Advertisement

ಸಕ್ರೆಬೈಲಿನಿಂದ ಐದು ಮರಿಯಾನೆ ಜಾರ್ಖಂಡ್‌ಗೆ

09:53 AM Oct 03, 2017 | Team Udayavani |

ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ಆನೆ ಬಿಡಾರಗಳಲ್ಲಿ ಒಂದಾದ ಸಕ್ರೆಬೈಲು ಆನೆ ಬಿಡಾರದಿಂದ 5 ಮರಿಯಾನೆಗಳು ಜಾರ್ಖಂಡ್‌ಗೆ ಹಸ್ತಾಂತರವಾಗಲಿವೆ.

Advertisement

ಅಮೃತ (12), ಅದರ ಮರಿ ಪಾರ್ವತಿ (2), ಕಿರಣ (4), ರಾಘವೇಂದ್ರ (30) ಹಾಗೂ ಭಾಸ್ಕರ (5) ಮರಿಯಾನೆಗಳನ್ನು ಹೊರ ರಾಜ್ಯಕ್ಕೆ ಕಳುಹಿ ಸಲು ತೆರೆಮರೆಯ ಸಿದ್ಧತೆ ಆರಂಭಗೊಂಡಿದೆ. ಎಲ್ಲ ಅಂದುಕೊಂಡಂತೆ ಆದರೆ ನವೆಂಬರ್‌ನಲ್ಲಿ ಈ ಐದು ಮರಿಯಾನೆಗಳು ಸಕ್ರೆಬೈಲು ಆನೆ ಬಿಡಾರಕ್ಕೆ ಬಹುತೇಕ ಶಾಶ್ವತ ವಿದಾಯ ಹೇಳಲಿವೆ.

ಪ್ರಾಣಿ ವೀಕ್ಷಣೆಗೆ ಬಳಕೆ: ಜಾರ್ಖಂಡ್‌ನ‌ ದುದ್ವಾ ಸಫಾರಿಯಲ್ಲಿ ಹುಲಿ, ಸಿಂಹ ಸೇರಿ ಕಾಡು ಪ್ರಾಣಿಗಳನ್ನು ವೀಕ್ಷಿಸಲು ಆನೆಗಳನ್ನು ಬಳಸಲಾಗುತ್ತಿದೆ. ಅಲ್ಲೀಗ ಆನೆಗಳ ಕೊರತೆ ಎದುರಾಗಿದ್ದು, ಇದಕ್ಕಾಗಿ ಸಕ್ರೆಬೈಲು ಆನೆ ಬಿಡಾರದಿಂದ ಐದು ಮರಿಯಾನೆ ಗಳನ್ನು ಕರೆದೊಯ್ಯಲಾಗುತ್ತಿದೆ. ಆದರೆ, ಪ್ರವಾಸಿ ತಾಣವೂ ಆಗಿದ್ದ ಸಕ್ರೆಬೈಲು ಆನೆ ಬಿಡಾರದಲ್ಲಿ ಮರಿಯಾನೆಗಳೇ ದೊಡ್ಡ ಆಕರ್ಷಣೆಯಾಗಿದ್ದು, ಮರಿಯಾನೆಗಳನ್ನು ಜಾರ್ಖಂಡ್‌ ರಾಜ್ಯಕ್ಕೆ ಕಳುಹಿಸುವ ವನ್ಯಜೀವಿ ಇಲಾಖೆ ನಿರ್ಧಾರ ಆನೆ ಬಿಡಾರದ ಮಾವುತರು, ಕಾವಾಡಿಗಳು ಮತ್ತು ಪ್ರಾಣಿ ಪ್ರೇಮಿಗಳಲ್ಲಿ ಅಸಮಾಧಾನ ಮೂಡಿಸಿದೆ.

ಎರಡು ವರ್ಷದ ಹಿಂದೇ ಒಪ್ಪಿಗೆ: ಕಳೆದ ಎರಡು ವರ್ಷಗಳ ಹಿಂದೆ ಜಾರ್ಖಂಡ್‌ನ‌ ದುದ್ವಾ ಟೈಗರ್‌ ಜಂಗಲ್‌ ಸಫಾರಿಗೆ ಎಲಿಫೆಂಟ್‌ ಪೆಟ್ರೊಲಿಂಗ್‌ ಗಾಗಿ ರಾಜ್ಯದ ವಿವಿಧ ಆನೆ ಬಿಡಾರದಲ್ಲಿನ ಆನೆ ಗಳಿಗಾಗಿ ಬೇಡಿಕೆ ಸಲ್ಲಿಸಲಾಗಿತ್ತು. ಈ ಸಂದರ್ಭ ದಲ್ಲಿ ರಾಜ್ಯದ ದುಬಾರೆ ಮತ್ತು ಮುತ್ತೂಡಿಯಿಂದ 12 ಸಾಕಾನೆಗಳನ್ನು ಜಾರ್ಖಂಡ್‌ಗೆ ಕಳುಹಿಸಲಾಗಿತ್ತು. ಅದೇ ಸಂದರ್ಭದಲ್ಲಿ ಸಕ್ರೆಬೈಲು
ಆನೆ ಬಿಡಾರದಿಂದ ಐದು ಸಾಕಾನೆಗಳನ್ನು ದುದ್ವಾಕ್ಕೆ ಕಳುಹಿಸಲು ಅರಣ್ಯ ಹಿರಿಯ ಅಧಿಕಾರಿಗಳು ಅನುಮೋದನೆ ನೀಡಿದ್ದರು. ಈಗ ಆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ. 

