ಚಂಡೀಗಡ/ದಿಬ್ರೂಗಡ: ಪಂಜಾಬ್‌ನ ಎಂಭತ್ತು ಸಾವಿರ ಮಂದಿ ಪೊಲೀಸರು ನಾಲ್ಕು ಹಗಲಿರುಳು ಹುಡುಕಾಡುತ್ತಿರುವ ಪ್ರತ್ಯೇಕತಾವಾದಿ ನಾಯಕ ಅಮೃತ್‌ಪಾಲ್ ಸಿಂಗ್ ಪರಾರಿಯಾಗಿದ್ದಾನೆ. ಅದೂ ಬಹುವೇಷಗಳೊಂದಿಗೆ ಮತ್ತು ಹಲವು ವಾಹನಗಳನ್ನು ಬದಲು ಮಾಡಿ ಎಂದರೆ ಅಚ್ಚರಿಯಾದೀತು.
ಮರ್ಸಿಡೆಸ್ ಬೆಂಜ್‌ನಿಂದ ಮಾರುತಿ ಸುಜುಕಿ ಬ್ರೆಜಾ ಮತ್ತು ಕೊನೇಗೆ ಬೈಕ್ ಏರಿ ಪರಾರಿಯಾಗಿದ್ದಾನೆ. ಇಷ್ಟು ಮಾತ್ರವಲ್ಲ ಸಿಖ್ ಸಮುದಾಯದ ಧಾರ್ಮಿಕ ವಸ್ತ್ರಗಳನ್ನು ಧರಿಸುತ್ತಿದ್ದ ಆತ ಕೊನೆಗೆ ಬಾಲಿವುಡ್ ನಟನನ್ನೂ ಮೀರಿಸುವಂತೆ ಚಂದವಾಗಿ ಪ್ಯಾಂಟ್ ಶರ್ಟ್ ಧರಿಸಿದ್ದಾನೆ. ಆತನ ಡ್ರೆಸ್ ಮತ್ತು ಮುಖ ಬದಲಾವಣೆಯ ಏಳು ಸರಣಿ ಫೋಟೋಗಳನ್ನೂ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಪೊಲೀಸರು ಒಂದು ಹಂತದಲ್ಲಿ ಆತನ ಕಾರನ್ನು ಚೆಕ್‌ಪೋಸ್ಟ್‌ನಲ್ಲಿ ತಡೆದು ನಿಲ್ಲಿಸಲು ಪ್ರಯತ್ನ ಮಾಡಿದ್ದಾರೆ. ಆದರೆ, ಕಾರು ಗೇಟ್ ಅನ್ನು ಗುದ್ದಿ ಮುರಿದು ಪರಾರಿಯಾಗಿದೆ. ಬಿಡುಗಡೆಯಾಗಿರುವ ದೃಶ್ಯಾವಳಿಗಳ ಪ್ರಕಾರ ಅಮೃತ್‌ಪಾಲ್ ಸಿಂಗ್ ಮೊದಲಿಗೆ ಮರ್ಸೆಡೆಸ್ ಬೆಂಜ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ. ಶನಿವಾರ 11.37ರ ವೇಳೆಗೆ ಈ ಘಟನೆ ನಡೆದಿದೆ. ಇದಾದ ಬಳಿಕ ಕೆಲವೇ ಗಂಟೆಗಳಲ್ಲಿ ಆತ ಜಾಲಂಧರ್‌ನ ಶಾಕೋಟ್ ಎಂಬಲ್ಲಿ ಕಾರು ಬದಲಾವಣೆ ಮಾಡಿ ಮಾರುತಿ ಸುಜುಕಿ ಬ್ರೆಜಾ ಕಾರಿನಲ್ಲಿ ಪ್ರಯಾಣ ಮಾಡುತ್ತಿರುವುದೂ ವಿಡಿಯೋದಲ್ಲಿ ಸೆರೆಯಾಗಿದೆ.
ಆತ ತನ್ನ ನಿಕಟವರ್ತಿಯ ಜತೆಗೆ ಇದ್ದ. ಬ್ರೆಜಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮುಂದಿನ ಆಸನದಲ್ಲಿ ಆತ ಕುಳಿತಿದ್ದ.
Related Articles
ಅದರಲ್ಲಿಯೇ ಆತ ಬಟ್ಟೆಗಳನ್ನು ಬದಲಾವಣೆಯನ್ನೂ ಮಾಡಿದ್ದಾನೆ. ನಂತರದ ಹಂತದಲ್ಲಿ ಆತ ಎರಡು ಬುಲೆಟ್ ಬೈಕ್‌ಗಳಲ್ಲಿ ತನ್ನ ಸಹಚರರ ಜತೆಗೆ ಪ್ರಯಾಣ ಮಾಡಿದ್ದಾನೆ. ಬೈಕ್‌ನಲ್ಲಿ ಪ್ರಯಾಣ ಮಾಡುವುದಕ್ಕೆ ಮೊದಲು ಕಾಲ ಬ್ರೆಜಾ ಕಾರಿನಿಂದ ಇಳಿದು, ಗದ್ದೆಯ ನಡುವೆಯೇ ಮತ್ತೆ ಬಟ್ಟೆ ಬದಲಾವಣೆ ಮಾಡಿದ್ದಾನೆ. ಜತೆಗೆ ಹಲವಾರು ಬಾರಿ ದಾರಿಯನ್ನೂ ಬದಲಿಸಿ ಪರಾರಿಯಾಗಿದ್ದಾನೆ.
