Advertisement

UV Fusion: ಅಮ್ಮನ ಬೀಡಿಸೂಪಿನೆಡೆಯಿಂದ…

04:10 PM Oct 22, 2024 | Team Udayavani |

“ಅಮ್ಮಾ ಒಂದು ಹತ್ತು ರೂಪಾಯಿ ಇದ್ರೆ ಕೊಡಿ. ಕಾಲೇಜಿಗೆ ಲೇಟಾಯ್ತು, ಬಸ್‌ ಸ್ಟಾಂಡ್‌ ತನಕ ರಿಕ್ಷಾದಲ್ಲಿ ಹೋಗ್ತೀನೆ.’  ಸೋಮವಾರ ಬೆಳಗ್ಗೆ ಇಂತಹ ಕೋರಿಕೆಗಳು ಕೇಳಿ ಬಂದಾಗ  “ನಿಂಗೆ ರಾತ್ರಿ ಬೇಗ ಮಲಗ್ಲಿಕೆ ಸನ್ನಿ.. ಬೆಳಗ್ಗೆ ಲೇಟ್‌ ಏಳುದು, ಬೇಗ ಎಬ್ಬಿಸಿದ್ರೂ ನಿಮ್ಮ ಐದು ನಿಮಿಷ ಮುಗಿಲಿಕಿಲ್ಲ.. ಎಲ್ಲ ಆ ಹಾಳಾದ ಮೊಬೈಲಿಂದ! ನನ್ನಲ್ಲಿ ಹತ್ತು ರೂಪಾಯಿ ಅಲ್ಲ ಒಂದು ರೂಪಾಯಿನು ಇಲ್ಲ.’ ಮಣ ಮಣ ಬೈದುಕೊಳ್ಳುತ್ತಲೇ ಬೀಡಿ ಸೂಪಿನೆಡೆಯಿಂದ ಐವತ್ತರಧ್ದೋ ಇಲ್ಲ ನೂರರ ನೋಟೊ ಮೆಲ್ಲಗೆ ಹೊರಗಿಣುಕಿ ಬಂದು ನನ್ನ ಕೈಸೇರಿದರೆ, ನೋಟಿನ ಮೇಲಿದ್ದ ಹೊಗೆಸೊಪ್ಪನ್ನು ಕೊಡವಿ ಹಾಕಿದ್ದ ಬಟ್ಟೆಯಲ್ಲೇ ನೋಟನ್ನೊಮ್ಮೆ ವರೆಸಿ ಪರ್ಸಿನೊಳಗೆ ಇಟ್ಟು ಬಿಟ್ಟರೆ ಅದೆಂತದೋ ಒಂದು ಖುಷಿ.

Advertisement

ಇಂತಹ ಅದೆಷ್ಟೋ ಮುಂಜಾವುಗಳಿಗೆ, ಕಷ್ಟದ ಸಮಸ್ಯೆಗಳಿಗೆ ಹೆಗಲಾಗಿ ನಿಲ್ಲುವ ಬೀಡಿ ಸೂಪಿನೊಂದಿಗಿರುವ ನಂಟು ಅಂತಿತ್ತದ್ದಲ್ಲ. ಪರ ಪರನೇ ಎಲೆ ಕತ್ತರಿಸಿ, ಅದರ ಮೇಲೆಲ್ಲಾ ನೀರು ಚಿಮುಕಿಸಿ ಎಲೆ ಮೆದುವಾದ ಅನಂತರ  ಯಾವುದೋ ಒಂದು ಬಟ್ಟೆಯಲ್ಲಿ ಎಲೆಯನ್ನೆಲ್ಲ ಮುಂಡಾಸಿನಂತೆ ಕಟ್ಟಿ ಸೂಪಿನ ಒಂದು ಬದಿಗಿಟ್ಟು, ಸೂಪಿನ ಮಧ್ಯ ಭಾಗಕ್ಕೆ ಒಂದಿಷ್ಟು ಹೊಗೆಸೊಪ್ಪು ಹಾಕಿ, ಬದಿಯಲ್ಲಿ ಬಣ್ಣದ ನೂಲಿನ ರೀಲಿಟ್ಟರೆ ಅಮ್ಮನ ಕೈಗೆ ಬಿಡುವೇ ಇರುವುದಿಲ್ಲ. ಯಾವ ಮಷೀನಿಗೂ ಕಮ್ಮಿಯಿಲ್ಲ ಚಕಚಕನೇ ಬೀಡಿ ಕಟ್ಟುವ ಅಮ್ಮನ ಕೈ ಬೆರಳುಗಳು.

