Advertisement

1720 To 2020! ಪ್ರತಿ 100 ವರ್ಷಕ್ಕೊಮ್ಮೆ ಮನುಷ್ಯ ಜನಾಂಗಕ್ಕೆ ಭೀತಿ ಹುಟ್ಟಿಸೋ ಮಹಾಮಾರಿ

05:50 PM Apr 05, 2020 | Nagendra Trasi |

ವಾಷಿಂಗ್ಟನ್:ಕೋವಿಡ್ ಎಂಬ ಮಾರಕ ವೈರಸ್ ಇದೀಗ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಆದರೆ ಪ್ರತಿ ನೂರು ವರ್ಷಗಳಿಗೊಮ್ಮೆ
ಮನುಷ್ಯನ ಮೇಲೆ ಲಗ್ಗೆ ಇಡುತ್ತಾ ಬಂದಿರುವ ವಿವಿಧ ರೀತಿಯ ಮಾರಣಾಂತಿಕ ಸೋಂಕುಗಳಿಗೆ ಲಕ್ಷಾಂತರ ಜನರು ಬಲಿಯಾಗಿದ್ದಾರೆ.
ಹೀಗೆ 1720ರಿಂದ 2020ರವರೆಗೆ ಭಯಭೀತಿ ಹುಟ್ಟಿಸಿರುವ ಸೋಂಕು ಹಾಗೂ ಅದರ ಭೀಕರತೆಯ ಕುರಿತ ಸಂಕ್ತಿಪ್ತ ವಿವರ ಇಲ್ಲಿದೆ..

Advertisement

ಮಾರ್ಸೆಲ್ಲೆ ಫ್ರಾನ್ಸ್ ನಲ್ಲಿರುವ ಎರಡನೇ ಅತೀ ದೊಡ್ಡ ಮೆಟ್ರೋಪಾಲಿಟಿನ್ ನಗರವಾಗಿದೆ. 1720ರಲ್ಲಿ ಮಹಾಮಾರಿ ಪ್ಲೇಗ್ ಸೋಂಕು
ಮಾರಿ ಹರಡಿದ ಪರಿಣಾಮ ಒಟ್ಟು ಒಂದು ಲಕ್ಷಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದರು. ಈ ಸೋಂಕು ಹರಡಲು ಆರಂಭವಾದ
ಮೊದಲ ಎರಡು ವರ್ಷಗಳಲ್ಲಿ ಮಾರ್ಸೆಲ್ಲೆ ನಗರದಲ್ಲಿ 50 ಸಾವಿರ ಹಾಗೂ ಉಳಿದ 50 ಸಾವಿರ ಮಂದಿ ಉತ್ತರ ಭಾಗದ ಸುತ್ತಮುತ್ತಲಿನ
ಪ್ರದೇಶದಲ್ಲಿ ಸಾವನ್ನಪ್ಪಿದ್ದರು. ಇದರಿಂದಾಗಿಯೇ ಗ್ರೇಟ್ ಪ್ಲೇಗ್ ಆಫ್ ಮಾರ್ಸೆಲ್ಲೆ ಎಂಬ ಹೆಸರಿನಿಂದಲೇ ಈ ಸಾಂಕ್ರಾಮಿಕ ರೋಗ
ಖ್ಯಾತಿ ಪಡೆದಿತ್ತು!

ಈ ಸೋಂಕು ದೊಡ್ಡವರು, ಚಿಕ್ಕವರು ಎಂಬ ಭೇದಭಾವ ಇಲ್ಲದೇ ಎಲ್ಲೆಡೆ ಮರಣ ಮೃದಂಗ ಬಾರಿಸಿತ್ತು. ಇದರ ತೀವ್ರತೆ ಹಾಗೂ ಎಷ್ಟು
ಭಯ ಹುಟ್ಟಿಸಿತ್ತು ಎಂದರೆ ಒಂದು ವೇಳೆ ಮಾರ್ಸೆಲ್ಲೆ ಹಾಗೂ ಇತರ ಪ್ರದೇಶದ ಜನರು ಮುಖಾಮುಖಿ ಸಂಭಾಷಣೆ ನಡೆಸಿದರೆ
ಮರಣದಂಡನೆ ಶಿಕ್ಷೆ ವಿಧಿಸುವ ಬಗ್ಗೆ ಸಂಸತ್ ನಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತಂತೆ!