ತರಬೇತಿ: ಆಕ್ಟೋಬರ್‌ ಮೊದಲ ವಾರದಲ್ಲಿ ಜಾರ್ಖಂಡ್‌ನ‌ ಮಾವುತರು ಇಲ್ಲಿನ ಸಕ್ರೆಬೈಲಿಗೆ ಬಂದು ತರಬೇತಿ ಪಡೆಯಲಿದ್ದಾರೆ. ಅವರಿಗೆ ಬಿಡಾರದ ಮಾವುತರು ಆನೆಗಳಿಗೆ ನೀಡುವ ಕಮಾಂಡಿಂಗ್‌ ಬಗ್ಗೆ ತರಬೇತಿ ನೀಡಲಿದ್ದು, ಬಳಿಕ ವಾಹನದಲ್ಲಿ ರಸ್ತೆ ಮೂಲಕ ಒಂಭತ್ತು ದಿನಗಳ ಕಾಲ ಸಾಗುವ ಗಜ ಪಯಣದಲ್ಲಿ ವನ್ಯಜೀವಿ ವೈದ್ಯರು ಹಾಗೂ ಮಾವುತರು ಇರಲಿದ್ದಾರೆ. ದುದ್ವಾ ವನ್ಯಜೀವಿ ಪ್ರದೇಶದಲ್ಲಿ ಆನೆಗಳಿಗೆ ಮತ್ತು ಅಲ್ಲಿನ ಮಾವುತರಿಗೆ ಹೊಂದಿಕೊಳ್ಳುವಂತೆ ಸಕ್ರೆಬೈಲು ಮಾವುತರು ತರಬೇತಿ ನೀಡಿ ಹಿಂತಿರುಗಲಿದ್ದಾರೆ.

Advertisement

ಇವೇ ಇಲ್ಲಿನ ಆಕರ್ಷಣೆ: ಸಕ್ರೆಬೈಲು ಆನೆ ಬಿಡಾರ ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಪ್ರತಿಷ್ಠಿತ ಬಿಡಾರವಾಗಿ ಹೊರಹೊಮ್ಮಿದೆ. ಇಲ್ಲಿನ ಸಾಕಾನೆ ಗಳು ಪ್ರವಾಸಿಗರ ಆಕರ್ಷಣೆಯಾಗಿದ್ದು, ಅದರ ಲ್ಲಿಯೂ ಮರಿಯಾನೆಗಳು ಹೆಚ್ಚಿನ ರೀತಿಯಲ್ಲಿ ಪ್ರವಾಸಿಗರನ್ನು, ಅದರಲ್ಲಿಯೂ ಮಕ್ಕಳನ್ನು ಆಕರ್ಷಿಸುತ್ತಿವೆ. ಪ್ರತಿ ವರ್ಷ ವನ್ಯಜೀವಿ ಸಂರಕ್ಷಣಾ ದಿನಾಚರಣೆ ಸಂದರ್ಭದಲ್ಲಿ ಆಯೋಜಿಸುವ ಆನೆಗಳ ಕ್ರೀಡಾಕೂಟದಲ್ಲಿ ಈ ಮರಿಯಾನೆಗಳು ಹೆಚ್ಚು ಚಪ್ಪಾಳೆ ಗಿಟ್ಟಿಸುತ್ತಿದ್ದವು. ಇವುಗಳ ಆಟ, ತುಂಟಾಟಗಳನ್ನು ನೋಡಲೆಂದೇ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ ಎಂಬುದು ಮಾವುತರು ಮತ್ತು ಕಾವಾಡಿಗಳ ಮಾತು. 

ನಾವೇನೂ ಹೇಳುವಂತಿಲ್ಲ
ಆನೆಗಳನ್ನು ಕಳುಹಿಸುವ ನಿರ್ಧಾರ ಸರ್ಕಾರದ ಮಟ್ಟದಲ್ಲಿ ನಡೆದ ಪ್ರಕ್ರಿಯೆ. ಇಲ್ಲಿ ನಾವೇನೂ ಹೇಳುವಂತಿಲ್ಲ. ನಮ್ಮ ಕೈಯಲ್ಲಿ ಏನೂ ಇಲ್ಲ ಎನ್ನುತ್ತಾರೆ ಸ್ಥಳೀಯ ಅಧಿಕಾರಿಗಳು. ಒಟ್ಟಾರೆ ಇಲ್ಲಿನ ಸಕ್ರೆಬೈಲು ಆನೆ ಬಿಡಾರದ ಆಕರ್ಷಣೆಯ ಕೇಂದ್ರವಾಗಿದ್ದ ಐದು ಮರಿಯಾನೆಗಳು ಇನ್ನು ನೆನಪು ಮಾತ್ರ ಎಂಬುದನ್ನು ನೆನೆಸಿಕೊಳ್ಳುವುದೇ ಕಷ್ಟ ಎಂಬುದು ಜನರ ಮಾತು. 

 ಗೋಪಾಲ್‌ ಯಡಗೆರೆ

Advertisement

Udayavani is now on Telegram. Click here to join our channel and stay updated with the latest news.

Next