ಕತ್ತರಿಸಿದ ಎಲೆಯನ್ನು ಎಡಗೈಯಲ್ಲಿ ಅಡ್ಡಲಾಗಿ  ಹಿಡಿದುಕೊಂಡು, ಎಲೆಯ ನಡುವಿಗೆ ಹೊಗೆಸೊಪ್ಪು ಹಾಕಿ ತೋಳ್ಬೆರಳಿನಿಂದ ಉದ್ದಕ್ಕೆ ಒಮ್ಮೆ ಅಗತ್ಯಕ್ಕಿಂತ ಹೆಚ್ಚಿದ್ದ ಹೊಗೆಸೊಪ್ಪನ್ನು ಹೊರಕ್ಕೆ ಹಾಕಿ ಎಲೆಯನ್ನು ಅಂಗೈಯ ನಡುವೆ ತಂದು ಸುರುಳಿ ಸುತ್ತಿ, ಅದರ ತಲೆ, ಬಾಲ ಮಡಚಿ  ಬೀಡಿಯ ಸೊಂಟವನ್ನು ಬಣ್ಣದ ನೂಲಿನಿಂದ ಬಿಗಿದರೆ ಒಂದು ಬೀಡಿ ತಯಾರು. ಹಾಗೆಯೇ ಕಟ್ಟುತ್ತಾಳೆ ಅಮ್ಮ ಬೀಡಿ.. ಬೀಡಿಯ ರಾಶಿ ಶಿಖರಕ್ಕೇರುತ್ತದೆ.

“ಅಮ್ಮಾ.. ಬೀಡಿ ಲೆಕ್ಕ ಮಾಡಿ ಕೊಡ್ಲಾ?’ ಎಂದಾಗ ಆಕೆಗೂ ಒಂದು ಕೆಲಸ ಕಮ್ಮಿ. ಖುಷಿಯಲ್ಲೇ ಹೂಗುಟ್ಟುತ್ತಾಳೆ. “ಒಂದು ಕಟ್ಟಾಯ್ತು.. ನಾಳೆಗೆ ನಲ್ವತ್ತು ಕಟ್ಟು ಬೀಡಿ ಕಟ್ಟಿ ಆಗ್ಬೇಕು!’ ಚಿಂತೆಯಲ್ಲಿ ಹೇಳುತ್ತಾ, ಬೀಡಿ ಕಟ್ಟುವುದು.. ಟಿವಿಯಲ್ಲಿ ಜಾಹೀರಾತು ಮುಗಿದ ಕೂಡಲೇ ಬರುವ ಸೀರಿಯಲ್ಲಿಗೆ ಬಾಯಿಯನ್ನು ಆ ಮಾಡಿಕೊಂಡು ಟಿವಿ ನೋಡುವುದು.. ಪುನಃ ಅದೇ ಬೀಡಿ ಕಟ್ಟುವಿಕೆ. ನಿಯಾನ್‌ ಬಲ್ಬಿನ ಕೆಳಗೆ ಕಣ್ಣೆಳೆಯುತ್ತಿದ್ದರು ನಿದ್ದೆಯನ್ನೆಲ್ಲಾ ನುಂಗಿಕೊಂಡು ಬೀಡಿ ಕಟ್ಟುವುದು, ಸುಮ್ಮನೆ ಕೂತರೆ ಸಂಘದ ಸಾಲಕ್ಕೆ ಮಂಜುನಾಥನೆ ಗತಿ!

