Advertisement

ಸೂಕ್ಷ್ಮದಿಂದ ಅತಿ ಸೂಕ್ಷ್ಮದ ಕಡೆಗೆ?

03:19 PM Apr 27, 2020 | mahesh |

ಬೆಂಗಳೂರು: ಇಡೀ ದೇಶದಲ್ಲಿ ಕೋವಿಡ್ ವಾರಿಯರ್ ಮೇಲೆ ದಾಳಿ ನಡೆಸಿದ ಬೆರಳೆಣಿಕೆಯಷ್ಟು ಪ್ರದೇಶಗಳ ಪೈಕಿ ಪಾದರಾಯನಪುರ ಕೂಡ ಒಂದು. ಜತೆಗೆ ಸುಗ್ರೀವಾಜ್ಞೆ ಜಾರಿಗೂ ಪರೋಕ್ಷವಾಗಿ ಇದು ಕಾರಣವಾಯಿತು. ಈ ಮೂಲಕ ರಾಷ್ಟ್ರಮಟ್ಟದಲ್ಲಿ ರಾಜ್ಯದ “ಕಪ್ಪುಚುಕ್ಕೆ’ಯಾಗಿ ಪರಿಣಮಿಸಿದೆ. ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಸರ್ಕಾರಕ್ಕೆ ಸವಾಲಾದ ಕೆಲವು ಆರೋಪಿಗಳ ಕೃತ್ಯದಿಂದ ಇಡೀ ಪಾದರಾಯನಪುರ ಇದೀಗ ಕಳಂಕ ಪಟ್ಟ ಹೊರುವಂತಾಗಿದೆ. ದೆಹಲಿ ಧಾರ್ಮಿಕ ಸಮಾವೇಶದಿಂದ ಬಂದವರು ಪಾದರಾಯನಪುರದಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿನವರು ತಪಾಸಣೆ ಅಥವಾ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಕೆಲವರು ಕೈಗೆ ಸಿಗುತ್ತಿಲ್ಲ ಎಂಬ ಮಾತುಗಳ ನಡುವೆಯೇ ಏ. 19ರಂದು ರಾತ್ರಿ ನಡೆದ ಘಟನೆ ಒಂದೇ ದಿನದಲ್ಲಿ ರಾತ್ರೋರಾತ್ರಿ ಪಾದರಾಯನಪುರ ಇಡೀ ದೇಶಕ್ಕೆ ಪರಿಚಯವಾದಂತಾಯಿತು.

Advertisement

ಗಲಭೆಯ ದೃಶ್ಯಾವಳಿಗಳು ರಾಷ್ಟ್ರೀಯ ವಾಹಿನಿಗಳಲ್ಲಿ ಬಿತ್ತರವಾದವು. ತಕ್ಷಣಕ್ಕೆ ಇದು ತಿಳಿಯಾಗಿದ್ದರೂ, ಇದರ ಪರಿಣಾಮ ಮಾತ್ರ ದೀರ್ಘಾವಧಿಗಳ ಕಾಲ ಇರುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಆ ಪ್ರದೇಶವನ್ನು ಪ್ರತ್ಯೇಕವಾಗಿಟ್ಟು ನೋಡುವಂತೆ ಮಾಡಿದೆ. ಇದರ ಮುನ್ಸೂಚನೆಯನ್ನು ಗಲಭೆಯಲ್ಲಿ ವಶಕ್ಕೆ ಪಡೆದವರ ಸ್ಥಳಾಂತರ ವಿಚಾರದಲ್ಲೇ ಬಿಂಬಿತವಾಗುತ್ತಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಘಟನೆಯಲ್ಲಿ ಬಂಧಿತರಾದ 120 ಮಂದಿಯನ್ನು ರಾಮನಗರ ಕಾರಾಗೃಹಕ್ಕೆ ರವಾನೆ, ಅಲ್ಲಿಯೇ ಐವರಿಗೆ ಕೊರೊನಾ ಸೋಂಕು, ಮಾಜಿ ಮುಖ್ಯಮಂತ್ರಿ ಸಹಿತ ಸರ್ಕಾರದ ಕ್ರಮಕ್ಕೆ ಆಕ್ರೋಶ, ಕಾರಾಗೃಹ ದಿಂದ ಹಜ್‌ ಭವನಕ್ಕೆ ಸ್ಥಳಾಂತರ, ಹೋಟೆಲ್, ಸರ್ವಿಸ್‌ ಅಪಾರ್ಟ್‌ಮೆಂಟ್‌ನಲ್ಲಿ ಪಾದರಾಯನಪುರದಲ್ಲಿ ಇದ್ದವರನ್ನು ಕ್ವಾರಂಟೈನ್‌ ನಲ್ಲಿರಿಸುವ ಯತ್ನ ಜನಪ್ರತಿನಿಧಿಗಳ ಸಹಿತ ಸ್ಥಳೀಯರ ವಿರೋಧ. ಈ ಎಲ್ಲ ಘಟನೆಗಳಿಂದ ಹೆಸರು ಪದೇ ಪದೇ ಮಾಧ್ಯಮಗಳಲ್ಲೂ ಪ್ರಸ್ತಾಪವಾಗಿ ಪಾದರಾಯನಪುರ ಎಂದರೆ ಬೆಚ್ಚಿಬೀಳುವಂತಾಗಿದೆ.

