ಬೆಂಗಳೂರು: ಪರಿಸರ ಸಂರಕ್ಷಣೆ ಹೆಸರಿನಲ್ಲಿ ಗಣೇಶ ಹಬ್ಬ ಆಚರಣೆಗೆ ಹಲವು ನಿರ್ಬಂಧ ವಿಧಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿರುವ ಹೊಸ ಆದೇಶಗಳನ್ನು ಹಿಂಪಡೆಯಬೇಕೆಂದು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಆಗ್ರಹಿಸಿದೆ.
ಚರ್ಚ್‌ಸ್ಟ್ರೀಟ್ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಮುಂದೆ ಸೋಮವಾರ ಸೇರಿದ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಹಾಗೂ ನಗರದ ವಿವಿಧ ಸಾರ್ವಜನಿಕ ಗಣೇಶ ಉತ್ಸವ ಸಮಿತಿಗಳ ಸಾವಿರಾರು ಸದಸ್ಯರು, ಮಂಡಳಿ ಕ್ರಮ ಖಂಡಿಸಿದರು.
ಈ ವೇಳೆ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಈ.ಅಶ್ವತ್ಥನಾರಾಯಣ ಮಾತನಾಡಿ, ಗಣೇಶೋತ್ಸವ ನಮ್ಮ ರಾಷ್ಟ್ರದ ಏಕತೆ, ಸಂಸ್ಕೃತಿ ಹಾಗೂ ಸಮಾಜದ ಸಾಮರಸ್ಯ ಸಾರುವ ಹಬ್ಬ. ಇದರ ಆಚರಣೆಗೆ ಸಾಕಷ್ಟು ಸಂಪ್ರದಾಯಗಳಿವೆ. ಅವುಗಳ ಪಾಲನೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಡ್ಡಿಪಡೆಸುತ್ತಿದೆ. ಗಣೇಶ ಮೂರ್ತಿ ಎತ್ತರ, ಬಣ್ಣ, ಇಂತಿಷ್ಟೇ ದಿನ ಉತ್ಸವ ನಡೆಸಬೇಕು,
ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಪಡೆಯಬೇಕು ಎಂಬ ನಿರ್ಬಂಧ ವಿಧಿಸಿ, ಆದೇಶ ಪಾಲಿಸದಿದ್ದರೆ ಮೂರ್ತಿಗಳನ್ನು ವಶ ಪಡಿಸಿಕೊಳ್ಳುವುದು, ದಂಡ ಹಾಕುವುದು, ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ನಿಯಮ ರೂಪಿಸಿದೆ. ಇವು ನೇರವಾಗಿ ಧಾರ್ಮಿಕ ಭಾವನೆಗೆ ದಕ್ಕೆ ತರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಮಂಡಳಿ ಆದೇಶದಿಂದ ಮೂರ್ತಿ ಮಾಡುವ ಕಲಾವಿದರು, ವ್ಯಾಪಾರಿಗಳು ಆತಂಕಕ್ಕೆ ಒಳಗಾಗಿ ಮೂರ್ತಿ ನಿರ್ಮಾಣ ಹಾಗೂ ವ್ಯಾಪರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಹಬ್ಬದ ಸಂದರ್ಭದಲ್ಲಿ ಭಕ್ತರಿಗೆ ಗಣೇಶ ಮೂರ್ತಿ ಸಿಗದೇ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ. ಕಾರಣ, ಮಂಡಳಿ ತನ್ನ ಹೊಸ ಆದೇಶಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜು ಮಾತನಾಡಿ, ಮಂಡಳಿಯು ಈಗಾಗಲೇ ಕಲಾವಿದರು ಹಾಗೂ ವ್ಯಾಪಾರಿಗಳ ಬಳಿ ಇರುವ ಗಣೇಶ ಮೂರ್ತಿಗಳನ್ನು ಜಪ್ತಿ ಮಾಡುತ್ತಿದೆ. ಕೂಡಲೇ ಈ ಕ್ರಮ ನಿಲ್ಲಿಸಿ, ಮೂರ್ತಿಗಳು ಹಾಗೂ ವಿಧಿಸಿರುವ ದಂಡ ಹಿಂದಿರುಗಿಸಬೆಕು. ಒಂದು ವೇಳೆ ಆದೇಶ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷಣ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಜತೆ ಚರ್ಚಿಸಿ ನಿಯಮಗಳನ್ನು ಮರುಪರಿಶೀಲನೆ ನಡೆಸುವುದಾಗಿ ತಿಳಿಸಿದರು.