ಅದೆಷ್ಟೋ ನೋವು ನಲಿವಿನ ನೆನಪುಗಳಿವೆ ಬೀಡಿ ಸೂಪಿನೆಡೆಯಲ್ಲಿ. ಅಮ್ಮನ ಮನಸಲ್ಲೇ ಬಂಧಿಯಾಗಿರುವ ಸಮಸ್ಯೆಗಳ ಲಿಸ್ಟುಗಳು, ಅದೆಷ್ಟೋ ಬೇಸರದ ಸಂಗತಿಗಳು, ಹೊಸ ಸೀರೆ ತಗೋಬೇಕು ಅನ್ನೋ ಆಸೆಗಳು ಎಲ್ಲವೂ ಬೀಡಿ ಸೂಪಿಗೆ ತೀರಾ ಪರಿಚಿತ ವಿಷಯಗಳು.

Advertisement

ಶನಿವಾರದ ದಿನ ಮಜೂರಿ ಕೈಗೆ ಸಿಕ್ಕಾಗ ನೀರು ಕುಡಿದಷ್ಟು ಖುಷಿ. ಬೀಡಿಯ ತೊಟ್ಟೆ(ಪ್ಲಾಸ್ಟಿಕ್‌) ಯಡಿಯಲ್ಲಿರುವ ಚಿಲ್ಲರೆ ಕೈಗೆ ಸಿಕ್ಕಾಗ ಶುಂಠಿ ಮಿಠಾಯಿ ಖರೀದಿಸಿ ತಿಂದು ತೇಗುವ ಮಜವಿದೆಯಲ್ಲ ಅದಕ್ಕೆ ಸಾಟಿ ಯಾವುದಿದೆ?

” ಇಷ್ಟೇ ಇಷ್ಟು ಪುಗೆರೆ(ಹೊಗೆಸೊಪ್ಪು) ಕೊಟ್ಟಿದ್ದಾರೆ! ಅದೆಲ್ಲಿಗೆ ಸಾಕು? ಎಲೆ ಎಂತದು ಒಳ್ಳೆದಿಲ್ಲ! ನೂಲು ಕುಂಬು! ಹೇಗೆ ಬೀಡಿ ಕಟ್ಟುದು ಅದ್ರಲ್ಲಿ?’ ಪಕ್ಕದ ಮನೆಯವರೊಡನೆ ಬೀಡಿ ಬ್ರೆಂಚಿನ ಧಣಿಗಳಿಗೆ  ಬೈಯದಿದ್ದರೆ ಬೀಡಿ ಕಟ್ಟುವ ಕೈಗಳಿಗೆ ಚೈತನ್ಯವಾದರೂ ಎಲ್ಲಿಂದ ಬರಬೇಕು?

ಬಹುತೇಕ ಕರಾವಳಿಗರಿಗೆ ಬೀಡಿ ಸೂಪಿನ ಮೇಲೊಂದು ಅರಿಯದ ಬಂಧವಿದೆ. ಹೊಟ್ಟೆಗೆ, ಬಟ್ಟೆಗೆ, ವಿದ್ಯೆಗೆ ಎಲ್ಲಕ್ಕೂ ಬೀಡಿ ಸೂಪಿನ ಕೊಡುಗೆ ಅಪಾರ. ನನ್ನದೂ ಬೀಡಿ ಸೂಪಿನ ಕತೆ ಹೇಳುತ್ತಾ ಹೋದರೆ  ಅದಿವತ್ತಿಗೆ ಮುಗಿಯೋದೇ ಇಲ್ಲವೇನೋ!

-ಚೈತ್ರ

ವಿವೇಕಾನಂದ ಕಾಲೇಜು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next