Advertisement

ನಳನಳಿಸಲಿದೆ ಕರ್ತವ್ಯಪಥ; ಇದರ ವಿಶೇಷ ಏನು? ಈ ಕುರಿತ ಒಂದು ನೋಟ ಇಲ್ಲಿದೆ.

12:46 AM Sep 07, 2022 | Team Udayavani |

ಕೇಂದ್ರದ ನರೇಂದ್ರ ಮೋದಿ ಸರಕಾರದ ಅತ್ಯಂತ ನಿರೀಕ್ಷೆಯ ಸೆಂಟ್ರಲ್‌ ವಿಸ್ತಾ ಯೋಜನೆಯ ಒಂದು ಭಾಗ ಗುರುವಾರ ಉದ್ಘಾಟನೆಗೊಳ್ಳಲಿದೆ. ರಾಜಪಥ ಮಾರ್ಗವು ಕರ್ತವ್ಯ ಪಥವಾಗಿ ಬದಲಾಗಲಿದೆ. 101 ಎಕ್ರೆ ಜಾಗದಲ್ಲಿ ಹುಲ್ಲುಹಾಸು ಅಭಿವೃದ್ಧಿಯಾಗಿದೆ. ಕೆಂಪು ಬಣ್ಣದ ಗ್ರಾನೈಟ್‌ನಿಂದ 16.5 ಕಿ.ಮೀ. ನಡಿಗೆ ಪಥವನ್ನೂ ನಿರ್ಮಿಸಲಾಗಿದೆ. ಹಾಗಾದರೆ ಗುರುವಾರ ಉದ್ಘಾಟನೆಗೊಳ್ಳಲಿರುವುದು ಏನು? ಇದರ ವಿಶೇಷ ಏನು? ಈ ಕುರಿತ ಒಂದು ನೋಟ ಇಲ್ಲಿದೆ.

Advertisement

ನಾಳೆ ಪ್ರಧಾನಿಯಿಂದ ಉದ್ಘಾಟನೆ
ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನವೀಕರಿಸಲಾದ “ಕರ್ತವ್ಯ ಪಥ’ (ಸೆಂಟ್ರಲ್‌ ವಿಸ್ತಾ ಅವೆನ್ಯೂ) ದ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಪ್ರಧಾನಮಂತ್ರಿಗಳ ನೂತನ ಕಚೇರಿ ಸೇರಿದಂತೆ ಪ್ರಧಾನಿ ಕಾರ್ಯಾಲಯಗಳನ್ನು ಒಳಗೊಂಡಿರುವ “ಕರ್ತವ್ಯ ಪಥ’ ವನ್ನು ಇದೇ ಗುರುವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿ ದ್ದಾರೆ. “ಕರ್ತವ್ಯ ಪಥ’ದ ಸುತ್ತಮುತ್ತಲಿನ ಉದ್ಯಾನಗಳು ಹಚ್ಚಹಸುರಿನಿಂದ ಕಂಗೊಳಿಸುತ್ತಿವೆ. 101 ಎಕ್ರೆ ಜಾಗದಲ್ಲಿ ಹುಲ್ಲುಹಾಸು ಅಭಿವೃದ್ಧಿಪಡಿಸಲಾಗಿದೆ. ಈ ಆವರಣದಲ್ಲಿ ಒಟ್ಟು 4,087 ಮರಗಳು ಇವೆ. ಸುತ್ತಲಿನ ತೋಟಗಳಲ್ಲಿ ಗಿಡಗಳು ಮತ್ತು ಹುಲ್ಲನ್ನು ಬೆಳಸಲಾಗಿದೆ. ಹೊಸದಿಲ್ಲಿಯ ವಿಜಯ್‌ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗಿನ ನವೀಕರಿಸಲಾದ ಮಾರ್ಗದಲ್ಲಿ ಪಥಿಕರಿಗೆ ಅನುಕೂಲವಾಗುವಂತೆ ನಾಲ್ಕು ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ಕಾಲುವೆಗಳಿಗೆ ಅಡ್ಡಲಾಗಿ 16 ಶಾಶ್ವತ ಸೇತುವೆಗಳನ್ನು ನಿರ್ಮಿಸಲಾಗಿದೆ.

