Advertisement

ಸನ್ನಡತೆಯ ಜೈಲು ಹಕ್ಕಿಗಳಿಗೆ ಸ್ವಾತಂತ್ರ್ಯ

12:55 PM Dec 14, 2017 | |

ಬೆಂಗಳೂರು: ರಾಜಧಾನಿಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ 50, ಮೈಸೂರಿನ 17, ಬೆಳಗಾವಿಯ 12, ಕಲಬುರಗಿಯ 9, ವಿಜಯಪುರ ಹಾಗೂ ಬಳ್ಳಾರಿಯ ತಲಾ 8 ಮತ್ತು ಧಾರವಾಡ ಜೈಲಿನ 4 ಖೈದಿ ಸೇರಿ ರಾಜ್ಯದ 108 ಖೈದಿಗಳಿಗೆ ಬುಧವಾರ ಬಿಡುಗಡೆ ಭಾಗ್ಯ ದೊರೆತಿದೆ. ಇದರಲ್ಲಿ 10 ಮಹಿಳಾ ಖೈದಿಗಳು ಸೇರಿಕೊಂಡಿದ್ದಾರೆ.

Advertisement

ಪರಪ್ಪನ ಅಗ್ರಹಾರದ ಕೇಂದ್ರಕಾರಗೃಹದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ 50 ಖೈದಿಗಳಿಗೆ ಬಿಡುಗಡೆಯ ಪ್ರಮಾಣ ಪತ್ರವನ್ನು ಗೃಹ ಸಚಿವ ರಾಮಲಿಂಗಾರೆಡ್ಡಿಯವರು ನೀಡಿದರು. 14 ವರ್ಷಗಳ ಕಾಲ ಕಾರಾಗೃಹದ ಗೋಡೆಗಳ ಮಧ್ಯೆ ಬಂಧಿಯಾಗಿದ್ದ 50 ಖೈದಿಗಳಿಗೆ ಬುಧವಾರ ಸ್ವಾತಂತ್ರ್ಯ ಸಿಕ್ಕಿದೆ. ಹೀಗೆ ಬೇರೆ ಜೈಲುಗಳಲ್ಲಿದ್ದ ಖೈದಿಗಳಿಗೂ ಬಿಡುಗಡೆಯಾಗಿದೆ.

ಮೂರು ಸ್ನಾತಕೋತ್ತರ ಪದವಿ: ಚಿಕ್ಕಬಳ್ಳಾಪುರದ ಬಾಗೇಪಲ್ಲಿಯ ಖೈದಿ ನರಸಿಂಹರೆಡ್ಡಿ ಮಾತನಾಡಿ, 2003ರಲ್ಲಿ ಒಂದು ಕ್ಷಣದ ಆವೇಶದಿಂದ ಮಾಡಿದ ಕೊಲೆಗೆ 14 ವರ್ಷ ಶಿಕ್ಷೆ ಅನುಭವಿಸಿದೆ. ಈಗ ಪುನರ್ಜನ್ಮ ಸಿಕ್ಕಿದೆ. ತುಂಬಾ ಖುಷಿಯಾಗುತ್ತಿದೆ. ಜೈಲಿನ ಗ್ರಂಥಾಲಯದಲ್ಲಿ ಕೆಲಸ ಮಾಡುತ್ತಿದ್ದರಿಂದ ನಿತ್ಯ ಪತ್ರಿಕೆ ಮತ್ತು ಪುಸ್ತಕ ಓದುತ್ತಿದ್ದೆ. ಇದರಿಂದಲೇ ಪತ್ರಿಕೋದ್ಯಮ, ಇತಿಹಾಸ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಮುಂದೆ ಉತ್ತಮ ವ್ಯಕ್ತಿಯಾಗಿ ಬದುಕುತ್ತೇನೆ. ಇಬ್ಬರು ಮಕ್ಕಳು ಎಂಜಿನಿಯರಿಂಗ್‌ ಓದುತ್ತಿದ್ದಾರೆ. ಜೈಲಿನಲ್ಲಿ ಒಂಟಿಯಾಗಿದ್ದ ದಿನಗಳೇ ಹೆಚ್ಚಿತ್ತು ಎಂದು ತಮ್ಮ ಅನುಭವ ಹೇಳಿಕೊಂಡರು.

