Advertisement
ಕನ್ನಡ ನಾಡಿನ ಹೆಮ್ಮೆಯ ಚೇತನಗಳಲ್ಲಿ ಒಂದು ಪ್ರಮುಖವಾದ ಹೆಸರು ಶ್ರೀ ಎಚ್.ಎಸ್.ದೊರೆಸ್ವಾಮಿಯವರದ್ದು. ಅವರನ್ನು ಈಗಲೂ ಅತ್ಯಂತ ಸಾಮಾನ್ಯವಾಗಿ ಸ್ವಾತಂತ್ರ್ಯ ಸೇನಾನಿ ಎಂದು ಕರೆಯುವುದೇ ವಾಡಿಕೆ. ನಾನೂ ಎಲ್ಲರಂತೆ ಅದೇ ರೀತಿ ತಲೆಬರಹದಡಿ ಈ ಲೇಖನ ಬರೆಯಬೇಕೆಂದುಕೊಂಡೆ. ಆಗ ಇದ್ದಕ್ಕಿದ್ದಂತೆ ಹೊಳೆಯಿತು, ಆ ಪದ ಭೂತಕಾಲದಲ್ಲಿ ಮಾತ್ರವೇ ಬಳಕೆಯಾಗುತ್ತಿಲ್ಲ, ವರ್ತಮಾನಕಾಲದಲ್ಲಿ ಬಳಕೆಯಾಗುತ್ತಿದೆ. ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದ ಸೇನಾನಿ ಮಾತ್ರವಲ್ಲ ಇಂದಿಗೂ ನಾವವರನ್ನು ನಮ್ಮೆಲ್ಲರ ‘ಸೇನಾನಿ’ಎಂದೇ ಗುರುತಿಸುತ್ತಿದ್ದೇವೆ. ಎಷ್ಟು ಅರ್ಥಪೂರ್ಣವಾಗಿದೆಯಲ್ಲ ಈ ವಿಶೇಷಣ?
Related Articles
Advertisement
ಅಷ್ಟರಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಬಿಸಿ ಆರಂಭವಾಯಿತು. ಹಳೇ ಮೈಸೂರು ರಾಜ್ಯದಲ್ಲಿಯೂ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ’ ಎಂಬ ಕೂಗು ಜೋರಾಯಿತು. ಆ ಚಳವಳಿಯ ಅನೇಕ ಬಗೆಯ ಕ್ರಿಯಾಶೀಲ ಚಟುವಟಿಕೆಗಳ ಕಾರಣಕ್ಕೆ ದೊರೆಸ್ವಾಮಿಯವರೂ ಜೈಲುವಾಸವನ್ನೂ ಅನುಭಸಬೇಕಾಯಿತು. ಅದೂ ಕೂಡಾ ಅವರ ಆತ್ಮಬಲವನ್ನು ಇನ್ನಷ್ಟು ಹೆಚ್ಚಿಸಿತೇ ವಿನಃ ಕುಗ್ಗಿಸಲಿಲ್ಲ. ಹೊರಬಂದ ನಂತರ ಇನ್ನಷ್ಟು ಉತ್ಸಾಹದಿಂದ ಆಂದೋಲನದಲ್ಲಿ ತೊಡಗಿಕೊಂಡರು.
