Advertisement
ಕೆಲವು ಚಿತ್ರಗಳು ಇಷ್ಟವಾಗಲು ಯಾವುದೋ ಒಂದು ಅಂಶ ಕಾರಣವಾಗಿರುತ್ತವೆ. ಆದರೆ, “ಒಂದಲ್ಲಾ ಎರಡಲ್ಲಾ’ ಚಿತ್ರ ಇಷ್ಟವಾಗಲು ಹಲವು ಕಾರಣಗಳು ಚಿತ್ರದಲ್ಲಿ ಸಿಗುತ್ತವೆ. ಸಿನಿಮಾದುದ್ದಕ್ಕೂ ಸಿಗುವ ಹಲವು ಸನ್ನಿವೇಶ-ಸಂದರ್ಭಗಳು, ಸಾಗುವ ರೀತಿ ಎಲ್ಲವೂ ಪ್ರೇಕ್ಷಕ ಮತ್ತು ಕಥೆಯ ನಡುವಿನ ಬಾಂಧವ್ಯವನ್ನು ಬೆಸೆಯುತ್ತಾ ಹೋಗುತ್ತವೆ. ಆ ಮಟ್ಟಿಗೆ “ರಾಮಾ ರಾಮಾರೇ’ ನಂತರ ನಿರ್ದೇಶಕ ಸತ್ಯಪ್ರಕಾಶ್ ಮತ್ತೂಂದು ವಿಭಿನ್ನ ಕಥೆಯನ್ನು ಆಯ್ಕೆ ಮಾಡಿದ್ದಾರೆ ಮತ್ತು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.
Related Articles
Advertisement
ಇಡೀ ಸಿನಿಮಾದ ಹೈಲೈಟ್ ಸಮೀರ ಹಾಗೂ ಭಾನು. ಸಮೀರ ತಾನು ತುಂಬಾನೇ ಪ್ರೀತಿಸುವ ಭಾನು ಎಂಬ ಹಸುವನ್ನು ಯಾವ ರೀತಿ ಹುಡುಕುತ್ತಾನೆ, ಅದಕ್ಕಾಗಿ ಆತ ಎಲ್ಲೆಲ್ಲಾ ಓಡಾಡುತ್ತಾನೆಂಬ ಅಂಶದ ಮೂಲಕ ಚಿತ್ರ ಸಾಗುತ್ತದೆ. ಇಲ್ಲಿ ನಿರ್ದೇಶಕರು ಪುಣ್ಯಕೋಟಿಯ ಕಥೆಯನ್ನು ಇವತ್ತಿನ ಕಾಲಕ್ಕೆ ಅನ್ವಯವಾಗುವಂತೆ ಹೇಳಿದ್ದಾರೆ. ಅಲ್ಲಿ ಸತ್ಯ ಗೆದ್ದರೆ, ಇಲ್ಲಿ ಮುಗ್ಧತೆ ಗೆಲ್ಲುತ್ತದೆ. ಇಲ್ಲೂ ನಿರ್ದೇಶಕರು ಹುಲಿ ಮತ್ತು ಹಸುವನ್ನು ಸಾಂಕೇತಿಕವಾಗಿ ಬಳಸಿಕೊಂಡಿದ್ದಾರೆ.
ಜೊತೆಗೆ ಒಬ್ಬ ಮುಗ್ಧ ಹುಡುಗ ಹೇಗೆ ಎಲ್ಲರ ಮನಗೆಲ್ಲುತ್ತಾ, ಪ್ರತಿಯೊಬ್ಬರ ಅಂತಃಕರಣವನ್ನು ಕಲುಕುತ್ತಾನೆ ಎಂಬುದನ್ನು ಅರ್ಥಪೂರ್ಣವಾಗಿ ನಿರೂಪಿಸಲಾಗಿದೆ. ಇವತ್ತಿನ ಕಾಲಘಟ್ಟಕ್ಕೆ ಈ ಚಿತ್ರ ಹೆಚ್ಚು ಸೂಕ್ತವಾಗಿದೆ. ಮನುಷ್ಯರ ನಡುವಿನ ವಿಶ್ವಾಸ, ನಂಬಿಕೆ ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲಿ ಸತ್ಯಪ್ರಕಾಶ್ ತಮ್ಮ ಸಿನಿಮಾ ಮೂಲಕ ಭರವಸೆಯ ಬೆಳಕು ಮೂಡಿಸಿದ್ದಾರೆ. “ಒಂದಲ್ಲಾ ಎರಡಲ್ಲಾ’ ಚಿತ್ರವನ್ನು ಮಕ್ಕಳ ಸಿನಿಮಾವೆಂದು ಒಂದೇ ಮಾತಿಗೆ ಹೇಳಿಬಿಡೋದು ಕಷ್ಟ.