ಯಾಕೆಂದರೆ ಪ್ಲೇಗ್ ರೋಗಿಯ ದೇಹದಿಂದ ಹೊರಬರುವ ದ್ರವ್ಯಗಳಾದ ರಕ್ತ, ಗೋಣೆ ಮತ್ತು ಎಂಜಲು ಆರೋಗ್ಯವಂತ ವ್ಯಕ್ತಿಯ
ಚರ್ಮವನ್ನು ಸಂಪರ್ಕಿಸಿದಾಗ ರೋಗ ಹರಡುವ ಸಾಧ್ಯತೆ ಇತ್ತು. ನೇರ ಶಾರೀರಕ ಸಂಬಂಧದಿಂದ ಸೋಂಕಿತ ವ್ಯಕ್ತಿಯು
ಸ್ಪರ್ಶಿಸುವುದರಿಂದ ಮತ್ತು ಲೈಂಗಿಕ ಸಂಪರ್ಕದಿಂದ ರೋಗ ಹರಡುತ್ತಿತ್ತು. ರೋಗ ಉಂಟು ಮಾಡುವ ಸೂಕ್ಷ್ಮ ಜೀವಿಗಳು ರೋಗಿಯ
ದೇಹದಿಂದ ಹೊರಬಂದು ಗಾಳಿಯಲ್ಲಿ ಸೇರಿಕೊಂಡು ಗಾಳಿಯನ್ನು ಕಲುಷಿತಗೊಳಿಸಿ ಆನಂತರ ಅವು ಉಸಿರಾಟದ ಮೂಲಕ ಆರೋಗ್ಯ
ವ್ಯಕ್ತಿಯ ದೇಹವನ್ನು ಪ್ರವೇಶಿಸಿ ರೋಗ ಉಂಟು ಮಾಡುತ್ತಿತ್ತು. ಈ ಕಾರಣಕ್ಕಾಗಿ ಅಂದು ರೋಗ ತಡೆಯಲು ಕಠಿಣ ನಿರ್ಧಾರ
ತೆಗೆದುಕೊಳ್ಳಲಾಗಿತ್ತು ಎಂದು ವರದಿ ವಿವರಿಸಿದೆ.

1817ರಲ್ಲಿ ಏಷ್ಯಾವನ್ನು ಬೆಚ್ಚಿಬೀಳಿಸಿದ್ದು ಕಾಲರಾ!
ಪ್ಲೇಗ್ ಮಹಾಮಾರಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗಿತ್ತು. ಆ ಘಟನೆ ನಡೆದು ನೂರು ವರ್ಷಗಳ
ಬಳಿಕ 1817ರಲ್ಲಿ ಕಾಲರಾ ಸೋಂಕು ಪತ್ತೆಯಾಗಿತ್ತು..ಇದು ಏಷ್ಯಾದಲ್ಲಿ ಕಾಣಿಸಿಕೊಂಡ ಮೊದಲ ಸೋಂಕು ರೋಗವಾಗಿತ್ತು. ಇದು
ಕೋಲ್ಕತಾ ಸಮೀಪದ ನಗರವೊಂದರಲ್ಲಿ ಕಾಲರಾ ಮೊದಲು ಪತ್ತೆಯಾಗಿತ್ತು. ನಂತರ ಇಡೀ ಏಷ್ಯಾಖಂಡಕ್ಕೆ ಹಬ್ಬಿತ್ತು. ನಿಧಾನಕ್ಕೆ
ಮಧ್ಯಏಷ್ಯಾ, ಆಫ್ರಿಕಾ ಹಾಗೂ ಮೆಡಿಟೇರಿಯನ್ ಕರಾವಳಿ ಪ್ರದೇಶಕ್ಕೂ ಕಾಲರಾ ಸೋಂಕು ಹರಡಿತ್ತು. ಇದು ಏಷ್ಯಾದ ಬಹುತೇಕ
ಎಲ್ಲಾ ದೇಶಗಳಲ್ಲಿ ಹರಡುವ ಮೂಲಕ ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡಿತ್ತು.

