Advertisement
1909, 1918, 1932, 1933 ನಾಲ್ಕು ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ, 50 ಅಧ್ಯಕ್ಷರ ಜತೆ ಕೆಲಸ ಮಾಡಿ, “ಸತ್ಯಮೇವ ಜಯತೇ’ ವಾಕ್ಯವನ್ನು ಜನಸಾಮಾನ್ಯರಲ್ಲಿ ಜನಪ್ರಿಯಗೊಳಿಸಿದ್ದ ಪಂಡಿತ್ ಮದನ ಮೋಹನ ಮಾಳವೀಯರನ್ನು ಗಾಂಧೀಜಿಯವರು “ಪ್ರಿನ್ಸ್‌ಲೀ ಬೆಗ್ಗರ್’ (ಭಿಕ್ಷುಕ ಸಾಮ್ರಾಟ), “ಮಹಾಮಾನ’ ಎಂದು ಕರೆಯುತ್ತಿದ್ದರು. ಇದಕ್ಕೆ ಕಾರಣ ಬನಾರಸ್ ಹಿಂದು ವಿಶ್ವವಿದ್ಯಾಲಯವನ್ನು ಆರಂಭಿಸಲು ಹಣ ಸಂಗ್ರಹಕ್ಕಾಗಿ ಪಟ್ಟ ಶ್ರಮ. ನೂರು ವರ್ಷಗಳ ಹಿಂದೆ ಇವರು ಒಂದು ಕೋ.ರೂ. ಅಧಿಕ ಮೊತ್ತವನ್ನು ಸಂಗ್ರಹಿಸಿದ್ದರು.
Related Articles
Advertisement
ಬನಾರಸ್ ರಾಜ ನೀಡಿದ 1,370 ಎಕ್ರೆ ಪ್ರದೇಶದಲ್ಲಿರುವ ಈ ವಿ.ವಿ.ಗೂ ಮೈಸೂರು ರಾಜನಿಗೂ ಸಂಬಂಧವಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ 1912ರ ವೇಳೆ ಕಾಶೀ ವಿಶ್ವನಾಥನ ದರ್ಶನಕ್ಕೆ ಹೋದಾಗ ಮಾಳವೀಯರು ದೇಣಿಗೆ ಯಾಚಿಸಿದರು. 1 ಲ.ರೂ. ಸರಕಾರದಿಂದ, 1 ಲ.ರೂ. ವೈಯಕ್ತಿಕ ದೇಣಿಗೆ ಘೋಷಿಸಿದ್ದಲ್ಲದೆ ಪ್ರತೀವರ್ಷ 13,000 ರೂ. ಅನುದಾನವನ್ನು ಘೋಷಿಸಿದರು. ಮಾಳವೀಯರ ಕೋರಿಕೆಯಂತೆ ಪ್ರಥಮ ಕುಲಾಧಿಪತಿಯಾಗಿಯೂ ಕೆಲವು ವರ್ಷ ಸೇವೆ ಸಲ್ಲಿಸಿದರು. ಪ್ರಥಮ ಘಟಿಕೋತ್ಸವದಲ್ಲಿ “ಹಿಂದು ಎಂಬ ಶಬ್ದ ಜಾತಿ, ಧರ್ಮ ಸೂಚಕವಲ್ಲ, ಬದಲಾಗಿ ಜೀವನ ಶೈಲಿ (ವೇ ಆಫ್ ಲೈಫ್)’ ಎಂದು ನುಡಿದಿದ್ದರು. ಇದು ತಮ್ಮದೇ ಆದ ಮೈಸೂರು ವಿ.ವಿ. ಜನಿಸುವ ಮೊದಲು ಎಂಬುದು ಉಲ್ಲೇಖನೀಯ. ಮಾಳವೀಯರ ಮೊಮ್ಮಗ, ಅಲಹಾಬಾದ್ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಗಿರಿಧರ ಮಾಳವೀಯ ಈಗಿನ ಕುಲಾಧಿಪತಿ. ಈಗ ದೇಶದ, ಏಷ್ಯಾದ ಪ್ರತಿಷ್ಠಿತ ವಿ.ವಿ.ಗಳಲ್ಲಿ ಒಂದಾಗಿದೆ.