ಅದೇ ಸಮಯದಲ್ಲಿ ಅವರಿಗೆ, ಬ್ರಿಟೀಷರ ಕಾಲದಲ್ಲೇ ಆಗಲಿ, ಸ್ವಾತಂತ್ರ್ಯಾನಂತರದ ದಿನಗಳಲ್ಲೇ ಆಗಲಿ, ಸಮಾಜದ ಓರೆಕೋರೆಗಳನ್ನು ತಿದ್ದಲು ಪತ್ರಿಕೆ ಅತ್ಯಂತ ಸಶಕ್ತವಾದ ಮಾಧ್ಯಮ ಎಂಬ ಅನಿಸಿಕೆ ಬಂತು. ಸ್ವಾತಂತ್ರ್ಯ ಚಳವಳಿಯ ಆಶಯಗಳು ಏನೇ ಇದ್ದರೂ, ಆಳ್ವಿಕೆ ನಡೆಸುವವರಿಗೊಂದು ಅಂಕುಶವಿರುವುದು ಅಗತ್ಯವೆನಿಸಿತ್ತು. ಅದೇ ರೀತಿ, ಸಮಾಜದಲ್ಲಿದ್ದ ಅನೇಕ ಬಗೆಯ ಅಂಕುಡೊಂಕುಗಳನ್ನು ತಿದ್ದದಿದ್ದರೆ ಅಂತಹ ಸ್ವಾತಂತ್ರ್ಯ ಅರ್ಥಹೀನ ಎಂಬ ಭಾವನೆ ದೊರೆಸ್ವಾಮಿಯವರಲ್ಲಿ ಬಲವಾಯಿತು. ಅದಕ್ಕಾಗಿ ಆರಂಭವಾಗಿದ್ದು ಪೌರವಾಣಿ ಪತ್ರಿಕೆ. ಅದನ್ನು ಮೈಸೂರು ಸರ್ಕಾರ ನಿಷೇಧಿಸಿದಾಗ ಎಂತಹ ಸಂದರ್ಭದಲ್ಲೂ ನಡೆಸಬೇಕೆಂಬ ಛಲದಿಂದ, ಭೂಗತರಾಗಿ ಆಂಧ್ರದ ಹಿಂದೂಪುರದಿಂದ ಪತ್ರಿಕೆಯನ್ನು ನಡೆಸಿದರು. ಪತ್ರಿಕೆಯನ್ನು ಪ್ರಜಾತಂತ್ರದ ನಾಲ್ಕನೆಯ ಅಂಗ ಎಂಬ ಹೇಳಿಕೆಗೆ ಅನ್ವರ್ಥವಾಗುವಂತೆ ಪೌರವಾಣಿ ಸಾಕಷ್ಟು ಕಾಲ ನಡೆದುಬಂತು.
ಸ್ವಾತಂತ್ರ್ಯಾನಂತರ ಭೂದಾನ ಚಳವಳಿಯಲ್ಲಿ ವಿನೋಬಾ ಭಾವೆಯವರೊಂದಿಗೆ ತೊಡಗಿಕೊಂಡಾಗ ಭೂಹೀನ ಬಡವರ ಬದುಕಿನ ಹತ್ತಿರದ ದರ್ಶನವಾಯಿತು. ಅವರೇ ತಮ್ಮ ಪುಸ್ತಕ ‘ನೆನಪಿನ ಸುರುಳಿ ತೆರೆದಾಗ’ದಲ್ಲಿ ಹೇಳಿಕೊಂಡಿರುವಂತೆ, ಕೇವಲ ಬ್ರಿಟಿಷರಿಂದ ಸ್ವಾತಂತ್ರ್ಯವಷ್ಟೇ ಈ ದೇಶದ ಎಲ್ಲ ಸಮಸ್ಯೆಗಳಿಗೂ ಪರಿಹಾರವಲ್ಲ ಎಂಬ ಅಭಿಪ್ರಾಯ ಬಲಗೊಳ್ಳತೊಡಗಿದ್ದೇ ಅಲ್ಲಿಂದ. ಆದ್ದರಿಂದಲೇ, ಅನೇಕ ಬಗೆಯ ರಚನಾತ್ಮಕ ಆಂದೋಲನಗಳ ಮೂಲಕ ಬಡತನ ನಿವಾರಣೆ, ಅಸ್ಪಶ್ಯತೆಯಂತಹ ಆಚರಣೆಗಳಿಗೆ ವಿರೋಧ, ವೈಚಾರಿಕತೆಯನ್ನು ಹರಡುವ ಪ್ರಯತ್ನಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದರು.
