Advertisement

500 ಗ್ರಾ.ಪಂಗಳಲ್ಲಿ ಉಚಿತ ವೈ-ಫೈ ಸೇವೆ

11:31 AM Nov 17, 2017 | Team Udayavani |

ಬೆಂಗಳೂರು: ಹೊಸದಾಗಿ ಬೆಳವಣಿಗೆ ಹೊಂದುತ್ತಿರುವ ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳ ಸ್ಥಾಪನೆ ಜತೆಗೆ ಗ್ರಾಮೀಣ ಪ್ರದೇಶಕ್ಕೂ ತಂತ್ರಜ್ಞಾನ ಬೆಸೆಯುವ ಕಾರ್ಯಕ್ಕೆ ಆದ್ಯತೆ ನೀಡಲಾಗಿದ್ದು, 500 ಗ್ರಾಮ ಪಂಚಾಯಿತಿಗಳಲ್ಲಿ ಉಚಿತ ವೈ-ಫೈ ಸೇವೆಗೆ ಚಾಲನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ರಾಜ್ಯ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಸಾಫ್ಟ್ವೇರ್‌ ಟೆಕ್ನಾಲಜಿ ಪಾರ್ಕ್‌ ಆಫ್ ಇಂಡಿಯಾ ಸಹಯೋಗದಲ್ಲಿ ಬೆಂಗಳೂರು ಅರಮನೆಯಲ್ಲಿ ಆಯೋಜಿಸಿರುವ “ಬೆಂಗಳೂರು ಟೆಕ್‌ ಸಮ್ಮಿಟ್‌’ಗೆ ಗುರುವಾರ ವಿದ್ಯುಕ್ತ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದ ಎಲ್ಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವೈಫೈ ಸೌಲಭ್ಯ ಕಲ್ಪಿಸುವ ಯೋಜನೆ ರೂಪಿಸಲಾಗಿದ್ದು, ಪ್ರಸಕ್ತ ವರ್ಷದಲ್ಲಿ 2,650 ಗ್ರಾಮ ಪಂಚಾಯ್ತಿಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸಲಾಗುವುದು. ಮೊದಲ ಹಂತದಲ್ಲಿ 500 ಗ್ರಾಮ ಪಂಚಾಯ್ತಿಗಳಲ್ಲಿ ವೈಫೈ ಸೇವೆ ಕಲ್ಪಿಸಲಾಗಿದೆ ಎಂದು ಹೇಳಿದರು.

ವಿಶ್ವ ಆರ್ಥಿಕ ವೇದಿಕೆ ಮಾಹಿತಿ ಪ್ರಕಾರ ಬೆಂಗಳೂರು, ಜಗತ್ತಿನ 25 ಹೈಟೆಕ್‌ ನಗರಗಳಲ್ಲಿ ಸ್ಥಾನ ಪಡೆದಿದೆ. ಕೈಗಾರಿಕೆಗಳ ಸ್ಥಾಪನೆಯಲ್ಲಿ ಮುಂಚೂಣಿ ಸ್ಥಾನ ಕಾಯ್ದುಕೊಳ್ಳುವ ಜತೆಗೆ ಕರ್ನಾಟಕವನ್ನು ಜಾಗತಿಕ ತಂತ್ರಜ್ಞಾನದ ತಾಣವನ್ನಾಗಿ ರೂಪಿಸುವ ಆಶಯವಿದೆ. ಜತೆಗೆ ಹೊಸದಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳ ಸ್ಥಾಪನೆಯಲ್ಲೂ ಮುಂಚೂಣಿ ಸ್ಥಾನ ಪಡೆಯಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ತಿಳಿಸಿದರು.

