ಇಂಫಾಲ್ : ಮಣಿಪುರದಲ್ಲಿ ಹಿಂಸಾಚಾರಗಳು ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ, ಶುಕ್ರವಾರ ಸಂಜೆ ಇಂಫಾಲ್‌ನಲ್ಲಿ ಮಣಿಪುರದ ಕ್ಷಿಪ್ರ ಕಾರ್ಯಾಚರಣೆ ಪಡೆಯೊಂದಿಗೆ ಉಗ್ರರ ಗುಂಪೊಂದು ಗೋದಾಮಿಗೆ ಬೆಂಕಿ ಹಚ್ಚಿದ ನಂತರ ಘರ್ಷಣೆ ನಡೆಸಿತು.
ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಬಳಸಿದರು, ಉಗ್ರರು ಇತರ ಆಸ್ತಿಗಳನ್ನು ಗುರಿಯಾಗಿಸುತ್ತಿದ್ದರು ಎಂದು ಹೇಳಲಾಗಿದೆ.
ಇಂಫಾಲ ಅರಮನೆ ಮೈದಾನದ ಬಳಿ ಗಲಭೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ಸಿಬಂದಿ ಮತ್ತು ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಗೋದಾಮಿನ ಬೆಂಕಿಯನ್ನು ಹತೋಟಿಗೆ ತಂದರು. ಅಕ್ಕಪಕ್ಕದ ಮನೆಗಳಿಗೆ ಹರಡುವುದನ್ನು ತಪ್ಪಿಸಿದರು. ಈ ಆಸ್ತಿ ಬುಡಕಟ್ಟು ಸಮುದಾಯದ ನಿವೃತ್ತ ಉನ್ನತ ಐಎಎಸ್ ಅಧಿಕಾರಿಗೆ ಸೇರಿತ್ತು ಎಂದು ತಿಳಿದು ಬಂದಿದೆ.
ನಿನ್ನೆ ರಾತ್ರಿ ಇಂಫಾಲ್ ಪಟ್ಟಣದಲ್ಲಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಆರ್.ಕೆ. ರಂಜನ್ ಸಿಂಗ್ ಅವರ ಮನೆಯನ್ನು ಗುಂಪು ಧ್ವಂಸಗೊಳಿಸಿದ್ದು, ಅದನ್ನು ಸುಡಲು ಪ್ರಯತ್ನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಮಧ್ಯಾಹ್ನ ಇಂಫಾಲ ಪಟ್ಟಣದ ಹೃದಯಭಾಗದಲ್ಲಿ ಮಣಿಪುರದ ರಾಪಿಡ್ ಆಕ್ಷನ್ ಫೋರ್ಸ್ ಮತ್ತು ಜನಸಮೂಹದ ನಡುವಿನ ಘರ್ಷಣೆ ಮತ್ತು ಎರಡು ಮನೆಗಳಿಗೆ ಬೆಂಕಿ ಹಚ್ಚಿದ ನಂತರ ಈ ಬೆಳವಣಿಗೆ ಸಂಭವಿಸಿದೆ.
ಗುರುವಾರ ತಡರಾತ್ರಿ ಪಟ್ಟಣದಲ್ಲಿ ಸಂಚರಿಸಿದ ಗುಂಪು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳವಣಿಗೆಗಳ ಬಗ್ಗೆ ಪಿಟಿಐಗೆ ಪ್ರತಿಕ್ರಿಯಿಸಿದ ಆರ್‌ಕೆ ರಂಜನ್ ಸಿಂಗ್ , “ಮೇ 3 ರಿಂದ ರಾಜ್ಯದಲ್ಲಿ ಜನಾಂಗೀಯ ಘರ್ಷಣೆಗಳು ಪ್ರಾರಂಭವಾದಾಗ ನಾನು ಶಾಂತಿಯನ್ನು ತರಲು ಮತ್ತು ಹಿಂಸಾಚಾರವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದೇನೆ. ಇದೆಲ್ಲವೂ ಎರಡು ಸಮುದಾಯಗಳ ನಡುವಿನ ತಪ್ಪು ತಿಳುವಳಿಕೆಯಾಗಿದೆ. ಸರಕಾರ ಶಾಂತಿ ಸಮಿತಿ ರಚಿಸಿದ್ದು, ಪ್ರಕ್ರಿಯೆ ನಡೆಯುತ್ತಿದೆ. ನಾಗರಿಕ ಸಮಾಜದ ಮುಖಂಡರು ಒಟ್ಟಿಗೆ ಕುಳಿತಿದ್ದಾರೆ ಎಂದು ಹೇಳಿದ್ದಾರೆ.