300 ಸಿಸಿ ಟಿವಿಗಳ ಅಳವಡಿಕೆ
ಇಡೀ ಆವರಣದಲ್ಲಿ 422 ಕೆಂಪು ಗ್ರಾನೈಟ್‌ನ ಆಸನಗಳನ್ನು ನಿರ್ಮಿ ಸಲಾಗಿದೆ. 300 ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. 1,117 ಕಾರುಗಳು ಮತ್ತು 35 ಬಸ್‌ಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾ ಗಿದೆ. 50 ಮಂದಿ ಭದ್ರತ ಸಿಬಂದಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿ ಸಲಿದ್ದಾರೆ. ಸುಮಾರು 1.1 ಲಕ್ಷ ಚದರ ಅಡಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಪಡಿಸಲಾದ ಮಾರ್ಗ ಹಾಗೂ ಸುತ್ತಮುತ್ತಲಿನ ಉದ್ಯಾನಗಳಲ್ಲಿ 422 ಕೆಂಪು ಗ್ರಾನೈಟ್‌ನ ಆಸನಗಳನ್ನು ನಿರ್ಮಿಸಲಾಗಿದೆ.

ನೇತಾಜಿ ಪ್ರತಿಮೆ ಅನಾವರಣ
ಸೆಂಟ್ರಲ್‌ ವಿಸ್ತಾ ಅವೆನ್ಯೂ ಉದ್ಘಾಟಿಸಲಿರುವ ಪ್ರಧಾನಿಯವರು ಅದರ ಭಾಗವಾಗಿ ಸುಭಾಷ್‌ ಚಂದ್ರ ಬೋಸ್‌ ಅವರ ಪ್ರತಿಮೆಯನ್ನೂ ಅನಾವರಣ ಗೊಳಿಸಲಿದ್ದಾರೆ. ವಿಶೇಷವೆಂದರೆ 28 ಅಡಿ ಉದ್ದದ ಈ ಪ್ರತಿಮೆಯನ್ನು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ಕೆತ್ತನೆ ಮಾಡಿದ್ದಾರೆ. ದೊಡ್ಡ ಕಪ್ಪು ಗ್ರಾನೈಟ್‌ ಒಂದರಲ್ಲಿ ಈ ಪ್ರತಿಮೆ ಕೆತ್ತನೆ ಮಾಡಲಾಗಿದೆ. ಕಳೆದ ಎರಡು ತಿಂಗಳುಗಳಿಂದ ದಿಲ್ಲಿಯಲ್ಲೇ ಇರುವ ಅರುಣ್‌ ಅವರು ನೇತಾಜಿ ಅವರ ಪ್ರತಿಮೆಗೆ ರೂಪ ಕೊಟ್ಟಿ ದ್ದಾರೆ. ಅರುಣ್‌ ಅವರು ಈ ಹಿಂದೆ ಕೇದಾರನಾಥದಲ್ಲಿ 12 ಅಡಿ ಉದ್ದದ ಶಂಕರಾಚಾರ್ಯ ಪ್ರತಿಮೆಯನ್ನೂ ನಿರ್ಮಿಸಿಕೊಟ್ಟು ಹೆಸರಾಗಿದ್ದರು.

ಎಲ್ಲಿಂದ ಎಲ್ಲಿಯವರೆಗೆ?
ವಿಜಯ್‌ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗೆ ಮಾರ್ಗ ನವೀಕರಣ

Advertisement

16.5 ಕಿ.ಮೀ. ನಡಿಗೆ ಪಥ ನಿರ್ಮಾಣ
ಕರ್ತವ್ಯ ಪಥ ಮತ್ತು ಸುತ್ತಲೂ ಕೆಂಪು ಬಣ್ಣದ ಗ್ರಾನೈಟ್‌ನಿಂದ 16.5 ಕಿ.ಮೀ. ನಡಿಗೆ ಪಥ ನಿರ್ಮಿಸಲಾಗಿದೆ. ಮಾರ್ಗದುದ್ದಕ್ಕೆ ಹಾಗೂ ಉದ್ಯಾನವನಗಳಲ್ಲಿ 900ಕ್ಕೂ ಹೆಚ್ಚು ಬೀದಿ ದೀಪಗಳನ್ನು ಅಳವಡಿಸಲಾಗಿದೆ. 650 ಆಧುನಿಕ ನಾಮಫ‌ಲಕಗಳನ್ನು ಅಳವಡಿಸಲಾಗಿದೆ. 150 ಕಸದಬುಟ್ಟಿಗಳನ್ನು ಅಳವಡಿಸಲಾಗಿದೆ.

74 ಐತಿಹಾಸಿಕ ಕಂಬಗಳು ಮೇಲ್ದರ್ಜೆಗೆ
ಕರ್ಜವ್ಯ ಪಥದ ಉದ್ದಕ್ಕೂ 74 ಐತಿಹಾಸಿಕ ಕಂಬಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಮಾರ್ಗದುದ್ದಕ್ಕೂ ಇದ್ದ 1 ಸಾವಿರಕ್ಕೂ ಹೆಚ್ಚು ಕಾಂಕ್ರೀಟ್‌ ಬೋಲಾರ್ಡ್‌ಗಳನ್ನು ಬಿಳಿ ಮರಳುಗಲ್ಲಿನ ಬೋಲಾರ್ಡ್‌ಗಳಾಗಿ ಬದಲಾಯಿಸಲಾಗಿದೆ. ಅಲ್ಲದೆ ಈ ಹಿಂದೆ ಅಳವಡಿಸಿದ್ದ ಸರಪಳಿಯನ್ನು ತೆಗೆದುಹಾಕಿ ನೂತನ ಸರಪಳಿ ಅಳವಡಿಸಲಾಗಿದೆ.