ಎಲ್ಲರನ್ನು ಒಳಗೊಂಡ ಪ್ರಗತಿ ಸಾಧಿಸುವ ಸಲುವಾಗಿ ವೈದ್ಯ ತಂತ್ರಜ್ಞಾನ ಹಾಗೂ ಕೃಷಿ ತಂತ್ರಜ್ಞಾನ ಬಳಕೆಗೆ ಆದ್ಯತೆ ನೀಡಲಾಗಿದೆ. ಮೈಸೂರು, ಮಂಗಳೂರು, ಕಲಬುರಗಿ, ಹುಬ್ಬಳ್ಳಿ- ಧಾರವಾಡದಲ್ಲಿ ಹೊಸ ಪ್ರತಿಭೆ ಅಭಿವೃದ್ಧಿ ಕೇಂದ್ರಗಳು, ಇನ್‌ಕುಬೇಷನ್‌ ಸೌಲಭ್ಯ ಕಲ್ಪಿಸುವ ಕಾರ್ಯಕ್ಕೆ ಒತ್ತು ನೀಡಲಾಗಿದೆ. ದೇವನಹಳ್ಳಿಯಲ್ಲಿ ಹಾರ್ಡ್‌ವೇರ್‌ ಪಾರ್ಕ್‌, ಮಂಗಳೂರಿನಲ್ಲಿ ಐಟಿ ವಿಶೇಷ ಆರ್ಥಿಕ ವಲಯ, ಹುಬ್ಬಳ್ಳಿಯಲ್ಲಿ ಆರ್ಯಭಟ ಪಾರ್ಕ್‌ ಸೇರಿದಂತೆ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಹಲವು ಇನ್‌ಕುÂಬೇಟರ್‌ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

Advertisement

ಯುವ ಯುಗ: ಭವಿಷ್ಯದ ಬೆಳವಣಿಗೆಗೆ ಪೂರಕವಾಗಿ ಯುವಜನತೆಯನ್ನು ಸಜ್ಜುಗೊಳಿಸಲು ಯುವ ಯುಗ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ಜತೆಗೆ ಐಟಿ, ಎಲೆಕ್ಟ್ರಾನಿಕ್ಸ್‌ ಹಾಗೂ ಟೆಲಿಕಾಂ ಸೇವೆಗಳಲ್ಲಿ ಮಧ್ಯಮ ಹಂತದ ಉದ್ಯೋಗಗಳನ್ನು ಪಡೆಯಲು ಸಜ್ಜುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಇದೀಗ ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲೂ ಹೊಸ ಯೋಚನೆಗಳ ವಿನಿಮಯ, ಚರ್ಚೆಯ ಮೂಲಕ ರಾಜ್ಯದಲ್ಲಿ ತಂತ್ರಜ್ಞಾನ ಬೆಳವಣಿಗೆ ಹಾಗೂ ಬಳಕೆಗೆ ಸಹಕಾರಿಯಾಗಲಿ ಎಂದು ಆಶಿಸಿದರು. ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಮಾತನಾಡಿ “ರಾಜ್ಯದ ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ಸದ್ಯ 15 ಲಕ್ಷ ಉದ್ಯೋಗಿಗಳಿದ್ದಾರೆ.

ಸುಮಾರು 25,000 ಕಂಪನಿಗಳಿದ್ದು, 7000ಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗ್ಳಿವೆ. ಆ ಮೂಲಕ 45 ಶತಕೋಟಿ ಡಾಲರ್‌ನಷ್ಟು ರಫ್ತು ಆದಾಯ ಗಳಿಸುತ್ತಿದೆ. ಪ್ರತಿ ವರ್ಷವೂ ಐಟಿ ಹಾಗೂ ಸ್ಟಾರ್ಟ್‌ಅಪ್‌ಗ್ಳಿಂದ 1.50 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದು, ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ಜಗತ್ತಿನಲ್ಲಿ “ಡಿಜಿಟಲ್‌ ಹೋಸ್ಟಿಂಗ್‌ ಆಫ್ ಬಿಸಿನೆಸ್‌’ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ 45 ಅತ್ಯುತ್ತಮ ನಗರಗಳಲ್ಲಿ ಬೆಂಗಳೂರು ಸ್ಥಾನ ಪಡೆದಿದ್ದು, ಸ್ಯಾನ್‌ಫ್ರಾನ್ಸಿಸ್ಕೋ, ಟೋಕಿಯೋವನ್ನು ಹಿಂದಿಕ್ಕಿದೆ. ಆವಿಷ್ಕಾರ ಆಧಾರಿತ ಆರ್ಥಿಕತೆ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕವು ಉದ್ಯೋಗಾಕಾಂಕ್ಷಿಗಳ ರಾಜ್ಯದಿಂದ ಉದ್ಯೋಗ ಸೃಷ್ಟಿಸುವವರ ರಾಜ್ಯವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸರ್ವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.

