ಮುರಳಿ ಹ್ಯಾಟ್ರಿಕ್ ಬಾರಿಸಿದ್ದಾರೆ. ಅವರ “ಉಗ್ರಂ’ 100ನೇ ಯಶಸ್ವಿ ಪ್ರದರ್ಶನ ಕಂಡಿತು. ನಂತರ ಬಿಡುಗಡೆಯಾದ “ರಥಾವರ’ 50 ದಿನ ಪ್ರದರ್ಶನ ಕಂಡಿತು. ಈಗ “ಮಫ್ತಿ’ ಸಹ ಅದೇ ಹಾದಿಯಲ್ಲಿದೆ. ಸದ್ಯದಲ್ಲೇ ಆ ಚಿತ್ರ 50 ದಿನ ಪೂರೈಸಲಿದೆ. ಈ ಮೂರು ಚಿತ್ರಗಳು ಯಶಸ್ವಿಯಾದವು ಎನ್ನುವುದರ ಜೊತೆಗೆ ಮೂರೂ ಚಿತ್ರಗಳಲ್ಲಿ ಮುರಳಿ ಬಹಳ ಗಂಭೀರವಾಗಿದ್ದರು ಎಂಬುದನ್ನು ಗಮನಿಸಬಹುದು.
ಈ ಚಿತ್ರಗಳಲ್ಲಿ ಅವರು ರೌಡಿಯಾಗಿರಲಿ ಅಥವಾ ಪೊಲೀಸ್ ಅಧಿಕಾರಿಯಾಗಿರಲಿ, ಪಾತ್ರ ಪೋಷಣೆ ಒಂದೇ ತರಹದ್ದಿತ್ತು ಎಂದು ಮೂರು ಚಿತ್ರಗಳನ್ನು ನೋಡಿದವರು ಗಮನಿಸಿದ್ದುಂಟು. ಹಾಗಾಗಿ ಮುರಳಿ ಬೇರೆ ಜಾನರ್‌ನ ಚಿತ್ರ ಮಾಡುವ ಯೋಚನೆಯಲ್ಲಿದ್ದಾರೆ. ಅವರ ಮುಂದಿನ ಚಿತ್ರ ಫ್ಯಾಮಿಲಿ ಚಿತ್ರವಾಗಿರುತ್ತದಂತೆ. ಹಾಗಂತ ಖುದ್ದು ಮುರಳಿ ಹೇಳಿಕೊಂಡಿದ್ದಾರೆ.
“ಪ್ರತಿ ಚಿತ್ರದಲ್ಲೂ ಏನು ವಿಭಿನ್ನವಾಗಿ ಮಾಡಬಹುದು ಅಂತ ಯೋಚಿಸಿ ಮಾಡುತ್ತಿದ್ದೇನೆ. ನನ್ನ ಮುಂದಿನ ಚಿತ್ರ ಫ್ಯಾಮಿಲಿ ಚಿತ್ರವಾಗಿರುತ್ತದೆ. ಫ್ಯಾಮಿಲಿ ಚಿತ್ರ ಎಂದರೆ ವಿಪರೀತ ಎಮೋಷನ್ ಮತ್ತು ಅಳು ಇರುತ್ತದೆ ಎಂಬ ನಂಬಿಕೆ ಇದೆ. ಇದು ಆ ತರಹದ ಚಿತ್ರವಲ್ಲ. ಏಕೆಂದರೆ, ಅದು ನನಗೆ ಮ್ಯಾಚ್ ಆಗುವುದಿಲ್ಲ. ಅದನ್ನು ಗಮನದಲ್ಲಿಟ್ಟುಕೊಂಡೇ ಬೇರೆ ತರಹದ ಪ್ರಯತ್ನ ಮಾಡುತ್ತಿದ್ದೇನೆ’ ಎನ್ನುತ್ತಾರೆ ಮುರಳಿ.