ಇಲ್ಲಿಯೇ ನಮಗೆ ಎಚ್.ಎಸ್.ದೊರೆಸ್ವಾಮಿಯವರ ವೈಶಿಷ್ಟ್ಯ ಮನಸ್ಸಿಗೆ ನಾಟುವುದು! ಅವರು ಕೇವಲ ರಾಷ್ಟ್ರೀಯ ಆಂದೋಲನಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ಜಾಗತಿಕ ಆದರ್ಶ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಾಮಾಜಿಕ ನ್ಯಾಯಗಳ ಸಾಕಾರಕ್ಕಾಗಿ ದುಡಿಯುವ ನಿರ್ಧಾರ ಮಾಡಿದರು. ಗಾಂಧೀಜಿಯವರ ಬಹಳ ಪ್ರಖ್ಯಾತವಾದ ಹೇಳಿಕೆಯೊಂದಿದೆ. ಈ ದೇಶದ ಕಟ್ಟಕಡೆಯ ವ್ಯಕ್ತಿಗೆ ಸ್ವಾತಂತ್ರ್ಯ ದೊರೆತಾಗಲೇ ಈ ದೇಶ ಸ್ವತಂತ್ರಗೊಂಡಿದೆ ಎಂದರ್ಥ ಎಂಬುದು. ಇದನ್ನು ನಿಜಕ್ಕೂ ದೊರೆಸ್ವಾಮಿಯವರು ತಮ್ಮ ಬದುಕಿನ ಧ್ಯೇಯವಾಕ್ಯವನ್ನಾಗಿ ಮಾಡಿಕೊಂಡಿದ್ದಾರೆ. ಅವರ ಬದುಕಿನ ನಡೆ ರೂಪುಗೊಂಡಿದ್ದೇ, ಈ ದೇಶದ ಕಟ್ಟ ಕಡೆಯ ಮನುಷ್ಯರಿಗೂ ಬದುಕಿನ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಂಡು ಘನತೆಯಿಂದ ಬದುಕಬಹುದಾದ ಸ್ಥಿತಿ ನಿರ್ಮಾಣಗೊಳ್ಳುವುದು ಹೇಗೆ ಎಂಬ ಚಿಂತನ- ಮಂಥನದ ಕುಲುಮೆಯಲ್ಲಿ. ಹಾಗೆಯೇ, ಸ್ವಾತಂತ್ರ್ಯಾನಂತರ ಅನೇಕರು ನೇರ ರಾಜಕಾರಣಕ್ಕಿಳಿದಾಗ, ಆ ಹಾದಿಯನ್ನು ತುಳಿಯದೇ ಸದಾ ಎಚ್ಚೆತ್ತ ವಿರೋಧ ಪಕ್ಷವಾಗಿ ನಿಂತವರು ದೊರೆಸ್ವಾಮಿಯವರು. ಜನರ ದನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆದಾಗಲೆಲ್ಲ ಅವರು ಜನರ ಪರವಾಗಿ ಪ್ರಭುತ್ವದ ವಿರುದ್ಧವಾಗಿ ಬೀದಿಗಿಳಿದವರು. ತಾವು ಸ್ವಾತಂತ್ರ್ಯ ಚಳವಳಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೂಲಕವೇ ಸಾಮಾಜಿಕ ಕ್ಷೇತ್ರವನ್ನು ಪ್ರವೇಶಿಸಿದ್ದರೂ, ಅದರ ಜನವಿರೋಧಿ ನಡೆಗಳನ್ನು ಕಟುವಾಗಿ ಟೀಕಿಸಿದವರು. ತುರ್ತು ಪರಿಸ್ಥಿತಿಯ ವಿರುದ್ಧವೂ ಆಂದೋಲನಕ್ಕಿಳಿದು ಬಂಧನಕ್ಕೊಳಗಾದವರು. ಇದೇ ಅವರನ್ನು ಅವರ ಸಮಕಾಲೀನರಾದ ಇನ್ನೂ ಅನೇಕ ಹೋರಾಟಗಾರರಿಂದ ಭಿನ್ನವಾಗಿ ಎತ್ತರದ ಸ್ಥಾನದಲ್ಲಿ ನಿಲ್ಲಿಸುವಂಥದ್ದು.