ಅಮೆರಿಕದಲ್ಲಿ ಜಿಡಿಪಿಯ ಶೇ.2, ಕೊರಿಯಾದಲ್ಲಿ ಶೇ.4 ಹಾಗೂ ಚೀನಾದಲ್ಲಿ ಶೇ.3ರಷ್ಟು ಮೊತ್ತವನ್ನು ಸಂಶೋಧನೆಗೆ ಬಳಸಲಾಗುತ್ತಿದೆ.ದೇಶದಲ್ಲಿ ಜಿಡಿಪಿಯ ಶೇ.0.8ರಷ್ಟನ್ನು ಸಂಶೋಧನೆಗೆ ವೆಚ್ಚ ಮಾಡಲಾಗುತ್ತಿದೆ. ಇನ್ನು ಮುಂದಾದರೂ ಸಂಶೋಧನೆಗೆ ಹೆಚ್ಚಿನ ಹಣ ವಿನಿಯೋಗಿಸಬೇಕು. ಖಾಸಗಿ ಅನುದಾನವನ್ನು ಬಳಸಿಕೊಳ್ಳಲೂ ಚಿಂತಿಸಬೇಕಿದೆ.

ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಇನ್‌ಕುಬೇಷನ್‌ ಸೆಂಟರ್‌ಗಳು ಸ್ಥಾಪನೆಯಾಗಬೇಕಿದೆ ಎಂದು ಹೇಳಿದರು. ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ಐಬಿಎಂ ಇಂಡಿಯಾದ ಅಧ್ಯಕ್ಷೆ ವನಿತಾ ನಾರಾಯಣನ್‌, ರೋಲ್ಸ್‌ ರಾಯ್ಸ ಕಂಪನಿಯ ಸ್ಟ್ರಾಟೆಜಿಕ್‌ ಮಾರ್ಕೆಟಿಂಗ್‌ ಡೈರೆಕ್ಟರ್‌ ಬೆನ್‌ ಸ್ಟೋರಿ, ಐಟಿಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ, ನಿರ್ದೇಶಕಿ ಸಲ್ಮಾಂ ಫಾಹಿಂ ಇತರರು ಉಪಸ್ಥಿತರಿದ್ದರು.

ಶಿಕ್ಷಣ, ಸಂವಹನ ಹಾಗೂ ತಂತ್ರಜ್ಞಾನಕ್ಕೆ ಫಿನ್‌ಲ್ಯಾಂಡ್‌ ಕೂಡ ಆದ್ಯತೆ ನೀಡಿದ್ದು, ಹೊಸ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲಾಗುತ್ತಿದೆ. 5ಜಿ ತಂತ್ರಜ್ಞಾನ, ವೈರ್‌ಲೆಸ್‌ ಸೇವೆಗಳ ಬಳಕೆ ಮೂಲಕ ಸುಧಾರಿತ ಸೌಲಭ್ಯ ಕಲ್ಪಿಸಲು ಒತ್ತು ನೀಡಲಾಗಿದೆ.
-ಆ್ಯನ್‌ ಬರ್ನರ್‌, ಫಿನ್‌ಲ್ಯಾಂಡ್‌ ಸಾರಿಗೆ, ಸಂವಹನ ಸಚಿವೆ

ದೇಶದಲ್ಲಿನ ಜೈವಿಕ ತಂತ್ರಜ್ಞಾನ ಕಂಪನಿಗಳ ಪೈಕಿ ಶೇ.40ರಷ್ಟು ಬೆಂಗಳೂರಿನಲ್ಲೇ ಇವೆ. ಸದ್ಯ ಜೈವಿಕ ತಂತ್ರಜ್ಞಾನ ಕ್ಷೇತ್ರವು 42 ಶತಕೋಟಿ ಡಾಲರ್‌ ವಹಿವಾಟು ನಡೆಸುತ್ತಿದ್ದು, 2025ರ ಹೊತ್ತಿಗೆ ಈ ಮೊತ್ತವನ್ನು 100 ಶತಕೋಟಿ ಡಾಲರ್‌ಗೆ ವಿಸ್ತರಿಸುವ ಗುರಿ ಇದೆ.
-ಕಿರಣ್‌ ಮಜುಂದಾರ್‌ ಶಾ, ಬಯೋಕಾನ್‌ ಮುಖ್ಯಸ್ಥೆ