ಬಾವಿಗಾಗಿ ಕೊಲೆ: ಊರಿಗೇ ದೊಡ್ಡ ಕುಟುಂಬ ನಮ್ಮದು, ಜಮೀನಿನಲ್ಲಿ ತೆಗೆದಿದ್ದ ಸಣ್ಣ ಬಾವಿಗಾಗಿ ಚಿಕ್ಕಪ್ಪನ ಮಗ ರಾಜ ಜಗಳ ಮಾಡಿದ. ಬಾವಿ ನಮಗೆ ಸೇರಬೇಕೆಂದು ತಕರಾರು ತೆಗೆದ. ಬೇರೆಯವರನ್ನು ಕರೆಸಿ ದೊಡ್ಡ ಪ್ರಮಾಣದಲ್ಲಿ ಜಗಳ ಮಾಡಿದ. ನಾವು ಕೊರೆದ ಬಾವಿಗೆ ಬೇರೆಯರು ವಾರಸುದಾರರಾಗುವುದು ಹೇಗೆ ಸಾಧ್ಯ ಎಂದು ಎಂಟು ಮಂದಿ ಸಹೋದರರು ಸೇರಿ ಚಿಕ್ಕಪ್ಪನ ಮಗನನ್ನು ಕೊಂದೆವು. 8 ಮಂದಿ ಜೈಲು ಸೇರಿದೆವು.  ಅದರಲ್ಲಿ ನಮ್ಮನ್ನು ಸೇರಿ 4 ಮಂದಿ ಬಿಡುಗಡೆಯಾಗಿದ್ದಾರೆ. ಒಬ್ಬ ಜೈಲಿನಲ್ಲೆ ಕೊನೆಯುಸಿರೆಳೆದಿದ್ದಾನೆ ಎಂದು ಸನ್ನಡತೆ ಆಧಾರದಲ್ಲಿ ಹೊರಬಂದ 82 ವರ್ಷದ ಹೊನ್ನೇಗೌಡರು ತಮ್ಮ ನೋವಿನ ಕಥೆ ಹೇಳಿಕೊಂಡರು.

ಕನ್ನಡ, ತಮಿಳು ಕಲಿತೆ: ನಮ್ಮೂರು ಆಂಧ್ರದ ಹಿಂದೂಪುರ, ಕೊಲೆ ಪ್ರಕರಣದಲ್ಲಿ 12 ವರ್ಷದ ಹಿಂದೆ ಜೈಲು ಸೇರಿದ್ದೆ. ಐದನೇ ತರಗತಿಯವರೆಗೆ ಓದಿದ್ದ ನಾನು ಜೈಲಿನ ಶಾಲೆಯಲ್ಲಿ ಕನ್ನಡ ಹಾಗೂ ತಮಿಳು ಓದಲು, ಮಾತನಾಡಲು ಮತ್ತು ಬರೆಯಲು ಕಲಿತೆ. ಮುಂದೆ ಊರಿಗೆ ಹೋಗಿ ಬೇಕರಿ ಹಾಕಲಿದ್ದೇನೆ. ಜೈಲಿನಲ್ಲಿ ಕಡಿಮೆ ತಪ್ಪು ಮಾಡಿದ ಅನೇಕರಿದ್ದಾರೆ. ಅವರಿಗೂ ಆದಷ್ಟು ಬೇಗ ಸ್ವಾತಂತ್ರ್ಯ ಸಿಗುವಂತಾಗಲಿ ಎಂದು ಹೇಳಿದರು.

Advertisement

ಸಬೀನಾ ಬಾನು ಮಾತನಾಡಿ, ಯಾವುದೋ ಕೆಟ್ಟ ಗಳಿಗೆಯಲ್ಲಿ ದುಷ್ಕೃತ್ಯ ನಡೆದು ಹೋಗಿದೆ. ಈಗ ಹೊರಗಡೆ ಬಂದಿದ್ದೇನೆ. ದುಃಖ ಹಾಗೂ ಸಂತೋಷ ಎರಡೂ ಇದೆ. ಮಗನಿಗೆ ಉತ್ತಮ ಶಿಕ್ಷಣ ನೀಡುತ್ತೇನೆ ಎಂದರು. ಹೀಗೆ ಸನ್ನಡತೆ ಆಧಾರದಲ್ಲಿ ಹೊರಗೆ ಬಂದಿರುವ ಒಬ್ಬೊಬ್ಬರ ಕಥೆಯೂ ರೋಚಕವಾಗಿದೆ.