ಇಷ್ಟೇ ಮಹತ್ವದ ಮತ್ತೂಂದು ವಿಚಾರ ಅವರ ನಡೆ-ನುಡಿ- ಚಿಂತನೆಗಳಲ್ಲಿರುವ ಏಕರೂಪತೆ. ಗಾಂಧೀಜಿಯವರು ಬೋಧಿಸಿದ ‘ಸ್ವಯಂಪ್ರೇರಣೆಯ ಬಡತನ’ವನ್ನು ತಮ್ಮ ಉಸಿರಿನಂತೆ ಆರಂಭದಿಂದ ಇಂದಿನ ದಿನದವರೆಗೂ ಪಾಲಿಸುತ್ತಾ ಬಂದವರು ಎಚ್.ಎಸ್.ದೊರೆಸ್ವಾಮಿಯವರು. ನಿಜವಾದ ಸಾಮಾಜಿಕ ಹೋರಾಟಗಾರ ಸ್ವಯಂಪ್ರೇರಣೆಯಿಂದ ಬಡತನವನ್ನು ಅಪ್ಪಿಕೊಳ್ಳಬೇಕು; ಸರಳವಾದ, ಕಠಿಣ ಶ್ರಮದ ಬದುಕು ನಡೆಸಬೇಕೆಂದು ಹೇಳುತ್ತಾ, ತಾವೂ ಹಾಗೆಯೇ ಬದುಕುತ್ತಾ ಇತರರನ್ನೂ ಪ್ರೇರೇಪಿಸಿದವರು. ಇಂದಿಗೂ ಬಾಡಿಗೆಯ ಮನೆಯಲ್ಲಿ ಅತ್ಯಂತ ಸರಳ ಸಹಜ ಬದುಕನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಒಂದು ಪ್ರಶಸ್ತಿಯೊಂದಿಗೆ 5 ಲಕ್ಷ ರೂ.ಗಳ ನಗದು ಬಂದಾಗ, ಒಂದು ಲಕ್ಷವನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ, ಮತ್ತೂಂದು ಲಕ್ಷವನ್ನು ಭೂಮಿ, ವಸತಿ ವಂಚಿತ ಬಡವರ ಹೋರಾಟಕ್ಕೆ ಕೊಡುಗೆಯಾಗಿ ನೀಡಿದರು. ಉಳಿದ ಹಣವನ್ನು ತಮ್ಮ ದೀರ್ಘ ಬದುಕಿನ ಪ್ರತಿ ಹಂತದಲ್ಲೂ ಬೆನ್ನೆಲುಬಾಗಿ ನಿಂತ ಬಾಳಸಂಗಾತಿಗೆ ತಮ್ಮ ಮೊಟ್ಟಮೊದಲ ಕಾಣಿಕೆಯಾಗಿ ಕೊಟ್ಟು ಆ ಹಣದ ಋಣದಿಂದಲೂ ಮುಕ್ತರಾದವರು ದೊರೆಸ್ವಾಮಿಯವರು. ಇಂತಹ ನಡೆ ನುಡಿಯ ಸಾದೃಶ್ಯ ಅತ್ಯಪೂರ್ವವೇ ಸರಿ!
ಅದೇ ರೀತಿ ಸಮಕಾಲೀನ ವಿಚಾರಗಳಿಗೆ ಸದಾ ತೆರೆದುಕೊಂಡಿದ್ದು ಅಂದಂದಿನ ಸಮಸ್ಯೆಗಳಿಗೆ ತಕ್ಕಂತೆ ಅಪ್ ಡೇಟೆಡ್ ಉತ್ತರ ಹುಡುಕುವ ಎಚ್ಚರದ ಮನಸ್ಥಿತಿಯೂ ಕೂಡಾ ಎಲ್ಲರಿಗೂ ಮಾದರಿಯಾಗುವಂಥದ್ದು. ಜಾತಿ ವ್ಯವಸ್ಥೆಯನ್ನು ವಿರೋಧಿಸುವ, ಇಂದಿನ ಸಂದರ್ಭದಲ್ಲಿ ಈ ದೇಶದ ದೊಡ್ಡ ಶತ್ರುವಾಗಿರುವ ಕೋಮುವಾದವನ್ನು ಟೀಕಿಸುವ, ಭೂರಹಿತ ಬಡಜನರ ಬದುಕಿನ ಅಗತ್ಯಗಳಿಗಾಗಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಂದಾಳಾಗಿ ಈ ಇಳಿವಯಸ್ಸಿನಲ್ಲೂ ಯಾವುದೇ ರಾಜಿಯಿಲ್ಲದ ಹೋರಾಟಕ್ಕಿಳಿಯುವ ದೊರೆಸ್ವಾಮಿಯವರ ಆಂತರಿಕ ಚೈತನ್ಯ ಮತ್ತು ನೈತಿಕ ಶಕ್ತಿಗೆ ಎಣೆಯೇ ಇಲ್ಲ.
