ದಾವಣಗೆರೆ: ಸಮೀಪದ ಪೊಲೀಸ್ ಠಾಣೆ, ದೂರವಾಣಿ, ಇ-ಮೇಲ್ ಮಾಹಿತಿ, ಸಲ್ಲಿಸಿರುವ ದೂರಿನ ಸ್ಥಿತಿಗತಿ…, ಕಾಣೆಯಾದವರ ಮಾಹಿತಿ…, ಹಳೆಯ ವಾಹನ ಖರೀದಿಸುವಾಗ ವಾಹನಗಳ ಮೂಲ ಮಾಲೀಕರ ವಿವರ… ಮುಂತಾದ ಸಮಗ್ರ ಮಾಹಿತಿ ನೀಡುವ ಜನಸ್ನೇಹಿ ಕರ್ನಾಟಕ ಪೊಲೀಸ್ ಮೊಬೈಲ್ ಆ್ಯಪ್ ಸೇವೆ ಈಗ ದಾವಣಗೆರೆ ಜಿಲ್ಲೆಯಲ್ಲಿ ಲಭ್ಯ. ಈ ಹಿಂದೆ ಆಯಾಯ ಜಿಲ್ಲೆಗೆ
ಸಂಬಂಧಿಸಿದಂತೆ ಮಾತ್ರ ಆ್ಯಪ್ ಇತ್ತು. ಅದರಿಂದ ಆಯಾಯ ಜಿಲ್ಲೆಯ ಮಾಹಿತಿ ಮಾತ್ರವೇ ದೊರೆಯುತ್ತಿತ್ತು.
ಈಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಪೊಲೀಸ್ ಠಾಣೆ, ಅಧಿಕಾರಿಗಳ ದೂರವಾಣಿ, ಇ-ಮೇಲ್ ವಿಳಾಸ, ಆಕಸ್ಮಿಕವಾಗಿ ತೊಂದರೆಯಲ್ಲಿ ಸಿಕ್ಕಿಕೊಂಡಾಗ ಐವರು ಆಪ್ತರಿಗೆ ಕ್ಷಣಾರ್ಧದಲ್ಲಿ ಸಂದೇಶ ಕಳುಹಿಸುವ ವ್ಯವಸ್ಥೆಯ ಜನಸ್ನೇಹಿ ಕರ್ನಾಟಕ ಪೊಲೀಸ್ ಮೊಬೈಲ್ ಆ್ಯಪ್ ಸೇವೆ ದಾವಣಗೆರೆ ಜಿಲ್ಲೆಯಲ್ಲಿ ದೊರೆಯಲಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಆರ್.ಚೇತನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜನಸ್ನೇಹಿ ಕರ್ನಾಟಕ ಪೊಲೀಸ್ ಮೊಬೈಲ್ ಆ್ಯಪ್ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಲಭ್ಯ ಇದೆ. ಸಾರ್ವಜನಿಕರು ತಮ್ಮ ಆ್ಯಂಡ್ರಾಯ್ಡ ಅಥವಾ ಐ-ಫೋನ್‌ನಿಂದ ಆ್ಯಪ್ ಡೌನಲೋಡ್ ಮಾಡಿಕೊಳ್ಳಬೇಕು. ಆ್ಯಪ್‌ನಲ್ಲಿ 8 ರೀತಿಯ ವಿವಿಧ ಸೇವೆ ದೊರೆಯಲಿದೆ. ಸಮೀಪದ ಪೊಲೀಸ್ ಠಾಣೆ, ವ್ಯಾಪ್ತಿ, ದೂರಿನ ಸ್ಥಿತಿಗತಿ, ತುರ್ತಾಗಿ ಸಂಪರ್ಕಿಸಬೇಕಾದವರ ಮಾಹಿತಿ, ಕಾಣೆಯಾದವರ ಬಗ್ಗೆ ಮಾಹಿತಿ ಅಥವಾ ಯಾವುದಾದರೂ ವಾಹನ ಖರೀದಿಸುವ ಮುನ್ನ ಆವಾಹನದ ಮೂಲ ಮಾಲೀಕರ ತಿಳಿದುಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಇಲಾಖೆ ಸಾರ್ವಜನಿಕರಿಗೆ ಹತ್ತಿರವಾಗಬೇಕು. ಅಗತ್ಯ ಮಾಹಿತಿ ಹಾಗೂ ತಕ್ಷಣದಲ್ಲಿ ತುರ್ತು ಸೇವೆ ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ನಡುವೆ ಜನಸ್ನೇಹಿಯಾಗಿ ಸಂಪರ್ಕ ಕಲ್ಪಿಸಲು ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗಿದೆ. ರಾಜ್ಯಾದ್ಯಂತ 1 ಲಕ್ಷಕ್ಕೂ ಹೆಚ್ಚು ಜನರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಯಾವುದೇ ತೊಂದರೆಯಾದಲ್ಲಿ ಯಾವ ಪೊಲೀಸ್ ಠಾಣೆಗೆ ದೂರು ನೀಡಬೇಕು ಅಥವಾ ತಕ್ಷಣದ ಅವಶ್ಯಕತೆಗೆ ಹತ್ತಿರ ಯಾವ ಪೊಲೀಸ್ ಠಾಣೆ ಇದೆ ಎಂಬ ಮಾಹಿತಿ ದೊರೆಯುತ್ತದೆ. ರಾಜ್ಯದ ಎಲ್ಲಾ ಸ್ಟೇಷನ್‌ಗಳ ಫೋನ್ ನಂಬರ್, ಇ-ಮೇಲ್ ವಿಳಾಸ ಲಭ್ಯವಾಗಲಿದೆ. ಎಸ್.ಒ.ಎಸ್ ಮೂಲಕ ತಕ್ಷಣ ಕಂಟ್ರೋಲ್ ರೂಂ ಸಂಪರ್ಕಿಸಬಹುದು. ಇಲಾಖೆಗೆ ಯಾವ ಮಾಹಿತಿ ನೀಡಬೇಕು. ಅಲ್ಲದೆ ಪ್ರತಿಯೊಬ್ಬರ ಆಪ್ತರ 5 ಸಂಖ್ಯೆಗಳಿಗೆ ತಕ್ಷಣ ಕರೆ ಅಥವಾ ಸಂದೇಶ ಹೋಗುವುದರಿಂದ ಅವರು ತೊಂದರೆಯಲ್ಲಿದ್ದವರನ್ನು ಸಂಪರ್ಕಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಯಾವುದಾದರೂ ಅಪಘಾತ ವಾಗಿದ್ದರೆ ಪೋಟೋ ತೆಗೆದು ಈ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದಲ್ಲಿ ಪೊಲೀಸ್ ಸಿಬ್ಬಂದಿ ನೆರವಿಗೆ ಬರಲು ಅನುಕೂಲ ಆಗಲಿದೆ. ಅಪಘಾತದ ಬಗ್ಗೆ ಮಾಹಿತಿ ಬರೆಯಬಹುದು. ಯಾವುದಾದರೂ ಮನೆಯಲ್ಲಿ ಕಳ್ಳತನವಾಗಿದ್ದರೆ ಆ ಮನೆಯ ಪೋಟೋ ಹಾಕಿದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ನೆರವಾಗುತ್ತದೆ ಎಂದು ತಿಳಿಸಿದರು.
ಸರಗಳ್ಳರು ಮುಂತಾದವರ ಬಗ್ಗೆ ಮಾಹಿತಿ ನೀಡಬಹುದು. ಯಾರಾದರೂ ಮಹಿಳೆಯನ್ನು ಹಿಂಬಾಲಿಸುತ್ತಿದ್ದರೆ ಅಥವಾ ಮಾನವ ಕಳ್ಳಸಾಗಣೆ, ಬೆಂಕಿ ಅವಘಡ, ರ್ಯಾಗಿಂಗ್, ಟ್ರಾಫಿಕ್ ಜಾಮ್ ಮುಂತಾದ ಮಾಹಿತಿ ಸಹ ಕಳುಹಿಸಬಹುದು. ಆ ಮಾಹಿತಿ ತಕ್ಷಣ ಕಂಟ್ರೋಲ್ ರೂಂಗೆ ಬರುತ್ತದೆ. ಜಿ.ಪಿ.ಎಸ್ ಮುಖಾಂತರ ಸ್ಥಳ ತಿಳಿದುಕೊಂಡು ಹೋಗಲು ಅನುಕೂಲವಾಗುತ್ತದೆ. ಗಣ್ಯರು ಆಗಮಿಸಿದಾಗ, ಯಾವುದಾದರೂ ರಸ್ತೆ ಬಂದ್ ಆಗಿದ್ದರೆ, ಬೇರೆ ಯಾವ ದಾರಿ ಉಪಯೋಗಿಸಬೇಕು ಎಂಬ ಮಾಹಿತಿಯೂ ಲಭ್ಯವಾಗಲಿದೆ. ಶಾಲಾ ಕಾಲೇಜುಗಳಲ್ಲಿ ಆ್ಯಪ್ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜೆ. ಉದೇಶ್ ಸುದ್ದಿಗೋಷ್ಠಿಯಲ್ಲಿದ್ದರು.