ಬೆಂಗಳೂರು ದೇಶದ ಸಂಶೋಧನೆ ಮತ್ತು ಅಭಿವೃದ್ಧಿ ರಾಜಧಾನಿ, ಸ್ಟಾರ್ಟ್‌ಅಪ್‌ ರಾಜಧಾನಿಯಾಗುವತ್ತ ದಿಟ್ಟ ಹೆಜ್ಜೆ ಇರಿಸಿದೆ. ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಹಾಗೂ ಪೂರಕ ನಿಯಂತ್ರಣ, ಮೇಲ್ವಿಚಾರಣಾ ಕ್ರಮಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕಿದೆ.
-ಆರ್‌.ಚಂದ್ರಶೇಖರ್‌, ನ್ಯಾಸ್ಕಾಂ ಅಧ್ಯಕ್ಷ

ಸರ್ಕಾರ ಹಾಗೂ ಖಾಸಗಿ ಕಂಪನಿಗಳು ಒಟ್ಟಾಗಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗೆ ಮುಂದಾಗಿರುವುದರಿಂದ ಸಾಕಷ್ಟು ಯಶಸ್ಸು ಕಾಣುತ್ತಿದ್ದೇವೆ. ಆಡಳಿತದಲ್ಲೂ ಮಾಹಿತಿ ತಂತ್ರಜ್ಞಾನ ಬಳಸುತ್ತಿದ್ದು, ರಾಜ್ಯದಲ್ಲಿ 6000 ಗ್ರಾ.ಪಂ ವ್ಯಾಪ್ತಿಯಲ್ಲಿ ವೈ-ಫೈ ಕಲ್ಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
-ಸುಭಾಷ್‌ಚಂದ್ರ ಕುಂಟಿಯಾ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ

ಹೊಸ ಪೀಳಿಗೆಯ ತಂತ್ರಜ್ಞಾನದ ಬಳಕೆಗೆ ಪೂರಕವಾಗಿ ಶೈಕ್ಷಣಿಕ ಹಂತದಲ್ಲೇ ಯುವಜನತೆಯನ್ನು ಸಜ್ಜುಗೊಳಿಸುವ ಕೆಲಸ ಆಗಬೇಕಿದೆ. ಬೆಂಗಳೂರು ಮಾತ್ರವಲ್ಲದೇ ಇತರೆ ದ್ವೀತಿಯ ಹಂತದ ನಗರಗಳಲ್ಲೂ ತಂತ್ರಜ್ಞಾನ ಬಳಕೆ, ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಬೇಕಿದೆ.
-ಕ್ರಿಸ್‌ ಗೋಪಾಲಕೃಷ್ಣ, ಇನ್ಫೋಸಿಸ್‌ ಸಹ ಸ್ಥಾಪಕ

ಸ್ಯಾಮ್‌ಸಂಗ್‌ ಕಂಪನಿ ಬೆಂಗಳೂರಿನಲ್ಲೇ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಹೊಂದಿದ್ದು, ಬೆಂಗಳೂರಿನ ಎಂಜಿನಿಯರ್‌ಗಳೇ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಗ್ರಾಹಕರ ಪ್ರತಿಕ್ರಿಯೆ, ನಿರೀಕ್ಷೆಗಳನ್ನೇ ಕೇಂದ್ರವಾಗಿಸಿಕೊಂಡು ಮಾರ್ಪಾಡು, ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ.
-ದೀಪೇಶ್‌ ಶಾ, ಎಂಡಿ, ಸ್ಯಾಮ್‌ಸಂಗ್‌ ಆರ್‌ ಆ್ಯಂಡ್‌ ಡಿ

Advertisement

Udayavani is now on Telegram. Click here to join our channel and stay updated with the latest news.

Next