ಕೈಗಾ ಅಣುಸ್ಥಾವರದ ಪ್ರಸ್ತಾಪ ಬಂದಾಗ ಅದರ ವಿರುದ್ಧವೂ ದೊರೆಸ್ವಾಮಿಯವರು ದನಿಯೆತ್ತಿದ್ದರು. ಶಿವರಾಮ ಕಾರಂತರ ಪರಿಸರ ಕಾಳಜಿಗೆ ಜೊತೆಗೂಡಿದ್ದರು. ಜಾಗತಿಕರಣದ ನಂತರದ ದಿನಗಳಲ್ಲಿ ಜಾಗತಿಕ ಬಂಡವಾಳಶಾಹಿ – ಕಾರ್ಪೊರೇಟ್ ಬಂಡವಾಳಿಗರ ವಿರುದ್ಧ, ಖ್ಯಾತ ಹೋರಾಟಗಾರ ಎ.ಟಿ. ರಾಮಸ್ವಾಮಿ ಅವರೊಂದಿಗೆ ಭೂಕಬಳಿಕೆಯ ವಿರುದ್ಧ, ಭ್ರಷ್ಟಾಚಾರದ ವಿರುದ್ಧ, ಮಂಡೂರಿನ ಕಸದ ಸಮಸ್ಯೆಯ ವಿರುದ್ಧ, ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ವಿರುದ್ಧ ದೊರೆಸ್ವಾಮಿಯವರು ದನಿಯೆತ್ತಿದವರು.
ಈ ಮಟ್ಟಕ್ಕೆ ತಮ್ಮ ದೇಶವನ್ನೂ, ದೇಶದ ಸಹಬಾಂಧವರನ್ನೂ ಪ್ರೀತಿಸುವ, ಅವರ ಒಳಿತಿಗಾಗಿಯೇ ತಮ್ಮ ಸರ್ವಸ್ವವನ್ನೂ ಅರ್ಪಿಸಿರುವ, ತಮ್ಮನ್ನು ತಾವೇ ತೇಯ್ದುಕೊಂಡು ಶ್ರಮಿಸಿರುವ ಸರಳ ಜೀವಿ ಅಸಾಮಾನ್ಯ ಹೋರಾಟಗಾರ ದೊರೆಸ್ವಾಮಿಯವರಿಗೀಗ 100 ವಸಂತಗಳು ತುಂಬಿದ ಸಂಭ್ರಮ. ಈ ಹಿರಿಜೀವದ ಸಾರ್ಥಕ ಬದುಕು ಇಡೀ ನಾಡಿಗೆ ಮಾದರಿ. ಆದ್ದರಿಂದಲೇ, ಅವರಿಗೆ ನೂರು ತುಂಬಿದ ಸಂದರ್ಭದಲ್ಲಿ ದೊರೆಸ್ವಾಮಿಯವರ ಅಭಿಮಾನಿಗಳೆಲ್ಲ ಸೇರಿಕೊಂಡು ಏಪ್ರಿಲ್ 9ರಂದು ಸಂತಸದ ಸಂಜೆಯ ಕಾರ್ಯಕ್ರಮವನ್ನು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮ ಯಶಸ್ವಿಯಾಗಬೇಕು; ಕರುನಾಡಿನ ಕಣ್ಮಣಿ ಹಿರಿಯ ಚೇತನ ದೊರೆಸ್ವಾಮಿಯವರಿಗೆ ನಮ್ಮೆಲ್ಲರ ಅಭಿನಂದನೆಗಳು ಸಲ್ಲಬೇಕು.
— ಮುತ್ತುರಾಜು ಮಾದೇಗೌಡನಕೊಪ್ಪಲು, ಮಂಡ್ಯ