Advertisement

ದಲಿತ ಕಾಲೋನಿಗಳಿಗೂ ಉಚಿತ ನೀರು 

12:47 PM May 27, 2017 | Team Udayavani |

ಬೆಂಗಳೂರು: “ಕೊಳೆಗೇರಿಗಳಲ್ಲಿ ವಾಸವಾಗಿರುವ ಪ್ರತಿಯೊಬ್ಬರಿಗೂ ಮಾಸಿಕ ಹತ್ತು ಸಾವಿರ ಲೀಟರ್‌ ನೀರನ್ನು ಉಚಿತವಾಗಿ ಪೂರೈಸುವ ಯೋಜನೆಯನ್ನು ನಗರದಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾಲೋನಿಗಳಿಗೂ ವಿಸ್ತರಿಸಲಾಗುತ್ತದೆ,’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಘೋಷಣೆ ಮಾಡಿದ್ದಾರೆ. 

Advertisement

ಬೆಂಗಳೂರು ಜಲಮಂಡಳಿ ಶುಕ್ರವಾರ ಗಾಂಧಿನಗರ ವಿಧಾನ ಸಭಾ ಕ್ಷೇತ್ರದ ಶ್ರೀರಾಮಪುರದ ಡಾ.ಬಿ.ಆರ್‌.ಅಂಬೇಡ್ಕರ್‌ ಆಟದ ಮೈದಾನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಉಚಿತ ನೀರು ಪೂರೈಸುವ ಈ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, “ನಗರದ ಕೊಳೆಗೇರಿಗಳಲ್ಲಿ 70,947 ಮನೆಗಳು ಜಲಮಂಡಳಿಯಿಂದ ನೀರಿನ ಸಂಪರ್ಕ ಪಡೆದಿವೆ. ಸಂಪರ್ಕ ಪಡೆದ ಪ್ರತಿ ಮನೆಗೆ ತಿಂಗಳಿಗೆ 10 ಸಾವಿರ ಲೀಟರ್‌ ಕುಡಿಯುವ ನೀರನ್ನು ಉಚಿತವಾಗಿ ಪೂರೈಕೆಮಾಡಲಾಗುವುದು. ಜತೆಗೆ ಹಲವು ವರ್ಷಗಳಿಂದ ಅವರು ಬಾಕಿ ಉಳಿಸಿಕೊಂಡ ನೀರಿನ ಬಿಲ್‌ ಅನ್ನು ಮನ್ನಾ ಮಾಡಲಾಗಿದೆ. ಅದೇ ರೀತಿ, ಉಳಿದ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಯೋಜನೆ ವಿಸ್ತರಿಸಲಾಗುವುದು,’ ಎಂದು ಹೇಳಿದರು. 

“ಪರಿಶಿಷ್ಟ ಜಾತಿ ಮತ್ತು ಪಂಗಡದ ಹೆಚ್ಚಿನ ಜನರು ವಾಸಿಸುವ ಪ್ರದೇಶಗಳು, ಅಲ್ಲಿ ಎಷ್ಟು ನೀರಿನ ಸಂಪರ್ಕಗಳಿವೆ ಎಂಬುದನ್ನು ಸರ್ವೆ ನಡೆಸಿ ಪಟ್ಟಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಪಟ್ಟಿ ಸಿದ್ಧಪಡಿಸಿದ ಕೂಡಲೇ ಅವರಿಗೂ ಯೋಜನೆ ಅನ್ವಯವಾಗಲಿದೆ,’ ಎಂದು ಮಾಹಿತಿ ನೀಡಿದರು. 

ಕೊಳಗೇರಿ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದವರು ಉಳಿಸಿಕೊಂಡಿದ್ದ ನೀರಿನ ಬಾಕಿ ಬಿಲ್‌ 24 ಕೋಟಿ ರೂ. ಹಾಗೂ 16 ಕೋಟಿ ರೂ.ಬಡ್ಡಿಯನ್ನು ಸರ್ಕಾರ ಮನ್ನಾ ಮಾಡಿದ್ದು, ಮೊತ್ತವನ್ನು ಸರ್ಕಾರದಿಂದ ಜಲಮಂಡಳಿಗೆ ನೀಡಲಾಗಿದೆ ಎಂದು ನುಡಿದರು.

