ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನತೆಗೆ ಉಚಿತ ಇಂಟರ್‌ನೆಟ್ ಸೇವೆ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಉಚಿತ ಬೆಂಗಳೂರು ವೈ-ಫೈ’ ಯೋಜನೆಗೆ ಕೊನೆಗೂ ಚಾಲನೆ ನೀಡಲು ಬಿಬಿಎಂಪಿ ಸಿದ್ಧವಾಗಿದ್ದು, ಜನವರಿಯಲ್ಲಿ 800 ಸ್ಥಳಗಳಲ್ಲಿ ವೈ-ಫೈ ಸೇವೆ ಒದಗಿಸಲು ತೀರ್ಮಾನಿಸಿದೆ.
ಬಿಬಿಎಂಪಿ ಆಯುಕ್ತರು ಟೆಲಿಕಾಂ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿದ ಬಳಿಕ ಸ್ಮಾರ್ಟ್‌ಪೋಲ್‌ಗಳ ಬದಲಿಗೆ, ಹಾಟ್ ಸ್ಪಾರ್ಟ್ ಡಿವೈಸ್ ಅಳವಡಿಸಲು ಅವಕಾಶ ಮಾಡಿಕೊಡಲಾಗಿದೆ. ಆ ಹಿನ್ನೆಲೆಯಲ್ಲಿ ವೈ-ಫೈ ಸೇವೆ ಒದಗಿಸಲು ಸಂಸ್ಥೆಗಳು ಮುಂದಾಗಿದ್ದು, ಜನವರಿ ಅಂತ್ಯದ ವೇಳೆಗೆ 800 ಸ್ಥಳಗಳಲ್ಲಿ ಜನರಿಗೆ ಉಚಿತ ವೈ-ಫೈ ಸೇವೆ ದೊರೆಯಲಿದೆ. ಜತೆಗೆ ಏಪ್ರಿಲ್ ವೇಳೆಗೆ ನಗರದ 3 ಸಾವಿರ ಸ್ಥಳಗಳಲ್ಲಿ ವೈ-ಫೈ ಸೇವೆ ದೊರೆಯಲಿದೆ.
ಸರ್ಕಾರದಿಂದ ಇಂಡಸ್ ಟವರ್, ಹನಿಕಾಂಬ್, ಡಿ-ವೊಯಾಸ್ ಹಾಗೂ ಎಸಿಟಿ ಟೆಲಿಕಾಂ ಸಂಸ್ಥೆಗಳಿಗೆ ನಗರದ 5,938 ಕಡೆಗಳಲ್ಲಿ ಉಚಿತ ವೈ-ಫೈ ಸೇವೆ ಒದಗಿಸಲು ಹಾಟ್‌ಸ್ಪಾಟ್‌ಗಳನ್ನು ಹಾಕಲು ಅನುಮತಿ ನೀಡುವಂತೆ ಸುತ್ತೋಲೆ ಹೊರಡಿಸಿತ್ತು. ಆ ಹಿನ್ನೆಲೆಯಲ್ಲಿ ಸಂಸ್ಥೆಗಳಿಗೆ ಪಾಲಿಕೆಯಿಂದ ಅನುಮತಿ ನೀಡಲಾಗುತ್ತಿದೆ.
ಬಿಬಿಎಂಪಿ ಕೇಂದ್ರ ಕಚೇರಿ, ರಾಜಭವನ ರಸ್ತೆ, ಕಸ್ತೂರಬಾ ರಸ್ತೆ ಸೇರಿ ನಗರದ ಹತ್ತಾರು ಕಡೆಗಳಲ್ಲಿ ಇಂಡಸ್ ಟವರ್ ಸಂಸ್ಥೆ ಉಚಿತ ವೈ-ಫೈ ಸ್ಮಾರ್ಟ್‌ಪೋಲ್‌ಗಳನ್ನು ಅಳವಡಿಸಿದೆ. ಆದರೆ, ಪೋಲ್ ಅಳವಡಿಕೆಗೆ ಹೆಚ್ಚು ಖರ್ಚಾಗುತ್ತದೆ ಎಂಬ ಕಾರಣದಿಂದ ಹಾಟ್ ಸ್ಪಾಟ್ ಡಿವೈಸ್‌ಗಳ ಅಳವಡಿಕೆಗೆ ಸಂಸ್ಥೆಗಳು ಮುಂದಾಗಿವೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದರು. ಬೆಂಗಳೂರಿನ 400 ಕಡೆಗಳಲ್ಲಿ ಉಚಿತ ವೈ-ಫೈ ‘ಸ್ಮಾರ್ಟ್ ಪೋಲ್ ‘ಗಳನ್ನು ಅಳವಡಿಸಿ ಆ ಮೂಲಕ ಜನರಿಗೆ ಉಚಿತವಾಗಿ ಇಂಟರ್‌ಸೇವೆ ಒದಗಿಸಲು ಸರ್ಕಾರ ಯೋಜನೆಯಾಗಿತ್ತು. ಆದರೆ, ಸ್ಮಾರ್ಟ್ ಫೋಲ್ ಅಳವಡಿಕೆಗೆ ಪಾಲಿಕೆಗೆ ಹೆಚ್ಚಿನ ಶುಲ್ಕ ಪಾವತಿಸಬೇಕಾದ ಹಿನ್ನೆಲೆಯಲ್ಲಿ ಟೆಲಿಕಾಂ ಸಂಸ್ಥೆಗಳು ಉಚಿತ ಇಂಟರ್‌ನೆಟ್ ಸೇವೆ ಒದಗಿಸಲು ಮುಂದಾಗಿರಲಿಲ್ಲ. ಪಾಲಿಕೆಗೆ 48 ಕೋಟಿ ರೂ. ಆದಾಯ: ಉಚಿತ ವೈ-ಫೈ ಸೇವೆ ಒದಗಿಸುವ ಪ್ರತಿಯೊಂದು ಡಿವೈಸ್‌ಗೆ ಸಂಸ್ಥೆಗಳು 62,000 ರೂ. ಒಎಫ್ಸಿ ಶುಲ್ಕವನ್ನು ಪಾಲಿಕೆಗೆ ಪಾವತಿಸಬೇಕು. ಇದರೊಂದಿಗೆ ಶೇ.18ರಷ್ಟು ಜಿಎಸ್‌ಟಿ ಸೇರಿ ಪ್ರತಿ ಪೋಲ್‌ಗೆ ಒಟ್ಟು 73,160 ಕೋಟಿ ರೂ. ಪಾವತಿಸಬೇಕಾಗಿದ್ದು, ಐದು ವರ್ಷಗಳ ಅವಧಿಗೆ ಅನುಮತಿ ನೀಡಲಾಗುತ್ತಿದೆ. ಅದರಂತೆ ನಗರದ 5,938 ಕಡೆಗಳಲ್ಲಿ ಡಿವೈಸ್ ಅಳವಡಿಸಲು ಅನುಮತಿ ನೀಡುವುದರಿಂದ ಪಾಲಿಕೆಗೆ 48 ಕೋಟಿ ರೂ. ಆದಾಯ ಬರಲಿದೆ.
ಅರ್ಧ ಗಂಟೆ ಉಚಿತ
ಟೆಲಿಕಾಂ ಸಂಸ್ಥೆಗಳು ದಿನ ಮೊದಲ ಅರ್ಧ ಗಂಟೆ ಮಾತ್ರ ಉಚಿತ ವೈ-ಫೈ ಸೇವೆಯನ್ನು ಒದಗಿಸಲಿದ್ದು, ಅದಾದ ಬಳಿಕವೂ ವೈ-ಫೈ ಸೇವೆ ಬಯಸುವ ಸಾರ್ವಜನಿಕರು ಇಂತಿಷ್ಟು ಹಣವನ್ನು ಸಂಸ್ಥೆಗಳಿಗೆ ಪಾವತಿಸಬೇಕಾಗುತ್ತದೆ. ಜತೆಗೆ ಮೊದಲ ಅರ್ಧ ಗಂಟೆಯೂ ಎಷ್ಟು ಎಂಬಿ ನೀಡಬೇಕು, ಎಷ್ಟು ಸ್ಪೀಡ್ ಇರಬೇಕು ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ.
ಕೆಲವು ಟೆಲಿಕಾಂ ಸಂಸ್ಥೆಗಳು ಈಗಾಗಲೇ 3 ಸಾವಿರಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಉಚಿತ ವೈ-ಫೈ ಸೇವೆ ಒದಗಿಸುವ ಡಿವೈಸ್ ಅಳವಡಿಸಲು ಅನುಮತಿ ಪಡೆದುಕೊಂಡಿದ್ದು, ಜನವರಿ ಅಂತ್ಯದ ವೇಳೆಗೆ 800 ಕಡೆಗಳಲ್ಲಿ ಸೇವೆ ಆರಂಭವಾಗಲಿದೆ. ಜತೆಗೆ ಏಪ್ರಿಲ್ ವೇಳೆಗೆ 3 ಸಾವಿರ ಕಡೆಗಳಲ್ಲಿ ಉಚಿತವ ವೈ-ಫೈ ದೊರೆಯಲಿದೆ.
●
ಎನ್.ಮಂಜುನಾಥ ಪ್ರಸಾದ್,
ಬಿಬಿಎಂಪಿ ಆಯುಕ್ತ