ಬೆಳಗಾವಿ: ನಗರದಲ್ಲಿ ಡೆಂಘೀ, ಚಿಕೂನ್ ಗುನ್ಯಾ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಗುರು ವಿವೇಕಾನಂದ ಸೇವಾ ಟ್ರಸ್ಟ್ ಅಧ್ಯಕ್ಷ ನಾರಾಯಣ ನಾಯ್ಕ ಹೇಳಿದರು.
ನಗರದ ಖಡಕ್ ಗಲ್ಲಿಯಲ್ಲಿ ಗುರು ವಿವೇಕಾನಂದ ಸೇವಾ ಟ್ರಸ್ಟ್ ವತಿಯಿಂದ ರವಿವಾರ ನಡೆದ ಉಚಿತ ಡೆಂಘೀ ಲಸಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪರಿಸರ ಸ್ವಚ್ಛವಾಗಿದ್ದರೆ ಆರೋಗ್ಯ ಸದೃಢವಾಗಿರುತ್ತದೆ. ಈ ಬಗ್ಗೆ ಎಲ್ಲರು ಮುತುವರ್ಜಿ ವಹಿಸಬೇಕು ಎಂದು ಹೇಳಿದರು.
ಮಾಂಸ ಖಂಡಗಳು ಗಟ್ಟಿಯಾದಾಗ ಮಾತ್ರ ಹೋರಾಡಲು ಸಾಧ್ಯ ಎಂದು ಸ್ವಾತಂತ್ರ್ಯ ಪೂರ್ವದಲ್ಲಿ ವಿವೇಕಾನಂದರು ಹೇಳುತ್ತಿದ್ದರು. ಆರೋಗ್ಯ ಚೆನ್ನಾಗಿರಬೇಕಾದರೆ ರೋಗಗಳನ್ನು ತಡೆಗಟ್ಟಬೇಕಾಗುತ್ತದೆ. ಸಾಂಕ್ರಾಮಿಕ ರೋಗಗಳು ಹರಡದಂತೆ ಎಲ್ಲರೂ ಕಾಳಜಿ ವಹಿಸಬೇಕು. ಮಳೆಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಡೆಂಘೀ, ಚಿಕೂನ್‌ಗುನ್ಯಾ ಕುರಿತು ನಾಗರಿಕಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಗುರು ವಿವೇಕಾನಂದರ ಆಶಯದಂತೆ ಟ್ರಸ್ಟ್ ಈಗಾಗಲೇ ಸಮಾಜಮುಖೀ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಸುಮಾರು 200 ಬಡ ಪ್ರತಿಭಾಂತ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಸಹ ನೀಡಿದೆ. ಆ ವಿದ್ಯಾರ್ಥಿಗಳು ಈಗ ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ಇದೇ ರೀತಿ ಆರೋಗ್ಯ ಕ್ಷೇತ್ರಕ್ಕೂ ಅನೇಕ ಕೊಡುಗೆ ನೀಡಲಾಗಿದೆ ಎಂದರು. ಖಡಕ ಗಲ್ಲಿಯ ಹಿರಿಯರಾದ ವೈಜು ಜಾಧವ ಮಾತನಾಡಿ, ಜಿಲ್ಲಾದ್ಯಂತ ರೋಗಗಳು ಹರಡುತ್ತಿವೆ. ಅದಕ್ಕಾಗಿ ಸಾರ್ವಜನಿಕರು ತಮ್ಮ ಮಕ್ಕಳ ಬಗ್ಗೆ ಗಮನ ಹರಿಸಿ ಎಲ್ಲ ಕಡೆಗೂ ಸ್ವಚ್ಛತೆ ಕಾಪಾಡಿಕೊಂಡು ಹೋಗಬೇಕು. ಮುಂಬರುವ ದಿನಗಳಲ್ಲಿ ರೋಗಗಳು ಹರಡದಂತೆ ಜಾಗೃತರಾಗಬೇಕು ಎಂದರು.
ಪದಾಧಿಕಾರಿಗಳಾದ ಡಾ| ವೈ.ಬಿ. ಘಸಾರಿ, ಭಾರತಿ ಶೆಟ್ಟಿಗಾರ, ಮುನಿರಾಜು ಜೈನ್, ಮಹಾವೀರ ಜೈನ್, ರಾಜೇಶ ಗೌಡ, ವಿಶಾಲ ಪಾಟೀಲ, ಆನಂದ ಶೆಟ್ಟಿ, ಅಂಜನಕುಮಾರ ಗಂಡಗುದ್ರಿ ಹಾಗೂ ಸಿಬ್ಬಂದಿ ಸೇರಿದಂತೆ ಖಡಕ್ ಗಲ್ಲಿಯ ಹಿರಿಯರು ಇದ್ದರು.