Advertisement

ಅಭಿವೃದ್ಧಿ ಕೆಲಸಗಳು ಗೋಚರ: ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಮೂಹ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಹೊಸ ಬಸ್‌ಗಳ ಖರೀದಿ, ಮೆಟ್ರೋ ಮೊದಲ ಹಂತ ಪೂರ್ಣಗೊಳಿಸಲಾಗುತ್ತಿದೆ. ಇದರೊಂದಿಗೆ ನಗರದ ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಡಿಸೆಂಬರ್‌-ಜನವರಿ ವೇಳೆಗೆ ಸರ್ಕಾರದಿಂದ ನಗರದಲ್ಲಿ ಕೈಗೊಂಡಿರುವ ಕೆಲಸಗಳು ಜನರಿಗೆ ಗೋಚರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, “ಸಿದ್ದರಾಮಯ್ಯ ಅವರು ಅಧಿಕಾರಿ ಸ್ವೀಕರಿಸಿದ ದಿನದಿಂದ ಬಡವರು, ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಅವುಗಳ ಅನುಷ್ಠಾನಕ್ಕೆ ಆದ್ಯತೆ ನೀಡಿದ್ದಾರೆ,’ ಎಂದು ಹೇಳಿದರು. 

 ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಶಾಸಕ ಡಾ.ಅಶ್ವತ್ಥನಾರಾಯಣ, ವಿಧಾನ ಪರಿಷತ್‌ ಸದಸ್ಯರಾದ ಗೋವಿಂದರಾಜು, ನಾರಾಯಣಸ್ವಾಮಿ, ರಿಜ್ವಾನ್‌ ಅರ್ಷದ್‌, ಮೇಯರ್‌ ಜಿ.ಪದ್ಮಾವತಿ, ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳು ಹೊಗಳಿದ ಸುರೇಶ್‌ ಕುಮಾರ್‌!
ಅತ್ಯಂತ ಸಂತೋಷ ಉಂಟು ಮಾಡುವ, ಹಿತ ನೀಡುವಂತಹ ಕಾರ್ಯವನ್ನು ಮುಖ್ಯಮಂತ್ರಿಗಳು ಮಾಡಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅತ್ಯಗತ್ಯವಾಗಿ ಆಗಲೇ ಬೇಕಾದಂತಹದ ಕಾರ್ಯವಾದ ಕೊಳಚೆ ಪ್ರದೇಶಗಳ ಜನರಿಗೆ ಕುಡಿಯುವ ನೀರು ಉಚಿತವಾಗಿ ಒದಗಿಸುವ ಕಾರ್ಯವನ್ನು ಮುಖ್ಯಮಂತ್ರಿಗಳು ಜಾರಿ ಮಾಡಿರುವುದು ಸಂತಸ ತಂದಿದ್ದು, ಉಳಿದ ಪ್ರದೇಶಗಳಲ್ಲಿನ ಬಡವರಿಗೂ ಯೋಜನೆ ತಲುಪಬೇಕು ಎಂದು ಬಿಜೆಪಿ ಶಾಸಕ ಎಸ್‌.ಸುರೇಶ್‌ ಕುಮಾರ್‌ ಮುಖ್ಯಮಂತ್ರಿಗಳ ಕಾರ್ಯ ಶ್ಲಾ ಸಿದರು.
 
ಕೆರೆಗಳ ರಕ್ಷಣೆಗೆ ಬದ್ಧ
ನಗರದಲ್ಲಿ ಕೆರೆಗಳ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಆ ಹಿನ್ನೆಲೆಯಲ್ಲಿ ವಿಧಾನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರ ಅಧ್ಯಕ್ಷತೆಯಲ್ಲಿ ಕೆರೆ ಸದನ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯಿಂದ ವರದಿ ಸಲ್ಲಿಕೆಯಾದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next