Advertisement
ಮಡಕೆ ಕೊಳ್ಳುವ ಗ್ರಾಹಕರ ನಿರೀಕ್ಷೆಯಲ್ಲಿ ಕುಂಬಾರಿಕೆ ಮಾಡುವ ವ್ಯಾಪಾರಿಗಳು ವ್ಯಾಪಾರಕ್ಕಾಗಿ ಎದುರು ನೋಡುತ್ತಿದ್ದು, ನಗರದ ರಸ್ತೆ ಬದಿ, ಸಂತೆ, ಮಾರುಕಟ್ಟೆಯಲ್ಲಿ ಕುಂಬಾರರು ತಮ್ಮ ಸರಕುಗಳೊಂದಿಗೆ ಠಿಕಾಣಿ ಹೂಡಿದ್ದಾರೆ. ಪಾರಂಪರಿಕ ಮಡಕೆ ಗಡಿಗೆಗಳ ತಯಾರಿಕೆಗೆ ಆಧುನಿಕ ಟಚ್ ನೀಡಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಕುಂಬಾರಿಕೆ ಕಸುಬು ನೆಲಕಚ್ಚಿದ್ದು, ಕೂಲಿ ಮಾಡಿ ಬದುಕನ್ನು ದೂಡಿದ ಕುಂಬಾರ ಜನಾಂಗದವರು ಈಗ ಕುಲಕಸು ಬನ್ನು ಪ್ರಾರಂಭಿಸಿ ಮಡಕೆ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.
Related Articles
Advertisement
ದಿನದಿಂದ ದಿನಕ್ಕೆ ಏರುತ್ತಿರುವ ತಾಪ: ದಿನದಿಂದ ದಿನಕ್ಕೆ ಬಿಸಿಲಿನ ತಾಪವು 30 ಡಿಗ್ರಿಯಿಂದ 37 ಡಿಗ್ರಿವರೆಗೆ ವ್ಯತ್ಯಾಸವಾಗುತ್ತಿದ್ದು, ಇನ್ನೂ ಮುಂದಿನ ದಿನಗಳಲ್ಲಿ ಬಿಸಿಲಿನ ತಾಪ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ಗುಡಿ ಕೈಗಾರಿಕೆಗೆ ಉತ್ತೇಜನ ಅಗತ್ಯ: ಸ್ಥಳೀಯವಾಗಿ ಕುಂಬಾರರ ಕುಟುಂಬಗಳಿಗೆ ತಿರುಪತಿ, ರಾಜಸ್ತಾನದ ಕೆಂಪು ಮಡಕೆ ಪೈಪೋಟಿ ಒಡ್ಡುತ್ತಿವೆ. ಶ್ರೀಮಂತರು ಬೇಸಿಗೆ ದಿನದಲ್ಲಿ ತಂಪಾದ ನೀರಿಗಾಗಿ ಫ್ರಿಜ್ ಬಳಸುವುದು ಸಾಮಾನ್ಯ. ಆದರೆ, ವಿದ್ಯುತ್ ಕಡಿತದಿಂದ ಫ್ರಿಜ್ ಕಾರ್ಯನಿರ್ವಹಿಸದ ಸಂದರ್ಭದಲ್ಲಿ ಮಣ್ಣಿನ ಮಡಕೆಯನ್ನೇ ಅವಲಂಬಿಸ ಬೇಕಾಗುತ್ತದೆ. ವಿದ್ಯುತ್ ಇರಲಿ, ಬಿಡಲಿ ಸದಾ ಕಾಲ ತಂಪಾದ ನೀರು ಸಿಗುವುದು ಮಾತ್ರ ಮಡಕೆಯಿಂದಲೇ. ಆದ್ದರಿಂದ, ಮಡಕೆ ಬಡವರ ಫ್ರಿಜ್ ಆಗಿದ್ದು, ಜನರು ಈ ಉದ್ಯಮಕ್ಕೆ ಹೆಚ್ಚಿನ ಬೆಂಬಲ ನೀಡಿ ಗ್ರಾಮೀಣ ಗುಡಿ ಕೈಗಾರಿಕೆಗೆ ಉತ್ತೇಜನ ನೀಡಬೇಕಿದೆ.
ಕುಲಕಸುಬು ಬಿಟಿಲ್ಲ: ಮಡಕೆ ತಯಾರಿಕ ಸಿದ್ದಯ್ಯವರ್ಷದಲ್ಲಿ ಮೂರ್ನಾಲ್ಕು ತಿಂಗಳು ಮಾತ್ರ ಮಡಕೆ ವೃತ್ತಿ ನಡೆಯುತ್ತದೆ. ಉಳಿದ ದಿನಗಳಲ್ಲಿ ಕೆಲಸವಿಲ್ಲದಂತಾಗುತ್ತದೆ. ಆದರೂ, ವಂಶಪಾರಂಪರ್ಯವಾಗಿ ಬಂದ ವೃತ್ತಿಯನ್ನು ನಿಲ್ಲಿಸಲು ಸಾಧ್ಯವಾಗಲ್ಲ. ವೃತ್ತಿಯಿಂದ ಗಳಿಸುವ ಹಣದಿಂದ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಕುಲಕಸುಬು ಬಿಟ್ಟಿಲ್ಲ ಎಂಬುದೇ ತೃಪ್ತಿ ಎಂಬ ಭಾವನೆ ಯೊಂದಿಗೆ ಕುಂಬಾರಿಕೆ ನಡೆಸುತ್ತಿದ್ದೇವೆ ಎನ್ನುತ್ತಾರೆ ಮಡಕೆ ತಯಾರಿಸುತ್ತಿರುವ ಗೌರಿಬಿದನೂರು ತಾಲೂಕಿನ ಕಮಲಾಪುರದ ಸಿದ್ದಯ್ಯ. ಕುಂಬಾರ ವೃತ್ತಿಗೆ ಪೆಟ್ಟು
ಬೇಸಿಗೆಯಲ್ಲಿ ತಣ್ಣನೆ ನೀರಿಗಾಗಿ ಜನರು ಮಡಕೆ ಮೊರೆ ಹೋಗುವರು. ಉಳಿದ ದಿನಗಳಲ್ಲಿ ಮಡಕೆ ಕೇಳುವವರೇ ಇರಲ್ಲ, ಮಡಕೆ ಬಿಟ್ಟರೆ ಮಣ್ಣಿನ ಪಾತ್ರೆ, ತಟ್ಟೆಗಳನ್ನು ಯಾರೂ ಕೇಳಲ್ಲ. ಹೀಗಾಗಿ ಕುಂಬಾರರು ನೀರಿನ ಮಡಕೆ, ತಂದೂರಿ ರೋಟಿಗಳಿಗೆ ಬಳಸುವ ವಾಡೆಗಳು, ಹೂವಿನ ಕುಂಡಗಳ ತಯಾರಿಕೆಗಷ್ಟೆ ಸೀಮಿತರಾಗಿದ್ದಾರೆ.
ವಿ.ಡಿ.ಗಣೇಶ್, ಗೌರಿಬಿದನೂರು