ನೆರವಿತ್ತ ನಾಲ್ವರು ಸೆರೆ:
ಪಾಲ್ ಪರಾರಿಯಾಗಲು ನೆರವಾದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳವಾರ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ ಬ್ರೆಜಾ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಆತನನ್ನು ಚೇಸ್ ಮಾಡುವ ವೇಳೆ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಸಿದ್ದಾರೆ.
ಪರಾರಿಯಾಗಿರುವ ಸಾಧ್ಯತೆ:
ಎಂಭತ್ತು ಸಾವಿರ ಮಂದಿ ಪಂಜಾಬ್ ಪೊಲೀಸರು ಹಗಲಿರುಳು ಅಮೃತ್ ಪಾಲ್‌ಗಾಗಿ ಶೋಧ ಕಾರ್ಯ ನಡೆಸುತ್ತಿರುವಂತೆಯೇ ಹೊಸತೊಂದು ಮಾಹಿತಿ ಹೊರಬಿದ್ದಿದೆ. ಆತ ರಾಜ್ಯದಿಂದ ಪರಾರಿಯಾಗಿರುವ ಸಾಧ್ಯತೆ ಇದೆ. ಈ ಬಗ್ಗಿ ಅಲ್ಲಿನ ಪೊಲೀಸರೇ ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಮೂವರು:
ಖಲಿಸ್ತಾನ ಬೆಂಬಲಿಗ ನಾಯಕ ಅಮೃತ್ ಪಾಲ್ ಸಿಂಗ್‌ನ ಇನ್ನೂ ಮೂವರು ಬೆಂಬಲಿಗರನ್ನು ಅಸ್ಸಾಂ ದಿಬ್ರೂಗಡ ಜೈಲಿಗೆ ಮಂಗಳವಾರ ಕರೆತರಲಾಗಿದೆ. ಈ ಪೈಕಿ ಆತನ ಸಂಬಂಧಿ ಹರ್ಜಿತ್ ಸಿಂಗ್ ಕೂಡ ಸೇರಿದ್ದಾನೆ. ಇದುವರೆಗೆ ಒಟ್ಟು ಏಳು ಮಂದಿಯನ್ನು ಅಸ್ಸಾಂಗೆ ತಂದಂತೆ ಆಗಿದೆ.
80 ಸಾವಿರ ಪೊಲೀಸರು ಏನು ಮಾಡುತ್ತಿದ್ದರು?
“ಪಂಜಾಬ್‌ನ 80 ಸಾವಿರ ಪೊಲೀಸರು ಏನು ಮಾಡುತ್ತಿದ್ದರು. ಇದೊಂದು ಗುಪ್ತಚರ ವೈಫಲ್ಯವಲ್ಲವೇ?’ ಹೀಗೆಂದು ಪಂಜಾಬ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡದ್ದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್. ಅಮೃತ್‌ಪಾಲ್ ಸಿಂಗ್‌ನನ್ನು ಹುಡುಕಿ ಕೊಡಬೇಕು ಎಂದು ಆತನ “ವಾರಿಯರ್ಸ್ ಡೆ ಪಂಜಾಬ್’ ಸಂಘಟನೆಯ ಕಾನೂನು ಸಲಹೆಗಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, ಪಂಜಾಬ್‌ನ ಅಡ್ವೊಕೇಟ್ ಜನರಲ್ ಅವರನ್ನು ತರಾಟೆಗೆ ತೆಗೆದುಕೊಂಡಿತು.
ನ್ಯಾ.ಎನ್.ಎಸ್.ಶೆಖಾವತ್ ನೇತೃತ್ವದ ನ್ಯಾಯಪೀಠ ರಾಜ್ಯ ಪೊಲೀಸರು ಹೊಂದಿರುವ ಗುಪ್ತ ಮಾಹಿತಿ ವ್ಯವಸ್ಥೆಯ ವೈಫಲ್ಯವಿದು. ಅಮೃತ್‌ಪಾಲ್ ಸಿಂಗ್ ಹೊರತು ಪಡಿಸಿ ಉಳಿದ 114 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳುತ್ತೀರಿ. ಹಾಗಿದ್ದರೆ 80 ಸಾವಿರ ಪೊಲೀಸರು ಏನು ಮಾಡುತ್ತಿದ್ದರು ಎಂದು ಪ್ರಶ್ನೆ ಮಾಡಿತು. ಜತೆಗೆ ಅಮೃತಸರ ಗ್ರಾಮೀಣ ಪೊಲೀಸ್ ವಿಭಾಗದ ಎಸ್‌ಪಿ ಸಲ್ಲಿಸಿದ “ಅಮೃತ್‌ಪಾಲ್‌ನನ್ನು ಬಂಧಿಸಲಾಗಿಲ್ಲ ಅಥವಾ ವಶದಲ್ಲಿ ಇರಿಸಿಕೊಳ್ಳಲಾಗಿಲ್ಲ’ ಎಂಬ ಪ್ರಮಾಣಪತ್ರವನ್ನೂ ಒಪ್ಪಿಕೊಂಡಿತು. ಅದರಲ್ಲಿ ಆತ ಧಾರ್ಮಿಕ ಪ್ರತ್ಯೇಕತಾವಾದವನ್ನು ಪ್ರಚಾರ ಮಾಡುತ್ತಿದ್ದ ಎಂದೂ ಆರೋಪಿಸಲಾಗಿದೆ.