Advertisement

1918ರಲ್ಲಿ ಸ್ಪ್ಯಾನಿಷ್ ಫ್ಲೂ!
ಪ್ಲೇಗ್, ಕಾಲರಾ ನಂತರ ಬೆಚ್ಚಿಬೀಳಿಸಿದ್ದು ಸ್ಪ್ಯಾನಿಶ್ ಫ್ಲೂ! 1918ರಲ್ಲಿ ಸಾಮಾನ್ಯ ಜ್ವರ ರೀತಿ ಕಾಣಿಸಿಕೊಂಡ ಈ ಸೋಂಕು ಅಮೆರಿಕದ
ಜನರನ್ನು ಬೆಚ್ಚಿಬೀಳಿಸಿತ್ತು. 1918ರ ಜನವರಿಯಲ್ಲಿ ಆರಂಭವಾದ ಈ ಸೋಂಕು 1920ರ ಡಿಸೆಂಬರ್ ವರೆಗೆ 500 ಮಿಲಿಯನ್ ಜನರು
ಸೋಂಕಿಗೆ ಒಳಗಾಗಿದ್ದರು. ಆ ಕಾಲದಲ್ಲಿ ಇದು ಇಡೀ ಜಗತ್ತಿನ ಕಾಲುಭಾಗದಷ್ಟು ಜನಸಂಖ್ಯೆಗೆ ಹರಡಿತ್ತು! ಅಂದಾಜು 17 ಮಿಲಿಯನ್
ನಿಂದ 100 ಮಿಲಿಯನ್ ನಷ್ಟು ಜನರು ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ. ಇದು ಇಡೀ ಮಾನವ ಜನಾಂಗದ
ಇತಿಹಾಸದಲ್ಲಿಯೇ ಅತ್ಯಂತ ಮಾರಣಾಂತಿಕ ಸೋಂಕು ಎಂದೇ ದಾಖಲಾಗಿದೆ. ಅಮೆರಿಕದ ಮಿಲಿಟರಿ ಕ್ಯಾಂಪ್ ನಲ್ಲಿ ಈ ಸೋಂಕು
ಮೊದಲು ಕಾಣಿಸಿಕೊಂಡಿದ್ದು, ನಂತರ ಮನುಷ್ಯನಿಂದ ಮನುಷ್ಯನಿಗೆ ಹರಡಲು ಆರಂಭವಾಯ್ತು ಎಂದು ವರದಿ ತಿಳಿಸಿದೆ.

2020ರಲ್ಲಿ ಕೋವಿಡ್ ವೈರಸ್!
ಚೀನಾದ ವುಹಾನ್ ಮತ್ತು ಹುಬೈ ಪ್ರಾಂತ್ಯದಲ್ಲಿ ಮೊತ್ತ ಮೊದಲು ಕಾಣಿಸಿಕೊಂಡ ಈ ಮಾರಣಾಂತಿಕ ಕೋವಿಡ್ 19 ವೈರಸ್ ಮಾರ್ಚ್
24ರ ನಂತರ ಸುಮಾರು ಜಗತ್ತಿನ 190 ದೇಶಗಳಿಗೂ ಹರಡಿತ್ತು. ಜಾಗತಿಕವಾಗಿ 11,97,405 ಮಂದಿಗೆ ಸೋಂಕು ತಗುಲಿದೆ, 67
ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಕೋವಿಡ್ 19 ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
2019-20ರಲ್ಲಿ ಆರಂಭವಾದ ಈ ಸೋಂಕು ಇನ್ನೂ ಜನರಲ್ಲಿ ಭೀತಿಯನ್ನು ಮುಂದುವರಿಸಿದೆ. ತೀವ್ರ ಉಸಿರಾಟದ ತೊಂದರೆ, ಜ್ವರ,
ಕೆಮ್ಮ ರೋಗದ ಪ್ರಾಥಮಿಕ ಲಕ್ಷಣವಾಗಿದೆ. ಇದಕ್ಕಾಗಿ ಲಸಿಕೆಯನ್ನು ಕಂಡುಹಿಡಿಯುವ ಪ್ರಯತ್ನ ಮುಂದುವರಿದಿದೆ. ಏತನ್ಮಧ್ಯೆ
ಶತಮಾನಗಳಿಗೊಮ್ಮೆ ಕಾಣಿಸಿಕೊಳ್ಳುವ ಈ ಮಹಾಮಾರಿ ಸೋಂಕು ಮುಂದಿನ ಶತಮಾನದಲ್ಲಿ ಅದ್ಯಾವ ಸೋಂಕು ಕಾಣಿಸಿಕೊಳ್ಳಲಿದೆ
ಎಂಬುದು ನಿಗೂಢವಾಗಿದೆ!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next