20 ತಿಂಗಳು ಬಂದ್‌
ಈ ಯೋಜನೆಗಾಗಿ ಸೆಂಟ್ರಲ್‌ ವಿಸ್ತಾ ಅವೆನ್ಯೂವನ್ನು 20 ತಿಂಗಳುಗಳ ಕಾಲ ಬಂದ್‌ ಮಾಡಲಾಗಿತ್ತು. ಈಗ ರೆಡ್‌ಗ್ರಾನೈಟ್‌ ಒಳಗೊಂಡ ನಡಿಗೆಪಥವನ್ನು ನಿರ್ಮಿಸಲಾಗಿದೆ. ಕಣ್ತುಂಬ ಹಸುರು, ಕಾರಂಜಿಗಳು ಈ ಪ್ರದೇಶದ ಅಂದವನ್ನು ಹೆಚ್ಚಿಸಿವೆ. ವಿಜಯಚೌಕದಿಂದ ಇಂಡಿಯಾ ಗೇಟ್‌ವರೆಗೆ ಸಂಪೂರ್ಣವಾಗಿ ಮರು ಅಭಿವೃದ್ಧಿಪಡಿಸಲಾಗಿದೆ.

ಎಲ್ಲ ರಾಜ್ಯಗಳ ಆಹಾರ ಮಳಿಗೆ
ಸೆಂಟ್ರಲ್‌ ವಿಸ್ತಾ ಅವೆನ್ಯೂವನ್ನು ಉದ್ಘಾಟಿಸಿದ ಮೇಲೆ ಇಲ್ಲಿ ಎಲ್ಲ ರಾಜ್ಯಗಳ ಒಂದೊಂದು ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ. ವೆಂಡಿಂಗ್‌ ಝೋನ್‌ ಅನ್ನು ಪ್ರತ್ಯೇಕವಾಗಿ ಗುರುತಿಸಲಾಗಿದೆ. ಆದರೆ ಇಲ್ಲಿ ಆಹಾರ ಖರೀದಿಸಿದವರು ಅಲ್ಲೇ ತಿನ್ನಬೇಕು. ಯಾವುದೇ ಕಾರಣಕ್ಕೂ ಹಸುರು ಹುಲ್ಲುಹಾಸಿನ ಮೇಲಕ್ಕೆ ತೆಗೆದುಕೊಂಡು ಹೋಗಬಾರದು. ಸೆ.9ರಿಂದಲೇ 40 ವೆಂಡರ್‌ಗಳು, ಐದು ವೆಂಡಿಂಗ್‌ ಝೋನ್‌ಗಳಲ್ಲೂ ಮಾರಾಟ ಆರಂಭಿಸಬಹುದು.

ನಿರ್ಬಂಧಗಳು ಇವೆ
ಈ ಮೊದಲು ಪ್ರವಾಸಿಗರು ಎಲ್ಲಿ ಬೇಕಾದರೂ ಎಗ್ಗಿಲ್ಲದೆ ಓಡಾಡಬಹುದಿತ್ತು. ಆದರೆ ಇನ್ನು ಮುಂದೆ ಸೆಂಟ್ರಲ್‌ ವಿಸ್ತಾ ಅವೆನ್ಯೂನಲ್ಲಿ ಓಡಾಡುವ ಮುನ್ನ ಎಚ್ಚರಿಕೆಯಿಂದ ಇರುವುದು ಒಳಿತು. ಯಾವುದೇ ಗಾರ್ಡನ್‌ ಏರಿಯಾಗಳಲ್ಲಿ ಓಡಾಡುವಂತಿಲ್ಲ. ಅಲ್ಲದೆ ಎರಡು ಕಾಲುವೆಗಳಲ್ಲಿ ಬೋಟಿಂಗ್‌ ವ್ಯವಸ್ಥೆ ಇದೆ- ಒಂದು ಕೃಷಿ ಭವನದ ಹಿಂಭಾಗ, ಮತ್ತೂಂದು ವಿಜ್ಞಾನ ಭವನದ ಬಳಿ.

Advertisement

Udayavani is now on Telegram. Click here to join our channel and stay updated with the latest news.

Next