Advertisement

ರಾಯಚೂರಲ್ಲಿ ಕಾಂಗ್ರೆಸ್‌ನಿಂದ ಸ್ವಾತಂತ್ರ್ಯ ನಡಿಗೆ

07:39 PM Aug 10, 2022 | Team Udayavani |

ರಾಯಚೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಂಗಳವಾರ ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆ ಕಾರ್ಯಕ್ರಮ ನಡೆಸಲಾಯಿತು.

Advertisement

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಬೆಳಗ್ಗೆ ಯಾತ್ರೆಗೆ ಚಾಲನೆ ನೀಡಲಾಯಿತು. ಅಲ್ಲಿಂದ ಶುರುವಾದ ನಡಿಗೆ ಚಂದ್ರಮೌಳೇಶ್ವರ ವೃತ್ತ, ಪಟೇಲ್‌ ವೃತ್ತ, ಶೆಟ್ಟಿಬಾವಿ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಎಂ.ಈರಣ್ಣ ವೃತ್ತ, ಮೋಚಿವಾಡ, ಸರಾಫ್‌ ಬಜಾರ, ಸೂಪರ್‌ ಮಾರ್ಕೆಟ್‌, ನಗರಸಭೆ, ಬಸ್‌ ನಿಲ್ದಾಣ ಮಾರ್ಗವಾಗಿ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದವರೆಗೂ ನಡೆಸಲಾಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಇಂದು ನಮ್ಮ ದೇಶ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹೊಸ್ತಿಲಲ್ಲಿದೆ. ಈ ದೇಶದ ಸ್ವಾತಂತ್ರ್ಯದ ಹಿಂದೆ ಕಾಂಗ್ರೆಸ್‌ನ ಶ್ರಮ ಸಾಕಷ್ಟಿದೆ. ಸ್ವಾತಂತ್ರÂ ಹೋರಾಟದಲ್ಲಿ ಕಾಂಗ್ರೆಸ್‌ ಅಪಾರ ಕೊಡುಗೆ ನೀಡಿದೆ. ಕಾಂಗ್ರೆಸ್‌ನ ಅನೇಕ ನಾಯಕರು ದೇಶಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ. ದೇಶದ ಇತಿಹಾಸದಲ್ಲಿ ಕಾಂಗ್ರೆಸ್‌ನ ಹೆಗ್ಗುರುತುಗಳಿವೆ ಎಂದು ಸ್ಮರಿಸಿದರು.

ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಬಡ ಜನರ ಹಿತವೇ ಬೇಕಿಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದೆ. ಸಂವಿಧಾನದ ವಿರುದ್ಧವಾಗಿ ಸರ್ವಾಧಿ ಕಾರ ಧೋರಣೆಯಿಂದ ಆಡಳಿತ ನಡೆಸುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ದೇಶದ ಜನರನ್ನು ಸಂಕಷ್ಟಕ್ಕೀಡು ಮಾಡಿದೆ ಎಂದು ವಾಗ್ಧಾಳಿ ನಡೆಸಿದರು.

ಕಾರ್ಪೋರೇಟ್‌ ಕಂಪೆನಿಗಳ ಸಾಲ ಮನ್ನಾ ಮಾಡುತ್ತಿರುವ ಸರ್ಕಾರ ರೈತರ, ಕಾರ್ಮಿಕರ ಹಾಗೂ ಮಹಿಳೆಯರ ಅಭಿವೃದ್ಧಿಯನ್ನೇ ಸಂಪೂರ್ಣ ಕಡೆಗಣಿಸಿದೆ. ದೇಶದ ಸಾಲದ ಹೊರೆಯನ್ನು ಹೆಚ್ಚಿಸಿರುವುದೇ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ಎಂದರು.

ಜನ ನೆಮ್ಮದಿಯ ಜೀವನ ನಡೆಸುವುದೇ ಕಷ್ಟದ ಪರಿಸ್ಥಿತಿ ಎದುರಾಗಿದೆ. ಕೋಮು ಸಂಘರ್ಷ ಹುಟ್ಟುಹಾಕಿ ಜನರ ನಡುವೆ ಜಗಳ ಹಚ್ಚುವ ಕೆಲಸ ಬಿಜೆಪಿ ಮಾಡುತ್ತಿದೆ. ಬಿಜೆಪಿಯ ಈ ಜನವಿರೋಧಿ ನೀತಿಗಳನ್ನು ಜನರಿಗೆ ತಿಳಿಸಲು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ.ಗಳ ಪಾದಯಾತ್ರೆ ನಡೆಸುವ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

Advertisement

ಪಕ್ಷದ ಕಾರ್ಯಕರ್ತರು ನೂರಾರು ಬೈಕ್‌ಗಳಲ್ಲಿ ರಾಷ್ಟ್ರಧ್ವಜಗಳನ್ನು ಹಿಡಿದು ನಗರಾದ್ಯಂತ ಬೈಕ್‌ ರ್ಯಾಲಿ ನಡೆಸಿದರು. ಅದರ ಜತೆಗೆ ಅಂಬೇಡ್ಕರ್‌ ವೃತ್ತದಲ್ಲಿ ಕೆಲಕಾಲ ಸಮಾವೇಶ ಮಾಡಿದ್ದರಿಂದ ಸಂಚಾರಕ್ಕೆ ಅಡಚಣೆಯಾಯಿತು. ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು.

ಮಾಜಿ ಸಚಿವ ಎಚ್‌.ಆಂಜನೇಯ, ಜಿಲ್ಲಾಧ್ಯಕ್ಷ ಬಿ.ವಿ.ನಾಯಕ, ಎಐಸಿಸಿ ಕಾರ್ಯದರ್ಶಿ ಎನ್‌.ಎಸ್‌ ಬೋಸರಾಜು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ರಾಮಣ್ಣ ಇರಬಗೇರಾ, ಜಯಣ್ಣ, ರವಿ ಬೋಸರಾಜು, ರುದ್ರಪ್ಪ ಅಂಗಡಿ, ಅಮರೇಗೌಡ ಹಂಚಿನಾಳ, ಜಿ.ಶಿವಮೂರ್ತಿ, ಸುಧೀಂದ್ರ ಜಾಹಗೀರದಾರ, ನಿರ್ಮಲಾ ಬೆಣ್ಣಿ ಹಾಗೂ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next