ಪುಟ್ಟ ಬಾಲಕನೊಬ್ಬನ ಸುತ್ತ ಸುತ್ತುವ ಸಿನಿಮಾವಾದರೂ ಉಳಿದಂತೆ ದೊಡ್ಡವರಿಗೆ ಸೂಕ್ಷ್ಮಸಂದೇಶವಿರುವ ಸಿನಿಮಾವಿದು. ಹಾಗಂತ ಮಕ್ಕಳಿಗೆ ಈ ಚಿತ್ರ ಇಷ್ಟವಾಗುವುದಿಲ್ಲ ಎಂದಲ್ಲ. ಚಿತ್ರದಲ್ಲಿ ಬರುವ ಸಾಕಷ್ಟು ಸನ್ನಿವೇಶಗಳು ಮಕ್ಕಳಿಗೆ ಖುಷಿ ನೀಡುತ್ತವೆ. ನಿರ್ದೇಶಕ ಸತ್ಯಪ್ರಕಾಶ್ ಸಿನಿಮಾವನ್ನು ಸರಳವಾಗಿ ನಿರೂಪಿಸಿದ್ದಾರೆ. ಕೆಲವು ಸನ್ನಿವೇಶಗಳಲ್ಲಿ ಕಾಮಿಡಿಯನ್ನು ಬೆರೆಸುತ್ತಾ, ಸಂದರ್ಭಕ್ಕೆ ತಕ್ಕಂತೆ ಹಾಡುಗಳನ್ನು ಬಳಸಿ ತುಂಬಾ ನೀಟಾಗಿ ಕಟ್ಟಿಕೊಟ್ಟಿದ್ದಾರೆ ಸತ್ಯಪ್ರಕಾಶ್. ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಮಾಸ್ಟರ್ ರೋಹಿತ್ ಆ ಪಾತ್ರವನ್ನು ಆವರಿಸಿಕೊಂಡಿದ್ದಾರೆ.
ಅವರ ಮುಗ್ಧತನ, ಅಲ್ಲಲ್ಲಿ ವ್ಯಕ್ತವಾಗುವ ತುಂಟತನ ಎಲ್ಲವೂ ಕಥೆಗೆ ಚೆನ್ನಾಗಿ ಹೊಂದಿಕೊಂಡಿದೆ. ಕಥೆಯನ್ನು ಮುಂದುವರೆಸುವಲ್ಲಿ ರೋಹಿತ್ ಪಾತ್ರ ಪ್ರಮುಖವಾಗಿದ್ದು, ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಉಳಿದಂತೆ ಸಾಯಿಕೃಷ್ಣ ಕುಡ್ಲ, ಎಂ.ಕೆ.ಮಠ, ನಾಗಭೂಷಣ್, ರಂಜಾನ್ ಸಾಬ್ ಉಳ್ಳಾಗಡ್ಡಿ, ಜಿ.ಎಸ್.ರಂಗನಾಥ್, ಯು.ವಿ.ನಂಜಪತಿಮ್ಮಪ್ಪ ಕುಲಾಲ್, ಸಂಧ್ಯಾ ಅರಕೆರೆ, ಉಷಾ ರವಿಶಂಕರ್, ತ್ರಿವೇಣಿ ಎಲ್ಲರೂ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ವಾಸುಕಿ ವೈಭವ್ ಅವರ ಸಂಗೀತ ಕಥೆಯ ಆಶಯಕ್ಕೆ ತಕ್ಕುದಾಗಿದೆ. ಲವಿತ್ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.
ಚಿತ್ರ: ಒಂದಲ್ಲಾ ಎರಡಲ್ಲಾನಿರ್ಮಾಣ: ಉಮಾಪತಿ
ನಿರ್ದೇಶನ: ಸತ್ಯಪ್ರಕಾಶ್
ತಾರಾಗಣ: ರೋಹಿತ್, ಸಾಯಿಕೃಷ್ಣ ಕುಡ್ಲ, ಎಂ.ಕೆ.ಮಠ, ನಾಗಭೂಷಣ್, ರಂಜಾನ್ ಸಾಬ್ ಉಳ್ಳಾಗಡ್ಡಿ, ಜಿ.ಎಸ್.ರಂಗನಾಥ್ ಮುಂತದವರು * ರವಿಪ್ರಕಾಶ್ ರೈ