ನಿಯಮ ತಿದ್ದುಪಡಿ ಅಗತ್ಯವಿದೆ: ಗೃಹ ಸಚಿವ
ಬೆಂಗಳೂರು: ಸನ್ನಡತೆಯ ಆಧಾರದಲ್ಲಿ ಖೈದಿಗಳನ್ನು ಬಿಡುಗಡೆ ಮಾಡುವ ನೀತಿಗೆ ಇನ್ನಷ್ಟು ತಿದ್ದುಪಡಿ ತರುವ ಅಗತ್ಯವಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಬುಧವಾರ ಪರಪ್ಪನ ಅಗ್ರಹಾರದ ಕೇಂದ್ರ ಕಾರಗೃಹದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 50 ಖೈದಿಗಳಿಗೆ ಸನ್ನಡತೆ ಆಧಾರದಲ್ಲಿ ಬಿಡುಗಡೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಸನ್ನಡತೆ ಆಧಾರದಲ್ಲಿ ಖೈದಿಗಳನ್ನು ಬಿಡುಗಡೆಗೆ ಸಂಬಂಧಿಸಿದ ಒಂದು ಖಡತ ವಿಲೇವಾರಿ ವಿಳಂಬವಾಗಿದೆ. ಹೀಗಾಗಿ 12 ಖೈದಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಸನ್ನಡತೆ ಆಧಾರದಲ್ಲಿ ಖೈದಿಗಳನ್ನು ಬಿಡುಗಡೆ ಮಾಡುವ ನಿಯಮ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಹೇಳಿದರು. ಒಂದು ಕ್ಷಣದ ಆವೇಶದಿಂದ ಗೊತ್ತೋ ಗೊತ್ತಿಲ್ಲದೇ ತಪ್ಪು ಮಾಡಿ 14 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಾರೆ.

ಆವೇಶ ಮನುಷ್ಯ ಸಹಜ ಗುಣವಾಗಿದ್ದು, ತಪ್ಪು ಮಾಡುವುದರಿಂದಲೇ ನ್ಯಾಯಾಲಯ, ಭಾರತೀಯ ತಂಡ ಸಂಹಿತೆ(ಐಪಿಸಿ), ಧರ್ಮ, ಪೂಜೆ, ಪೊಲೀಸ್‌ ವ್ಯವಸ್ಥೆ ಇತ್ಯಾದಿ ಹುಟ್ಟಿಕೊಂಡಿದೆ ಎಂದರು. ಖೈದಿಗಳಿಗೆ ಆದಾರ್‌, ಆರೋಗ್ಯ ವಿಮೆ:  ಡಿಐಜಿ ಎಚ್‌.ಎಸ್‌.ರೇವಣ್ಣ ಮಾತನಾಡಿ, ದಿನೇದಿನೇ ಅಪರಾಧಿಗಳ ಸಂಖ್ಯೆ ಹೆಚ್ಚುತ್ತಿದೆ. ಖೈದಿಗಳಿಗೆ ಹೆಚ್ಚಿನ ಭದ್ರತೆ ನೀಡುವ ಹೈ ಸೆಕ್ಯೂರ್‌ ಕಟ್ಟಡದ ವ್ಯವಸ್ಥೆ ಆಗಬೇಕಿದೆ.

ಅಧಿಕಾರಿಗಳ ಮತ್ತು ಸಿಬ್ಬಂದಿ ಕೊರತೆ ಇದೆ. ಈ ಮಧ್ಯೆ ಖೈದಿಗಳಿಗೆ ಜನ್‌ಧನ್‌ ಖಾತೆ ತೆರೆದು, ಆ ಮೂಲಕವೇ ಕೂಲಿಯನ್ನು ಅವರ ಬ್ಯಾಂಕ್‌ ಖಾತೆಗೆ ಹಾಕಲಿದ್ದೇವೆ. ಖೈದಿಗಳ ಬ್ಯಾಂಕ್‌ ಖಾತೆ ಸಂಬಂಧ ಬ್ಯಾಂಕ್‌ ಅಧಿಕಾರಿಗಳ ಜತೆ ಮಾತುಕತೆ ಮಾಡಿದ್ದೇವೆ. ಆಧಾರ್‌ ಕಾರ್ಡ್‌ ಮಾಡಿಸುತ್ತಿದ್ದೇವೆ. ಹಾಗೆಯೇ ಎಲ್ಲಾ ಖೈದಿಗಳಿಗೂ ಆರೋಗ್ಯ ವಿಮೆ ಮಾಡಿಸುತ್ತಿದ್ದೇವೆ. ಆರೋಗ್ಯ ಸಮಸ್ಯೆಯಿಂದ ಖೈದಿ ಮೃತರಾದಲ್ಲಿ ಅವರ ಕುಟುಂಬಕ್ಕೆ 2 ಲಕ್ಷ ಮಿಮೆ ನೀಡುವಂತೆ ಮಾಡುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next