ಹಾಗಾದರೆ, ಮುರಳಿ ಅಭಿನಯದ ಮುಂದಿನ ಚಿತ್ರ ಯಾವುದು ಮತ್ತು ಅದನ್ನು ಯಾರು ನಿರ್ದೇಶಿಸುತ್ತಾರೆ ಎಂಬ ವಿಷಯವನ್ನು ಮುರಳಿ ಬಿಟ್ಟುಕೊಡುವುದಿಲ್ಲ. ಜಯಣ್ಣ ಬ್ಯಾನರ್‌ನಲ್ಲೇ ಇನ್ನೊಂದು ಸಿನಿಮಾ ಮಾಡುವುದಾಗಿ ಹೇಳಿದರೂ, ಅದು ಯಾವ ಚಿತ್ರ ಮತ್ತು ಯಾರು ನಿರ್ದೇಶಿಸುತ್ತಾರೆ ಎಂಬ ವಿಷಯವನ್ನು ಬಹಿರಂಗಗೊಳಿಸುವುದಿಲ್ಲ. “ಸದ್ಯದಲ್ಲೇ ಮುಂದಿನ ಚಿತ್ರದ ಬಗ್ಗೆ ಹೇಳುವೆ.
ಸದ್ಯಕ್ಕೆ ಕಥೆ ಕೆಲಸ ನಡೆಯುತ್ತಿದೆ. ಈ ಬಾರಿ ಸಹ ಹಲವು ಸರ್‌ಪ್ರ„ಸ್‌ಗಳು ಇರುತ್ತವೆ’ ಎನ್ನುತ್ತಾರೆ ಅವರು. ಇನ್ನು “ರಥಾವರ’ ಚಿತ್ರವು ತೆಲುಗಿಗೆ ಡಬ್ ಆಗಿದ್ದು, ಅಲ್ಲಿ ಚಿತ್ರ ಸೋತಿದ್ದು … ಇದ್ಯಾವುದರ ಬಗ್ಗೆಯೂ ತಮಗೆ ಗೊತ್ತಿಲ್ಲ ಎನ್ನುತ್ತಾರೆ ಮುರಳಿ. “ನಿಜಕ್ಕೂ ನನಗೆ ತೆಲುಗು “ರಥಾವಾರ’ದ ಬಗ್ಗೆ ಗೊತ್ತಿಲ್ಲ. ಅದೆಲ್ಲಾ ನಿರ್ಮಾಪಕರೇ ಪ್ಲಾನ್ ಮಾಡಿದ್ದು. ನನಗೆ ಯಾವುದೇ ವಿಷಯವೂ ಗೊತ್ತಿರಲಿಲ್ಲ. ಗೊತ್ತಿದ್ದರೆ ಆ ಬಗ್ಗೆ ಏನಾದರೂ ಹೇಳಬಹುದು.
ಹೀಗೆ ಮಾಡಬೇಡ, ಹಾಗೆ ಮಾಡು ಅಂತ ನಾನು ನನ್ನ ಮಗನಿಗೆ ಹೇಳಿ ಅರ್ಥ ಮಾಡಿಸಬಹುದು. ನನ್ನ ಮಗನ ಫ್ರೆಂಡ್‌ಗೆ ಹೇಳಿ ಅರ್ಥ ಮಾಡಿಸುವುದು ಕಷ್ಟ. ಅದೇ ತರಹ ಇಲ್ಲೂ. ಚಿತ್ರ ಇಲ್ಲಿ ಹಿಟ್ ಆಯ್ತು ಎಂಬ ಕಾರಣಕ್ಕೆ ಅಲ್ಲೂ ಹಿಟ್ ಆಗಲೇಬೇಕು ಅಂತಿಲ್ಲ. ಅದಕ್ಕೆ ಬೇರೆ ತರಹವೇ ಕೆಲಸ ಮಾಡಬೇಕು. ಈ ವಿಷಯದಲ್ಲಿ ಯಾರೂ ನನ್ನ ಸಂಪರ್ಕಿಸದಿರುವುದರಿಂದ, ನನಗೆ ಈ ವಿಷಯದಲ್ಲಿ ಹೇಳುವುದಕ್ಕೆ ಏನೂ ಇಲ್ಲ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ ಅವರು.