“ನ ದೈನ್ಯಂ ನ ಪಲಾಯನಂ’1984ರಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ಕೊಲೆ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋತು ಸುಣ್ಣವಾಗಿತ್ತು. ಈ ಸೋಲಿನಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಸೋಲೂ ಒಂದಾಗಿತ್ತು. ಕಾಂಗ್ರೆಸ್‌ಗೆ 404 ಸ್ಥಾನ ಸಿಕ್ಕಿದ್ದರೆ, ಬಿಜೆಪಿಗೆ ಸಿಕ್ಕಿದ್ದು ಕೇವಲ ಎರಡು. ವಾಜಪೇಯಿಯವರ ಸೋಲು ಕಾರ್ಯಕರ್ತರನ್ನು ಕಂಗೆಡಿಸಿತ್ತು. ಇವರ ಅಭಿಮಾನಿ ಭದ್ರಾವತಿಯ ಪರಿಶಿಷ್ಟ ಜಾತಿಯ ಯುವಕ ಲಕ್ಷ್ಮೀನಾರಾಯಣ ಮನನೊಂದು ಆತ್ಮಾಹುತಿ ಮಾಡಿಕೊಂಡಿದ್ದರು. ವಾಜಪೇಯಿಯವರ ಹುಟ್ಟೂರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿಯೇ ಸೋತದ್ದು. ಗ್ವಾಲಿಯರ್ ರಾಜಮಾತೆ ವಿಜಯರಾಜೇ ಸಿಂಧಿಯಾ ಅವರು ವಾಜಪೇಯಿಯವರ ಪರವಾಗಿ ಕೆಲಸ ಮಾಡಿದ್ದರೂ ವಿಜಯರಾಜೇ ಅವರ ಪುತ್ರ ಮಾಧವರಾವ್ ಸಿಂಧಿಯಾ ಗೆಲುವು ಸಾಧಿಸಿದ್ದರು. ಭದ್ರಾವತಿ ಎಲ್ಲಿ? ಗ್ವಾಲಿಯರ್ ಎಲ್ಲಿ? ಲಕ್ಷ್ಮೀನಾರಾಯಣರ ಸಾವನ್ನು ಕೇಳಿ ದುಃಖೀತರಾದ ವಾಜಪೇಯಿ ಅವರ ಮನೆಗೆ ಭೇಟಿ ನೀಡಿ ತಂದೆ ತಾಯಿಯವರನ್ನು ಸಂತೈಸಲು ನಿರ್ಧರಿಸಿದರು. ಮಂಗಳೂರಿಗೆ ಬಂದು ಅಲ್ಲಿಂದ ಉಡುಪಿ ಮೂಲಕ ಭದ್ರಾವತಿಗೆ ತೆರಳಿದ್ದರು. ಆಗ ಬಿಜೆಪಿ ಕಾರ್ಯಕರ್ತರಲ್ಲಿ ನಿರಾಸೆ ಮೂಡಿತ್ತು. ಇನ್ನೆಲ್ಲಿ ಬಿಜೆಪಿಗೆ ಭವಿಷ್ಯ ಎಂದು ತಲೆ ಮೇಲೆ ಕೈಕಟ್ಟಿ ಕುಳಿತ ಕಾಲವದು. ಆಗ ಶ್ರೀಕೃಷ್ಣಮಠದಲ್ಲಿ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಗಳ ಮೂರನೆಯ ಪರ್ಯಾಯ. ರಾಜಾಂಗಣದಲ್ಲಿ ನಡೆದ ಸಭೆಯಲ್ಲಿ ವಾಜಪೇಯಿ ಅವರು “ಸೋಲಿನಿಂದ ಕಂಗೆಡುವ ಪ್ರಶ್ನೆಯೇ ಇಲ್ಲ. ಹತಾಶರಾಗಬೇಕಿಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸಬೇಕು. ಮುಂದಿನ ದಿನಗಳು ನಮ್ಮದ್ದಾಗಲಿದೆ- “ನ ದೈನ್ಯಂ ನ ಪಲಾಯನಂ” ಎಂಬ ಮಾತನ್ನು ಉದ್ಘೋಷಿಸಿದ್ದರು. ಬಳಿಕ ಕಾಲ ಉರು ಳಿತು… ಸೋತ ಸಂದರ್ಭ ಪತ್ರಕರ್ತರಿಗೆ ಹಾಸ್ಯ ಚಟಾಕಿ ಹಾರಿಸಿದ್ದು ಹೀಗೆ: “ನಾನು ಸೋತು ತಾಯಿ-ಮಗನ ವೈಮನಸ್ಸನ್ನು ಬೀದಿಗೆ ತರುವುದು ತಪ್ಪಿಸಿದೆ’. ಅಂದರೆ ವಾಜಪೇಯಿ ಸ್ಪರ್ಧಿಸದೆ ಇದ್ದಿದ್ದರೆ ವಿಜಯರಾಜೇ ಸಿಂಧಿಯಾ ಸ್ಪಧಿಸುತ್ತಿದ್ದರು. ತಾಯಿ-ಮಗನ ಸ್ಪರ್ಧೆ ಏರ್ಪಡುತ್ತಿತ್ತು. ಕರ್ನಾಟಕ ಕರಾವಳಿ ಪ್ರದೇಶಕ್ಕೆ ಬಂದಾಗ ಡಾ| ವಿ.ಎಸ್.ಆಚಾರ್ಯರ ಕಾರಿನಲ್ಲಿ ಸಂಚರಿಸುತ್ತಿದ್ದರು. ಒಮ್ಮೆ ಶಿವಮೊಗ್ಗಕ್ಕೆ ಹೋದವರು ಕುಂದಾಪುರ ಮಾರ್ಗವಾಗಿ ಉಡುಪಿಯತ್ತ ಬರುತ್ತಿದ್ದರು. ಸಾಲಿಗ್ರಾಮದಲ್ಲಿ ಸಂಚರಿಸುವಾಗ ವಾಜಪೇಯಿಯವರು “ಅರೆ, ಓ ಕಾರಂತ್’ ಎಂದು ಗುರುತಿಸಿದರು. ಅಚಾನಕ್ಕಾಗಿ ಹೇಳಿದ ಕಾರಣ ಕಾರು ಮುಂದೆ ಬಹಳ ದೂರ ಚಲಿಸಿತ್ತು. ವಾಜಪೇಯಿಯವರು ಕಾರಂತರು ಸಿಕ್ಕಿದಾಗ ನಮನ ಸಲ್ಲಿಸಲು ಹೇಳಿದರು. ಉಡುಪಿ ಎಂಜಿಎಂ ಕಾಲೇಜಿನ ಒಂದು ಕಾರ್ಯಕ್ರಮದಲ್ಲಿ ಡಾ| ಕಾರಂತರು ಸಿಕ್ಕಿದಾಗ ಆಚಾರ್ಯರು ಇದನ್ನು ನೆನಪಿಸಿದರು. ಆದರೆ ಕಾರಂತರು ಒಪ್ಪಲಿಲ್ಲ. “ನೀವು ನೋಡಿದ್ದು ಕಾರಂತನನ್ನಲ್ಲ. ಬೇರಾವುದೋ ಮುದುಕನನ್ನು. ನೀವು ಹೇಳಿದ ದಿನ ಕೋಟದಲ್ಲಿರಲಿಲ್ಲ’ ಎಂದು ಪಟ್ಟು ಹಿಡಿದರು. ಕೆಲವು ದಿನ ಬಿಟ್ಟು ಡಾ|ಆಚಾರ್ಯರಿಗೆ ಕಾರಂತರ ಪತ್ರ ಬಂತು: “ಪ್ರೀತಿಯ ಆಚಾರ್ಯರೆ, ನೀವು ಆ ದಿನ ನೋಡಿದ್ದು ಬೇರಾವುದೋ ಮುದುಕನನ್ನಲ್ಲ. ಕಾರಂತನನ್ನೇ ನೋಡಿದ್ದು. ಮನೆಗೆ ಬಂದು ಡೈರಿಯನ್ನು ನೋಡಲಾಗಿ ನಾನು ಆ ದಿನ ಕೋಟದಲ್ಲಿಯೇ ಇದ್ದದ್ದೂ, ಸಂಜೆ ವಾಕಿಂಗ್ ಹೋದದ್ದೂ ನಿಜ. ಇತ್ತೀಚಿಗೆ ಕಾರಂತನಿಗೆ ಸ್ವಲ್ಪ ಮರೆವು ಜಾಸ್ತಿಯಾಗುತ್ತಿದೆ. ಅಷ್ಟೇ ಅಲೆª ಮೊಂಡುತನವೂ ಕೂಡ. ಆ ದಿನ ನೋಡಿದ, ನಿಮ್ಮೊಂದಿಗೆ ಕಾರಿನಲ್ಲಿದ್ದ ಆ ಸಾಕ್ಷಿದಾರರಿಗೂ (ವಾಜಪೇಯಿ) ತಿಳಿಸಿಬಿಡಿ’. -ಮಟಪಾಡಿ ಕುಮಾರಸ್ವಾಮಿ