳ್ಳುತ್ತಿದ್ದಾರೆ ವಿನಃ ವೈಜ್ಞಾನಿಕವಾಗಿ ಯಾವುದನ್ನೂ ಪರಾಮರ್ಶಿಸುತ್ತಿಲ್ಲ ಎಂದು ಬೇಸರ ವ್ಯಕ್ಯಪಡಿಸಿದರು.

ಪ್ರಶ್ನೆ ಮಾಡುವವ ತಲೆಹರಟೆ ಎಂಬುದು ಸಾಮಾನ್ಯರ ಮನೋಭಾವ. ಆದರೆ, ಪ್ರಶ್ನಿಸುವ ಮನೋಭಾವದವರೇ ನಿಜವಾಗಿಯೂ ಈ ದೇಶದ ಸಂಪತ್ತು, ನಿರ್ಮಾತೃಗಳು. ಹಾಗಾಗಿ ಪ್ರತಿಯೊಬ್ಬರೂ ಯಾವುದೇ ವಿಷಯ, ವಸ್ತುವನ್ನಾಗಲಿ ಪ್ರಶ್ನಿಸುವ, ವಿಮರ್ಶಿಸುವ, ಪ್ರಯೋಗಕ್ಕೆ ಒಳಪಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಪರಿಪೂರ್ಣರಾಗಿ ನಾಡು ಕಟ್ಟುವ ಸತ್ಪಪ್ರಜೆಗಳಾಗಲು ಸಾಧ್ಯ ಎಂದು ಹೇಳಿದರು.

Advertisement

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ವಿಜ್ಞಾನ ಪರಿಷತ್‌ ಅಧ್ಯಕ್ಷ ಡಾ| ಬಿ.ಇ. ರಂಗಸ್ವಾಮಿ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿಯೇ ಶಿಕ್ಷಕರು, ಅಧ್ಯಾಪಕರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬಿತ್ತದಿರುವುದು ಶೋಚನಿಯ. ಮೊದಲು ವೈಜ್ಞಾನಿಕ ಮನೋಭಾವ ಬಿತ್ತುವ ಕೆಲಸ ಆಗಬೇಕು. ದೇಶದ ಭವಿಷ್ಯದ ನಿರ್ಮಾತೃಗಳಾದ ವಿದ್ಯಾರ್ಥಿಗಳು ಸಣ್ಣ ವಿಚಾರಗಳನ್ನು ಆಸಕ್ತಿ, ಕುತೂಹಲದಿಂದ ಸೂಕ್ಷ್ಮವಾಗಿ ಅವಲೋಕಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯ ವಿಜ್ಞಾನ ಪರಿಷತ್‌ ಸದಸ್ಯ ಪಿ. ಷಣ್ಮುಖಸ್ವಾಮಿ ಮಾತನಾಡಿ, ಪ್ರಕೃತಿಯಲ್ಲಿನ ಪ್ರತಿ ವಸ್ತುವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವುದು ವಿಜ್ಞಾನ. ಪ್ರಕೃತಿ ಬಿಟ್ಟು ವಿಜ್ಞಾನವಿಲ್ಲ. ಮೂಢನಂಬಿಕೆಗಳು ಮನುಷ್ಯನಲ್ಲಿ ವಿಮರ್ಶೆ ಮಾಡುವ ಶಕ್ತಿಯನ್ನೇ ವಿನಾಶ ಮಾಡುತ್ತವೆ. ಹಾಗಾಗಿ ಯುವ ಜನರು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಜಾಗೃತರಾಗಬೇಕು ಎಂದು ಹೇಳಿದರು.

ಕಾಲೇಜು ಪ್ರಾಂಶುಪಾಲ ಡಾ| ಎಂ.ಪಿ. ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕ.ರಾ.ವಿ.ಪ ಸಹ ಕಾರ್ಯದರ್ಶಿ ಅಂಗಡಿ ಸಂಗಪ್ಪ, ಕಾರ್ಯದರ್ಶಿ ಗುರುಸಿದ್ದಸ್ವಾಮಿ, ಎನ್‌. ಎಂ.ಲೋಕೇಶ್‌ ಇದ್ದರು. ಖಜಾಂಚಿ ಎಚ್‌. ಚಂದ್ರಪ್ಪ ಸ್ವಾಗತಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next