ಸರ್ಕಾರದ ಕಾಳಜಿ ಅರ್ಥ ಮಾಡಿಕೊಳ್ಳದ ಕೆಲವೇ ಕೆಲವು ಗಲಭೆಕೋರರ ಕೃತ್ಯದಿಂದ ಇಡೀ ಪಾದರಾಯನಪುರಕ್ಕೆ ಕಳಂಕ ಹಣೆಪಟ್ಟಿ ಅಂಟಿದ್ದು ದುರಂತ. ಆದರೆ, ಇದರಿಂದ ಉಂಟಾಗುವ ಮುಂದಿನ ಪರಿಣಾಮಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಹಿಂದೆಯೂ ಕೇಳಿಬಂದಿತ್ತು: ಹಿಂದೆ 90ರ ದಶಕದಲ್ಲಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ನಡೆದಿದ್ದ ಕೆಲವು ಪ್ರಕರಣಗಳ ಸಂದರ್ಭದಲ್ಲೂ ಪಾದರಾಯನಪುರ ಹೆಸರು ಕೇಳಿಬಂದಿತ್ತು. ಅದಾದ ನಂತರ ಹಲವಾರು ಬಾರಿ ಅಲ್ಲಿ ನಡೆದ ವಿದ್ಯಮಾನಗಳು ಕಾನೂನು ಸುವ್ಯವಸ್ಥೆಗೆ ಸವಾಲಾಗಿತ್ತು. ಈಗಿನ ಘಟನೆಯಿಂ¨ ಮತ್ತಷ್ಟು ಕುಖ್ಯಾತಿ ಪಡೆದಂತಾಗಿದೆ. ಇನ್ಮುಂದೆ ಪಾದರಾಯನಪುರ ಸೂಕ್ಷ್ಮದಿಂದ “ಅತಿ ಸೂಕ್ಷ್ಮ ಪ್ರದೇಶ’ವಾಗಿ ಮಾರ್ಪಟ್ಟಿದೆ. ಮುಂದೆ ಎದುರಾಗಬಹುದಾದ ಚುನಾವಣೆಗಳು, ಬಂದ್‌ ಮತ್ತಿತರ ಸಂದರ್ಭಗಳಲ್ಲಿ “ರೆಡ್‌ ಅಲರ್ಟ್‌’ ಎಂದು ಪರಿಗಣಿಸಿದರೂ ಅಚ್ಚರಿಯಿಲ್ಲ. ಇದಲ್ಲದೆ, ಈ ಭಾಗದಲ್ಲಿ ಒಂದು ವೇಳೆ ರೌಡಿ ಶೀಟರ್‌ಗಳಿದ್ದರೆ, ಆ ಪಟ್ಟಿಯನ್ನು ಮರುಪರಿಶೀಲಿಸಲೂಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಇಡೀ ನಗರಕ್ಕೆ ಒಂದು ರೀತಿಯಾದರೆ, ಪಾದರಾಯನಪುರವನ್ನು ಪರಿಗಣಿಸುವ ರೀತಿ ಮತ್ತೂಂದು ರೀತಿ ಆಗಲಿದೆ. ಇನ್ನು ಕಾನೂನು ಸುವ್ಯವಸ್ಥೆ ವಿಚಾರಕ್ಕೆ ಬಂದರೆ ಸ್ಥಳೀಯ
ಪೊಲೀಸರ ಕೈಯಲ್ಲಿ ಕಷ್ಟವಾಗಬಹುದು ಎಂದು ಭದ್ರತೆ ಹಾಗೂ ನಿಯಂತ್ರಣಕ್ಕೆ ಸೇನಾ ಪಡೆಗಳ ತುಕಡಿ ನಿಯೋಜಿಸುವಂತಹ ಸ್ಥಿತಿ ನಿರ್ಮಾಣವಾಗಬಹುದು ಎಂದು ನಿವೃತ್ತ ಪೊಲೀಸ್‌ ಅಧಿಕಾರಿಗಳು ಹೇಳುತ್ತಾರೆ.

– ಎಸ್‌. ಲಕ್ಷ್ಮಿನಾರಾಯಣ

Advertisement
Advertisement

Udayavani is now on Telegram. Click here to join our channel and stay updated with the latest news.

Next